ಚಿತ್ರದುರ್ಗ: ‘ನಮ್ಮದು ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಯುವ ಸಂಪನ್ಮೂಲ ಅಧಿಕವಾಗಿದೆ. ಆದರೆ ಮತದಾನದ ವಿಚಾರದಲ್ಲಿ ಮಾತ್ರ ಯುವ ಸಮೂಹ ಜಾಗೃತಗೊಳ್ಳದಿರುವುದು ವಿಷಾದದ ಸಂಗತಿ’ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಹಂಚಾಟೆ ಸಂಜೀವ್ ಕುಮಾರ್ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸ್ವೀಪ್ ಸಮಿತಿ, ಸರ್ಕಾರಿ ಕಲಾ ಕಾಲೇಜು ಹಾಗೂ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ಮಾಡುವುದು ನಿಜವಾದ ದೇಶಪ್ರೇಮ. ಏಕ ಕಾಲದಲ್ಲಿ ಹಕ್ಕು, ಕರ್ತವ್ಯ ಮತ್ತು ಅಧಿಕಾರ ಚಲಾಯಿಸಲು ಇರುವ ಏಕೈಕ ಮಾಧ್ಯಮವೇ ಮತದಾನ. ನಾಗರಿಕರಿಗೆ ಮತದಾನ ಎನ್ನುವುದು ಬ್ರಹ್ಮಾಸ್ತ್ರವಿದ್ದಂತೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ಮುಖ್ಯ ತಳಹದಿ ಎಂದರೆ ಮತದಾನ. ಆದರೆ, ಈ ಬಗ್ಗೆ ಜನರಲ್ಲಿ ಸರಿಯಾದ ಜಾಗೃತಿ ಇಲ್ಲ. ನ್ಯಾಯಯುತ, ಮುಕ್ತ, ನಿರ್ಭೀತ, ಆಮಿಷರಹಿತ ಚುನಾವಣೆಗಳು ನಡೆಯಬೇಕು. ಒಂದು ವೇಳೆ ನ್ಯಾಯಸಮ್ಮತ ಮತದಾನ ನಡೆಯದೇ ಇದ್ದರೆ ಅದು ಪ್ರಜಾಪ್ರಭುತ್ವಕ್ಕೆ ಅಪಮಾನ ಎಸಗಿದಂತೆ’ ಎಂದರು.
ಇಡೀ ಭಾರತದಲ್ಲಿ ಎಲ್ಲೂ ನೂರರಷ್ಟು ಮತದಾನ ಆಗುತ್ತಿಲ್ಲ. ಪ್ರಜ್ಞಾವಂತರು, ಸುಶಿಕ್ಷಿತರಲ್ಲಿರುವ ಉದಾಸೀನ ಮನೋಭಾವ ಕಾರಣ’ ಎಂದರು.
ಮತದಾನದ ದಿನ ದೊರೆಯುವ ಬಿಡುವಿನ ವೇಳೆಯನ್ನು ರಜೆ ಎಂದು ತಿಳಿದು, ರಜೆಯ ಮಜಾ ಅನುಭವಿಸಲು ಸಜ್ಜಾಗುವ ನಾಗರಿಕರು, ನಮ್ಮ ದೇಶವನ್ನಾಳುವ ಉತ್ತಮ ನಾಯಕರನ್ನು ಆಯ್ಕೆ ಮಾಡಲು ಮತಗಟ್ಟೆ ಕೇಂದ್ರಗಳಿಗೆ ಬರದಷ್ಟು ಸಿನಿಕತನ ಬೆಳೆಸಿಕೊಂಡಿದ್ದಾರೆ. ಇನ್ನೊಂದು ವರ್ಗ ಹಣ, ಹೆಂಡ, ಆಮಿಷಗಳಿಗೆ ಬಲಿಯಾಗಿ, ತಮ್ಮ ಹಕ್ಕನ್ನೇ ಮಾರಿಕೊಳ್ಳುತ್ತಾರೆ. ಇಂಥ ಕೆಟ್ಟ ವ್ಯವಸ್ಥೆಯಿಂದ ಹೊರ ಬಂದು ಮತದಾರರು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತ ಚಲಾಯಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ದೇಶದ ಸಂಪನ್ಮೂಲ ಕೆಲವೇ ವ್ಯಕ್ತಿ ಹಾಗೂ ಕುಟುಂಬಗಳಿಗೆ ಸೀಮಿತವಾಗುತ್ತಿದೆ. ಕುಟುಂಬ ರಾಜಕೀಯ, ಬಂಡವಾಳಶಾಹಿಗಳ ರಾಜಕೀಯ ಹೆಚ್ಚಾಗುತ್ತಿದೆ. ಚುನಾವಣಾ ಆಯೋಗ ಅಭ್ಯರ್ಥಿಯ ವೆಚ್ಚವನ್ನು ₨ ೭೦ಲಕ್ಷಕ್ಕೆ ಮಿತಿಗೊಳಿಸಿದೆ. ಆದರೆ, ಅಭ್ಯರ್ಥಿಗಳು ಅಡ್ಡದಾರಿಯಲ್ಲಿ ಕೋಟಿಗಟ್ಟಲೆ ವ್ಯಯಿಸುತ್ತಾರೆ. ಗೆದ್ದ ನಂತರ ಖರ್ಚು ಮಾಡಿದ ನೂರು ಪಟ್ಟು ಹಣವನ್ನು ದೋಚುತ್ತಾರೆ. ಇಂಥ ಭ್ರಷ್ಟಾಚಾರ ನಿಯಂತ್ರಣವಾಗಬೇಕಾದರೆ, ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ ಉತ್ತಮರನ್ನು ಆಯ್ಕೆ ಮಾಡಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸಿಇಒ ಎನ್.ಮಂಜುಶ್ರೀ ಮಾತನಾಡಿ, ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಹಾಗೂ ದೇಶದ ರಕ್ಷಣೆ ಬಗ್ಗೆ ಚಿಂತಿಸುವಲ್ಲಿ ನೆರವಾಗಬೇಕು. ಕಳೆದ ಬಾರಿ ಇದೇ ಚುನಾವಣೆಯಲ್ಲಿ ಶೇ ೫೪.೪೦ರಷ್ಟು ಮತದಾನ ಆಗಿದೆ. ದೇಶದಲ್ಲಿ ಶೇ ೫೮ರಷ್ಟು ಮತದಾನ ಆಗಿದೆ. ಆದ್ದರಿಂದ ನೂರರಷ್ಟು ಮತದಾನ ಮಾಡುವ ಮೂಲಕ ನಕಲಿ ಮತದಾನ ಸೇರಿದಂತೆ ಮತದಾನದಲ್ಲಿನ ಕೆಲ ಲೋಪ ದೋಷಗಳನ್ನು ಸರಿಪಡಿಸಬಹುದಾಗಿದೆ ಎಂದರು.
ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಅರಿವು ಮೂಡಿಸಲು ಪ್ರಬಂಧ, ಭಾಷಣ, ರಂಗೋಲಿ ಸೇರಿದಂತೆ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಡಾ.ಜೆ.ಕರಿಯಪ್ಪ ಮಾಳಿಗೆ ಪ್ರಾಸ್ತಾವಿಕ ಮಾತನಾಡಿದರು. ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಪ್ರೊ.ಎಚ್.ಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಮಧುಸೂದನ್, ಡಾ.ನಟರಾಜ್, ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್, ಡಾ.ಎಸ್.ತಿಪ್ಪೇಸ್ವಾಮಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.