ADVERTISEMENT

ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 7:30 IST
Last Updated 9 ಜೂನ್ 2011, 7:30 IST

ಚಿತ್ರದುರ್ಗ: ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಸಾದಿಕ್ ನಗರದ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಧರಣಿ ನಡೆಸಿ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರಿಗೆ ಮನವಿ ಸಲ್ಲಿಸಿದರು.

ಮೂಲತಃ ಮಾರುತಿ ನಗರದ ನಿವಾಸಿಗಳಾಗಿದ್ದ ತಮ್ಮನ್ನು ಅಲ್ಲಿಂದ ಸ್ಥಳಾಂತರಿಸಿದ್ದರಿಂದ ಸಾದಿಕ್ ನಗರದಲ್ಲಿ ವಾಸಿಸುತ್ತಿದ್ದು, ಬಹುತೇಕ ಮಂದಿ ಕಡುಬಡವರಾಗಿದ್ದಾರೆ. ಮೂರು ತಿಂಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವುದಾಗಿ ನಗರಸಭೆ ನೀಡಿದ್ದ ಭರವಸೆ ಈಡೇರಿಲ್ಲ. ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೇವಲ ಆಶ್ವಾಸನೆ ನೀಡುವುದರಲ್ಲೇ ಸಮಯ ಕಳೆದಿದ್ದಾರೆ ಎಂದು ದೂರಿದರು.

ಸಾದಿಕ್‌ನಗರಕ್ಕೆ ಸ್ಥಳಾಂತರಿಸಿದ ನಂತರ ಅಲ್ಲಿನ ನಿವಾಸಿಗಳಾದ ಮುಸ್ಲಿಂ ಜನಾಂಗದವರು ದೌರ್ಜನ್ಯ ಮಾಡುತ್ತಿದ್ದಾರೆ. ಆದರೂ ಸಹಿಸಿಕೊಂಡು ಸುಮ್ಮನಿದ್ದೇವೆ. ಕೆಲವು ಬಾರಿ ಹಲ್ಲೆ ಸಹ ನಡೆಯುತ್ತಿವೆ. ಆದ್ದರಿಂದ ತಮಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ನಗರಕ್ಕೆ ಹೊಂದಿಕೊಂಡಿರುವ ಮಾಳಪ್ಪನಹಟ್ಟಿಯಲ್ಲಿನ ಆಶ್ರಯ ಮನೆಗಳನ್ನು ತಮಗೆ ವಿತರಿಸಬೇಕು. ಪ್ರಸ್ತುತ ಸಾದಿಕ್‌ನಗರದಲ್ಲಿ ವಾಸಿಸುವುದು ಬಹಳ ಕಷ್ಟಕರವಾಗುತ್ತಿರುವುದರಿಂದ ಬೀದಿಪಾಲಾಗಿರುವ ಕುಟುಂಬಗಳಿಗೆ ಪುನರ್‌ವಸತಿ ಕಲ್ಪಿಸುವುದು ಅಗತ್ಯವಾಗಿದೆ ಎಂದು ಆಗ್ರಹಿಸಿದರು.

ಸಾದಿಕ್ ನಗರದಲ್ಲಿನ ರಸ್ತೆಗಳು ಕಲ್ಲು, ಮುಳ್ಳುಗಳಿಂದ ಕೂಡಿದ್ದು, ಯಾವುದೇ ರೀತಿಯ ಕನಿಷ್ಠ ಸೌಲಭ್ಯಗಳು ಇಲ್ಲ. ಬೀದಿದೀಪಗಳನ್ನು ಸಹ ಅಳವಡಿಸಿಲ್ಲ. ಸೂಕ್ತ ಸೌಲಭ್ಯಗಳು ಇಲ್ಲದ ಕಾರಣ ಹಲವು ಮಕ್ಕಳು ಶಾಲೆಗೆ ತೆರಳದೇ ಬೀದಿಪಾಲಾಗುತ್ತಿದ್ದಾರೆ. ಕೆಲವು ಮಕ್ಕಳು ಮಾತ್ರ ಶಾಲೆಗೆ ತೆರಳುತ್ತಿದ್ದಾರೆ. ಆದ್ದರಿಂದ, ಸಾದಿಕ್ ನಗರದ ನಿವಾಸಿಗಳ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಕೋರಿದರು.

ನಿವಾಸಿಗಳ ಮನವಿ ಆಲಿಸಿದ ಜಿಲ್ಲಾಧಿಕಾರಿ, ಪೌರಾಯುಕ್ತರ ಜತೆ ಚರ್ಚಿಸಿ ಇನ್ನೂ ಒಂದು ವಾರದಲ್ಲಿ ಸೂಕ್ತಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಧರಣಿಯಲ್ಲಿ ಓಂಕಾರಪ್ಪ, ಶಿವಣ್ಣ, ಮಂಜುಳಮ್ಮ, ತಿಪ್ಪಕ್ಕ, ಭಾಗ್ಯಮ್ಮ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.