ADVERTISEMENT

ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವದಲ್ಲಿ ಚಿಣ್ಣರ ಮೇಳ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:40 IST
Last Updated 8 ಅಕ್ಟೋಬರ್ 2011, 9:40 IST

ಚಿತ್ರದುರ್ಗ: ಕಿಕ್ಕಿರಿದ ಜನಸಾಗರ, ಹರ್ಷೋದ್ಘಾರ, ಮುಗ್ಧ ಮನಸ್ಸುಗಳ ಪ್ರತಿಭೆಯ ಅನಾವರಣ, ಆನಂದಭಾಷ್ಪ, ಮೈನವಿರೇಳಿಸುವ ಸನ್ನಿವೇಶ...
 
-ಇದು ಗುರುವಾರ ಸಂಜೆ ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆದ ಚಿಣ್ಣರ ಮೇಳದಲ್ಲಿ ಕಂಡು ಬಂದ ದೃಶ್ಯ.

ಭಾಷಣ, ನೃತ್ಯ, ಕರಾಟೆ ಮುಂತಾದ ಸಾಹಸಮಯ ದೃಶ್ಯಗಳು ರೋಚಕಗೊಳಿಸಿದವು. ಭಾಷಣ ಮಾಡಿದ ಚಳ್ಳಕೆರೆಯ ಚಿ. ಜಾಹ್ನವಿ, ಇಂದಿನ ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು. ಭಂಡತನದ ಜೀವನಕ್ಕೆ ಭ್ರಷ್ಟಾಚಾರ ಹಾಸುಹೋಕ್ಕಾಗಿದೆ. ಬೇಕು, ಬೇಕು ಎನ್ನುವ ಬಯಕೆ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ನಮ್ಮ ದೇಶದ ಹೃದಯ ಬಡಿತವನ್ನು ಒಂದುಗೂಡಿಸಿದ ಘಟನೆ ಅಣ್ಣಾಹಜಾರೆ ಅವರ ಭ್ರಷ್ಟಾಚಾರ ನಿರ್ಮೂಲನ ಆಂದೋಲನ ಎಂದು ನುಡಿದರು.

ಯಡಹಳ್ಳಿಯ ಬಾಲಕ ಚಿ. ಬಸವಸ್ವರೂಪ್ ಮಾತನಾಡಿ, ದಯವಿಲ್ಲದ ಧರ್ಮ ಅದಾವುದಯ್ಯಾ? ಎಂದು ಪ್ರಶ್ನಿಸಿದ ಬಸವಣ್ಣ ದಯವೇ ಧರ್ಮದ ಮೂಲವಯ್ಯಾ ತಿಳಿ ಹೇಳಿದರು ಎಂದು ವಿವರಿಸಿದರು.

ಮಕ್ಕಳ ಪ್ರತಿಭೆಯಿಂದ ರೋಮಾಂಚನಗೊಂಡು ಮಾತನಾಡಿದ ನಟಿ ಭಾರತಿ ವಿಷ್ಣುವರ್ಧನ್, ಮಕ್ಕಳ ಪ್ರತಿಭೆಯ ಮುಂದೆ ನಾವೆಷ್ಟೇ ದೊಡ್ಡವರಾದರೂ ಅದು ಸಮಾನವಲ್ಲಾ ಎಂದು ಮಕ್ಕಳ ಕಲೆಯೊಳಗಿನ ಪಾತ್ರದಲ್ಲಿ ತಮ್ಮ ಪತಿ ವಿಷ್ಣುವರ್ಧನ್‌ರನ್ನು ನೆನಪಿಸಿಕೊಂಡರು.

ನಿರ್ಮಾಪಕ, ನಿರ್ದೇಶಕ, ಮತ್ತು ಕಲಾವಿದ ಎಸ್. ಶಿವರಾಂ ಮಾತನಾಡಿ, ಯಾವ ದೃಷ್ಟಿಯಿಂದಲೂ ಮೈಸೂರು ದಸರಾಕ್ಕಿಂತಲೂ ಕಡಿಮೆಯಿಲ್ಲದ ಶರಣ ಸಂಸ್ಕತಿ ಉತ್ಸವ ಅತ್ಯಂತ ಅಪರೂಪವಾದದು.  ಮುರುಘಾಮಠದಲ್ಲಿ ಅರಳುವ ಪ್ರತಿಭೆಗಳನ್ನು ಗುರುತಿಸಿದ್ದು ಅವಿಸ್ಮರಣೀಯ. ಒಂದೊಂದು ಪ್ರತಿಭೆಯು ಅಪರೂಪದ ಕಲೆಯುಳ್ಳದ್ದು  ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ, ಬಸವಣ್ಣನವರ ವಚನಗಳನ್ನು  ಎಲ್ಲರೂ ಹೇಳುತ್ತಾರೆ. ಆದರೆ, ಆ ವಚನಗಳ ಪಾಲನೆ ಮಾಡುವವರು ಕಡಿಮೆ ಎಂದು ವಿಷಾದ ವ್ಯಕ್ತಪಡಿಸಿದರು. ಗುಲ್ಬರ್ಗ ವಿಭಾಗದ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

ಚಿ. ಪದ್ಮಶ್ರೀ, ಚಿ. ರಕ್ಷಿತ ಕುಲಕರ್ಣಿ, ಚಿ.ಎಸ್.ಆರ್. ಪ್ರಿಯಾಂಕ, ಕೊಪ್ಪ, ಚಿ. ಶ್ರೇಯ. ಆರ್. ಭಟ್, ಕೊಪ್ಪ ಇವರು ನೃತ್ಯಕಾರ್ಯಕ್ರಮ ನಡೆಸಿಕೊಟ್ಟರು. ಚಿ.ಎಂ.ಸುಹಾಸ್ `ಈ ಭೂಮಿ ಬಣ್ಣದ ಬುಗುರಿ~ ಎನ್ನುವ ಹಾಡನ್ನು ಹಾಡಿ ತಬಲ ಬಾರಿಸಿದರು. ಚಿ.ಎಸ್.ಆರ್. ಅನುಷ್ಕ ಮತ್ತು ಚಿ. ಪೃಥ್ವಿ ಮತ್ತು ಚ. ಹಿರೇಮಠ ವಚನ ಗೀತೆಯನ್ನು ಹಾಡಿ ಜನರನ್ನು ಸಂಗೀತ ಲೋಕಕ್ಕೆ ಕರೆದುಕೊಂಡು ಹೋದರು.

ಹಿರೇಅರಕುಣಿಯ ಬಾಲಕಿಯರು ಯೋಗಾಸನ ಮತ್ತು ಮಲ್ಲಕಂಬ ಪ್ರದರ್ಶನ ನೀಡುವುದರೊಂದಿಗೆ ಜನರು ಬೆರಗಾಗುವಂತೆ ಮಾಡಿದರು. ಎಸ್‌ಜೆಎಂ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕತಿಕ ಕಾರ್ಯಕ್ರಮ ನಡೆಸಿಕೊಟ್ಟರು. 
ಮುರುಘಾಮಠಕ್ಕೆ ಅನಾಥವಾಗಿ ಬಂದು `ಸಂಸ್ಕೃತಿ~ ಎನ್ನುವ ಹೆಸರನ್ನು ಪಡೆದ ಮಗುವಿನ ಹುಟ್ಟು ಹಬ್ಬವನ್ನು ಕಿಕ್ಕಿರಿದ ಜನಸಮೂಹದ ಮಧ್ಯೆ ಆಚರಿಸಲಾಯಿತು.

ಮೂರು ವರ್ಷದ ಬಾಲಕ ಮೈಸೂರಿನ ಚಿ.ಎನ್.ಡಿ. ಸುಮುಖ್, ಶಿವಮೂರ್ತಿ ಮುರುಘಾ ಶರಣರನ್ನು ಕಾರಿನಲ್ಲಿ ಕೂರಿಸಿಕೊಂಡು ಚಾಲನೆ ಮಾಡಿ ತನ್ನ ಸಾಹಸ ಪ್ರದರ್ಶಿಸಿದ. ದೀಪ, ನಿವೇದಿತ ಹಾಗೂ ಕನ್ಯಾ ಅವರು ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.