ADVERTISEMENT

ಮೊಳಕಾಲ್ಮುರು ಪ ಪಂ:ಲೆಕ್ಕ ವ್ಯತ್ಯಾಸಕ್ಕೆ ಸಾಕ್ಷಿಯಾದ ಸಾಮಾನ್ಯಸಭೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 10:55 IST
Last Updated 1 ಜನವರಿ 2012, 10:55 IST

ಮೊಳಕಾಲ್ಮುರು: ಸ್ಥಳೀಯ ಪಟ್ಟಣ ಪಂಚಾಯ್ತಿಯಲ್ಲಿ ಅನುದಾನ ಖರ್ಚು ಮಾಡಿರುವುದಕ್ಕೆ ಸಮರ್ಪಕವಾಗಿ ಲೆಕ್ಕ ಇಟ್ಟಿಲ್ಲದಿರುವ ವಿಷಯಕ್ಕೆ ಶನಿವಾರ ನಡೆದ ಪ.ಪಂ. ಸಾಮಾನ್ಯಸಭೆಯ ಬಹುತೇಕ ಅವಧಿ ವ್ಯರ್ಥವಾಯಿತು.

ಹಿಂದಿನ ಸಭೆ ನಡಾವಳಿಕೆ ನಂತರ ಚರ್ಚೆಗೆ ಬಂದ ಜಮಾ-ಖರ್ಚು ವಿಷಯದಲ್ಲಿ ಆರಂಭವಾದ ಚರ್ಚೆಯಲ್ಲಿ ಕುಡಿಯುವ ನೀರೆತ್ತುವ ಮೋಟಾರ್‌ಗಳನ್ನು ದುರಸ್ತಿ ಮಾಡಿಸಿರುವುದಕ್ಕೆ ಸರಿಯಾಗಿ ಲೆಕ್ಕವಿಡದಿರುವುದಕ್ಕೆ ಸದಸ್ಯ ಬಿ.ಜಿ. ಸೂರ್ಯನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು. ತಮ್ಮ ಅಧ್ಯಕ್ಷ ಅಧಿಕಾರ ಅವಧಿಯಲ್ಲಿ ಇದಕ್ಕಾಗಿ ಪ್ರತ್ಯೇಕ ಪುಸ್ತಕ ತೆರೆಯಲಾಗಿತ್ತು ಈಗ ಈ ಪುಸ್ತಕವೇ ಮಾಯವಾಗಿದೆ ಎಂದು ದೂರಿದರು.

ಇದಕ್ಕೆ ಬೆಂಬಲಿಸಿದ ಮುಖ್ಯಾಧಿಕಾರಿ ವಾಸಣ್ಣ `ಪ.ಪಂ.ಯಲ್ಲಿ ಯಾವುದೇ ವಿಷಯಕ್ಕೂ ಸರಿಯಾಗಿ ಲೆಕ್ಕವಿಟ್ಟಿಲ್ಲ, ಹಿಂದಿನ ಅಧಿಕಾರಿಗಳು ಬೇಕಾಬಿಟ್ಟಿ ಲೆಕ್ಕ ಪುಸ್ತಕಗಳನ್ನು ಇಟ್ಟುಕೊಂಡಿದ್ದರು. ತಾವು ಇಲ್ಲಿಗೆ ಬಂದ ನಂತರ ಸಮರ್ಪಕ ಮತ್ತು ಪಾರದರ್ಶಕ ಲೆಕ್ಕ ನಿರ್ವಹಣೆಗೆ ಶ್ರಮಿಸುತ್ತಿದ್ದೇನೆ. ಕುಡಿಯುವ ನೀರು ಉಪಕರಣಗಳಿಗೆ ಸಂಬಂಧ ಪಟ್ಟಂತೆ ಬೇಕಾಬಿಟ್ಟಿ ಲೆಕ್ಕವಿಡಲಾಗಿದೆ~ ಎಂದು ಹೇಳಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಲೆಕ್ಕವಿಭಾಗದ ಬಸಣ್ಣ `ಪ.ಪಂ. ಸಿಬ್ಬಂದಿ ಕಳ್ಳರಲ್ಲ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಸದಸ್ಯರು ಹೇಳಿದ ಹಾಗೆ ಕೇಳಿದ್ದೇವೆ ಎಂದರು.

ಉಪಾಧ್ಯಕ್ಷ ಜಿಂಕಾ ಶ್ರೀನಿವಾಸ್ ಮಾತನಾಡಿ, `ಕಳೆದ 20 ವರ್ಷಗಳಿಂದಲೂ ಸ್ಟೋರ್‌ರೂಂ ಲೆಕ್ಕ ಸರಿಯಾಗಿ ಇಟ್ಟಿಲ್ಲ ಎಂದಾಗ, ಅಧ್ಯಕ್ಷೆ ಸಮೀರಾನಾಜ್ ಉತ್ತರಿಸಿ `ಮೋಟಾರ್‌ಗಳು ಕೆಟ್ಟಿರುವುದು ನಿಜ, ಅವುಗಳನ್ನು ರಿಪೇರಿ ಮಾಡಿಸಿರುವುದು ಅಷ್ಟೇ ಸತ್ಯ ಎಂದು ಮಾತಿನ ಚಕಮಕಿಗೆ ತೆರೆ ಎಳೆದರು.

ಸಮರ್ಪಕ ಲೆಕ್ಕ ಮತ್ತು ಹಣ ಬಿಡುಗಡೆ ಚರ್ಚೆಯಲ್ಲಿ ಮಾತನಾಡಿದ ಸದಸ್ಯ ಜಿ. ಪ್ರಕಾಶ್, `ಸದಸ್ಯರಿಗೂ ಕೆಟ್ಟು ಹೋಗಿರುವ ನೀರೆತ್ತುವ ಮೋಟರ್‌ಗಳಿಗೂ ಅವಿನಾವಭವ ಸಂಬಂಧವಿದೆ~ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ `ಪಟ್ಟಣದಲ್ಲಿ ಅಳವಡಿಸಿರುವ ಎಲ್ಲಾ ನೀರೆತ್ತುವ ಮೋಟಾರ್‌ಗಳು ಲೋಕಲ್ ಕಂಪೆನಿಗೆ ಸೇರಿವೆ, ಗುಣಮಟ್ಟ ಕಂಪೆನಿಯ ಮೋಟಾರ್ ಒಂದೂ ಇಲ್ಲ~ ಎಂದರು.

`ನಮ್ಮ-ಮನೆ~ ಯೋಜನೆಗೆ ಸಂಬಂಧಪಟ್ಟಂತೆ ಕೆಲ ನ್ಯೂನ್ಯತೆಗಳು ಕಂಡುಬಂದಿರುವ ಪರಿಣಾಮ ಫಲಾನುಭವಿಗಳಿಗೆ ನೀಡಬೇಕಾದ ಸಹಾಯಧನವನ್ನು ಬ್ಯಾಂಕ್‌ಗೆ ವರ್ಗಾವಣೆ ಮಾಡುವುದನ್ನು ತಡೆ ಹಿಡಿಯಲಾಗಿದೆ. ಸ್ವಯಂಸೇವಾ ಸಂಸ್ಥೆಗೆ ನೀಡಿರುವ ಆರೋಗ್ಯ ತಪಾಸಣೆ ಕಾರ್ಯವನ್ನು ಸೂಕ್ತ ಪ್ರಚಾರ ನಂತರ ಮಾಡುವಂತೆ ಸೂಚಿಸಲಾಗಿದೆ ಎಂದು ಮುಖ್ಯಾಧಿಕಾರಿ ಸಭೆಗೆ ಉತ್ತರಿಸಿದರು. ಸಭೆಯಲ್ಲಿ ಪ.ಪಂ. ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.