ADVERTISEMENT

ರಜೆ ಮುಗಿಯಿತು; ಶಾಲೆ ಪ್ರಾರಂಭವಾಯ್ತು

ಹಾಜರಾತಿ ಕಡಿಮೆ, ಉಚಿತ ಪಠ್ಯಪುಸ್ತಕ- ಸಮವಸ್ತ್ರ ವಿತರಣೆ, ಮಕ್ಕಳಿಗೆ ಸಿಹಿಯೂಟ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 7:00 IST
Last Updated 1 ಜೂನ್ 2013, 7:00 IST

ಚಿತ್ರದುರ್ಗ: ಎರಡು ತಿಂಗಳ ರಜೆ ಸಂಭ್ರಮ ಮುಗಿಸಿದ ವಿದ್ಯಾರ್ಥಿಗಳು ಶುಕ್ರವಾರದ ಶುಭ ದಿನದಂದು ಶಾಲೆಗೆ ತೆರಳಿದರು.
ಸರ್ಕಾರಿ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮೊದಲ ದಿನವಾದ ಶುಕ್ರವಾರ ಮಕ್ಕಳಿಗೆ ಮಧ್ಯಾಹ್ನ ಸಿಹಿಯೂಟ ಬಡಿಸಲಾಯಿತು. ಉಚಿತ ಸಮವಸ್ತ್ರ ಮತ್ತು ಪುಸ್ತಕ ಸಹ ಮೊದಲ ದಿನವೇ ವಿತರಿಸಲಾಯಿತು.

ಶಾಲೆಗಳಲ್ಲಿ ಎಸ್‌ಡಿಎಂಸಿ ಸಭೆ ಕರೆದು ವರ್ಷವಿಡಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಯೋಜನೆ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಕೆಳಗೋಟೆ ಶಾಲೆ: ನಗರದ ಕೆಳಗೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಟಿ.ಬಾಬುರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು.

ಸರ್ಕಾರ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಬಿಸಿ ಊಟವನ್ನು ನೀಡುತ್ತಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.

ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಿಸಲಾಯಿತು. ಡಿಡಿಪಿಐ ಎಚ್.ಮಂಜುನಾಥ್, ಚಿತ್ರದುರ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಕೆ.ರವಿಶಂಕರರೆಡ್ಡಿ, ಅಕ್ಷರದಾಸೋಹದ ಜಿಲ್ಲಾ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಚಿತ್ರದುರ್ಗ ತಾಲ್ಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರ ಕ್ಷೇತ್ರ ಸಮನ್ವಯಾಧಿಕಾರಿ ಪಿ.ಎನ್.ಮಂಜುಳಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಳಗೋಟೆಯ ಎಸ್‌ಡಿಎಂಸಿ ಅಧ್ಯಕ್ಷ ಎನ್.ಶ್ರೀನಿವಾಸ್, ಶಾಲೆಯ ಮುಖ್ಯ ಶಿಕ್ಷಕ ಆರ್.ಎನ್.ಶಿವರುದ್ರಪ್ಪ ಉಪಸ್ಥಿತ ರಿದ್ದರು. ಬಿ.ಆರ್.ಪಿ. ಚನ್ನಯ್ಯ ಕಾರ್ಯಕ್ರಮ ನಿರೂಪಿಸಿದರು.

ಬೊಮ್ಮವ್ವನಾಗ್ತಿಹಳ್ಳಿ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಕೈಗೊಳ್ಳಲಾಯಿತು.

ವಿದ್ಯಾರ್ಥಿಗಳು ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸಿದರು. ನಂತರ, ಒಂದನೇ ತರಗತಿಗೆ ಹತ್ತು ಮಕ್ಕಳು ದಾಖಲಾದ ಪ್ರಯುಕ್ತ ಹತ್ತು ಸಸಿಗಳನ್ನು ನೆಡಲಾಯಿತು. ಗ್ರಾಮದ ಮುಖಂಡ ಕೃಷ್ಣಪ್ಪ ಮಕ್ಕಳಿಗೆ ಸರ್ಕಾರದಿಂದ ನೀಡುವ ಉಚಿತ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿತರಿಸಿದರು.

ಮುಖ್ಯ ಶಿಕ್ಷಕ ಕೆ.ಗಂಗಾಧರಪ್ಪ, ಸಹ ಶಿಕ್ಷಕ ಡಿ.ತಿಪ್ಪೇಶಪ್ಪ, ಎಚ್.ಧನಂಜಯ ಉಪಸ್ಥಿತರಿದ್ದರು.

ಹಿರಿಯೂರು
ತಾಲ್ಲೂಕಿನಲ್ಲಿ ಶುಕ್ರವಾರದಿಂದ ಪ್ರಾಥಮಿಕ, ಪ್ರೌಢ ಹಾಗೂ ಪಿಯು ತರಗತಿಗಳನ್ನು ತೋರಣ ಕಟ್ಟಿ, ಸಿಹಿಯೂಟ ತಯಾರಿಸಿ ಆರಂಭಿಸಲಾಯಿತಾದರೂ ವಿದ್ಯಾರ್ಥಿಗಳ ಹಾಜರಾತಿ ಮಾತ್ರ ಹೇಳಿಕೊಳ್ಳುವಷ್ಟು ಇರಲಿಲ್ಲ.

ನಗರದ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ರಾಮಯ್ಯ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಿ ಮಾತನಾಡಿ, `ಖಾಸಗಿ ಶಾಲೆಗಳಿಗಿಂತ ಹೆಚ್ಚು ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇತ್ತೀಚೆಗೆ ಸರ್ಕಾರಿ ಶಾಲೆಗಳಿಗೆ ಮಕ್ಕಳ ಪ್ರವೇಶ ಪ್ರಮಾಣ ತುಂಬಾ ಕಡಿಮೆಯಾಗುತ್ತಿದ್ದು, ಹಿಂದಿನ ಸರ್ಕಾರ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿತ್ತು. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿದರೆ ಶಾಲೆಗಳು ಮುಚ್ಚದಂತೆ ತಡೆಯಬಹುದು. ಸರ್ಕಾರಿ ಶಾಲೆಗಳಿಗೆ ಆಯ್ಕೆಯಾಗುವ ಶಿಕ್ಷಕರು ಪ್ರತಿಭಾವಂತರಿದ್ದು, ತಮ್ಮ ಪ್ರತಿಭೆಯನ್ನು ಬೋಧನೆಯಲ್ಲಿ ತೋರಿಸಬೇಕು' ಎಂದು ಕರೆ ನೀಡಿದರು.

ಪುರಸಭಾ ಸದಸ್ಯ ಶಿವುಯಾದವ್ ಮಾತನಾಡಿ, `ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಕ್ಕಳಿಗೆ ಉಚಿತ ಸಮವಸ್ತ್ರ, ಟೈ, ಬೆಲ್ಟ್ ಕೊಡಿಸುತ್ತೇನೆ. ಸರ್ಕಾರಿ ಶಾಲೆಗಳ ಮಕ್ಕಳು ಎರಡನೇ ದರ್ಜೆ ಪ್ರಜೆಗಳಾಗದಂತೆ ಎಚ್ಚರ ವಹಿಸುವ ಹೊಣೆ ಶಿಕ್ಷಕರ ಮೇಲಿದೆ' ಎಂದರು.

ಕ್ಲಸ್ಟರ್ ಸಿಆರ್‌ಪಿ ಸಿ.ಈರಣ್ಣ ಮಾತನಾಡಿ, `ಸರ್ಕಾರ ರೂಪಿಸಿರುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಶಾಲಾ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ' ಎಂದರು.

ಮುಖ್ಯ ಶಿಕ್ಷಕ ಗುರುಸಿದ್ದಪ್ಪ  ಸ್ವಾಗತಿಸಿದರು. ಎನ್.ಪಿ.ಮಹೇಶ್ ವಂದಿಸಿದರು.

ನಾಕೋಡ ಭೈರವ ಶಾಲೆ: ನಗರದ ನೆಹರೂ ಮೈದಾನದಲ್ಲಿರುವ ನಾಕೋಡ ಭೈರವ ಹಿಂದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಚಂದ್ರಮ್ಮ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ- ಸಮವಸ್ತ್ರ ವಿತರಿಸಿದರು.

ದಾನಿ ಗಣಪತ್‌ಲಾಲ್ ಜೀ ವಡೇರ, ಮುಖ್ಯ ಶಿಕ್ಷಕಿ ಜರೀನಾ ಖಾನಂ, ಜಿ.ಬಿ. ಪರಮೇಶ್ವರಪ್ಪ, ಬಿ.ಎಸ್. ರಾಜಶೇಖರಪ್ಪ, ಡಿ.ಜಿ. ಶ್ರೀನಿವಾಸ್ ಹಾಜರಿದ್ದರು.

ಗೋಪಾಲಪುರ: ನಗರದ ಗೋಪಾಲಪುರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ಪುರಸಭಾ ಸದಸ್ಯ ರಾಜು, ಆರ್.ರವಿಚಂದ್ರನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಯ್ಯ, ಮುಖ್ಯ ಶಿಕ್ಷಕ ಎಂ.ಜಿ.ಗೋಪಾಲ್, ವಿ.ರಂಗನಾಥ್, ಹನುಮಂತರೆಡ್ಡಿ, ಶೇಖರಪ್ಪ, ಶಶಿಕಲಾ, ಕವಿತಾ, ರಾಜಮ್ಮ, ಮೆಥಾಲಿನ್, ಈರಣ್ಣ ಉಪಸ್ಥಿತರಿದ್ದರು. ನಾಗರಾಜಪ್ಪ ಸ್ವಾಗತಿಸಿದರು. ಗಂಗಾಧರಪ್ಪ ವಂದಿಸಿದರು.

ಪರಶುರಾಂಪುರ
`ಅರ್ಹ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಿ, ನಿಯಮಿತವಾಗಿ ಹಾಜರಾಗಿ ಗುಣಾತ್ಮಕ ಶಿಕ್ಷಣ ಪಡೆಯುವಂತೆ ಶಿಕ್ಷಕರು ನೋಡಿಕೊಳ್ಳಬೇಕು' ಎಂದು ಬಿಇಒ ಡಿ.ತಿಮ್ಮಣ್ಣ ತಿಳಿಸಿದರು.

ಸಮೀಪದ ಹುಳ್ಳಿಕಟ್ಟೆದೊಡ್ಡ ಗೊಲ್ಲರಹಟ್ಟಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವ' ನೆರವೇರಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣಪ್ಪ ಮಾತನಾಡಿ, ಸರ್ಕಾರದ ವಿವಿಧ ಸೌಲಭ್ಯ ಉಪಯೋಗಿಸಿಕೊಂಡು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಜೀವನ ಬದಲಾಯಿಸಿಕೊಳ್ಳಬೇಕು ಎಂದರು.

ಬಿಆರ್‌ಪಿ ಮಲ್ಲಿಕಾರ್ಜುನ್, ಎಸ್‌ಡಿಎಂಸಿ ಅಧ್ಯಕ್ಷ ಕರಿಯಣ್ಣ, ಸದಸ್ಯ ಚಿಕ್ಕಣ್ಣ, ಸಿಆರ್‌ಪಿ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿ ಡಿ.ಟಿ.ಹನುಮಂತರಾಯ, ಮುಖ್ಯಶಿಕ್ಷಕ ಸೋಮಶೇಖರ್, ಶಿಕ್ಷಕರಾದ ಆಂಜನೇಯ, ಮಲ್ಲಿಕಾರ್ಜುನ, ಈರಣ್ಣ, ಹನುಮಂತರಾಯ, ಜಗದೀಶ್ ಇದ್ದರು.

ವಿವಿಧೆಡೆ ಪ್ರಾರಂಭೋತ್ಸವ: ಸಮೀಪದ ದೊಡ್ಡಬೀರನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಮಕೃಷ್ಣಪ್ಪ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಿ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಿದರು.
ಮುಖ್ಯಶಿಕ್ಷಕ ಟಿ.ಎಚ್.ಬಸವರಾಜ್ ಹಾಗೂ ಶಿಕ್ಷಕರು, ಪೋಷಕರು ಹಾಜರಿದ್ದರು.

ಉದ್ಘಾಟನೆ: ಪ್ರಾಥಮಿಕ ಹಂತದಿಂದಲೇ ಮಕ್ಕಳ ಕಲಿಕೆಗೆ ಆದ್ಯತೆ ನೀಡಿ ಉತ್ತಮ ಶಿಕ್ಷಣ ಕೊಡುವುದರಿಂದ ಒಳ್ಳೆಯ ಸಮಾಜವನ್ನು ನಿರ್ಮಿಸಬಹುದು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಇ.ಎನ್.ವೆಂಕಟೇಶ್ ತಿಳಿಸಿದರು.

ಇಲ್ಲಿನ ಬಾಲಕ- ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ `ಶಾಲಾ ಪ್ರಾರಂಭೋತ್ಸವ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಯೆಟ್‌ನ ಉಪನ್ಯಾಸಕ ಗೋವಿಂದಪ್ಪ ಮಾತನಾಡಿ, ಮಕ್ಕಳ ಹಾಜರಾತಿಯನ್ನು ಉತ್ತಮಪಡಿಸಿಕೊಳ್ಳಲು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷರಾದ ರಫಿ, ಬಿ.ಟಿ.ತಿಪ್ಪೇರುದ್ರಪ್ಪ, ಮುಖ್ಯ ಶಿಕ್ಷಕರಾದ ಚಂದ್ರಣ್ಣ, ಮೂಡಲಗಿರಿಯಪ್ಪ, ಹಸಿನಾಬಿ ಹಾಗೂ ಶಿಕ್ಷಕರು ಹಾಜರಿದ್ದರು.

ಧರ್ಮಪುರ
ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಅನೇಕ ಯೋಜನೆಗಳನ್ನು ರೂಪಿಸಿದೆ. ಇವುಗಳ ಸಮರ್ಪಕ ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಉತ್ತಮ ಪಡಿಸಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಎನ್.ಪ್ರಕಾಶ್ ತಿಳಿಸಿದರು.

ಸಮೀಪದ ವೇಣುಕಲ್ಲುಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪಠ್ಯ ಪುಸ್ತಕ ವಿತರಿಸಿ ಮಾತನಾಡಿದರು.

ಪೋಷಕರು ತಪ್ಪದೇ ಮಕ್ಕಳನ್ನು ಶಾಲೆಗೆ ಕಳುಹಿಸಿ. ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದುಎಸ್‌ಡಿಎಂಸಿ ಸದಸ್ಯ ಪಾತಲಿಂಗಪ್ಪ ತಿಳಿಸಿದರು.

ಎಸ್‌ಡಿಎಂಸಿ ಉಪಾಧ್ಯಕ್ಷ ಡಿ.ದೇವರಾಜು, ಸ್ವಾಮಿಲಿಂಗಪ್ಪ, ವಿ.ಸಿದ್ದೇಶ್, ಗ್ರಾಮ ಪಂಚಾಯ್ತಿ ಸದಸ್ಯ ತಿಪ್ಪೇಸ್ವಾಮಿ,             ವಿಜಯಮ್ಮ, ಭಾಗ್ಯಮ್ಮ, ಮಲ್ಲಿಕಾರ್ಜುನಪ್ಪ, ನಾಗರಾಜು, ಮುಖ್ಯ ಶಿಕ್ಷಕ ವಿ.ತಿಪ್ಪೇಸ್ವಾಮಿ, ರಂಗಣ್ಣ, ಮಧು, ಪ್ರದೀಪ್‌ಕುಮಾರ್, ಹರೀಶ್, ಕಲ್ಲೇಶ್, ಗೋವಿಂದಪ್ಪ ಉಪಸ್ಥಿತರಿದ್ದರು.

ಚಿಕ್ಕಜಾಜೂರು
ಒಂದೂವರೆ ತಿಂಗಳ ಬೇಸಿಗೆ ರಜೆಯನ್ನು ಕಳೆದ ಮಕ್ಕಳು ಶುಕ್ರವಾರ ಮರಳಿ ಶಾಲೆಗೆ ಉತ್ಸಾಹದಿಂದಲೇ ಬಂದರು. ಶಾಲೆಗಳಲ್ಲಿ ತಳಿರು ತೋರಣ ಕಟ್ಟಿ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು. ಶಾಲೆಗೆ ಬಂದ ಮಕ್ಕಳನ್ನು ಶಾಲಾ ಶಿಕ್ಷಕ ವರ್ಗ ಆದರದಿಂದ ಸ್ವಾಗತಿಸಿತು.

ನಂತರ, ಮಕ್ಕಳೊಂದಿಗೆ ತರಗತಿಗಳು ಆರಂಭವಾಗಿವೆ. `ಮಕ್ಕಳನ್ನು ಶಾಲೆಗೆ ಕರೆತನ್ನಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಿ, ಶಿಕ್ಷಣ ನಮ್ಮ ಹಕ್ಕು' ಎಂಬ ಘೋಷಣೆಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಮಕ್ಕಳು ಶಾಲೆಗೆ ಹಿಂತಿರುಗುತ್ತಲೇ ಶಿಕ್ಷಕರು ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಿದರು.

ನಂತರ, ಮಕ್ಕಳಿಗೆ ಸಿಹಿ ಊಟವನ್ನು ಬಡಿಸಲಾಯಿತು. ಬಿ.ದುರ್ಗ ಹೋಬಳಿಯ ಎಲ್ಲಾ ಕ್ಲಸ್ಟರ್‌ಗಳ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕರು, ಶಿಕ್ಷಕ ವರ್ಗ, ಎಸ್‌ಡಿಎಂಸಿ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು ಹಾಗೂ ಪೋಷಕರು ಶಾಲಾ ಆರಂಭೋತ್ಸವದ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವರದಿಗಳು ಬಂದಿವೆ.

ಚಳ್ಳಕೆರೆ
ಬಾಲಕಿಯರ ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇಂತಹ ವಸತಿಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆದು ಅತ್ಯುನ್ನತ ಸಾಧನೆ ಮಾಡಬೇಕು ಎಂದು ಬಿಆರ್‌ಸಿ ಎಸ್.ಸುರೇಶ್ ಸಲಹೆ ನೀಡಿದರು.

ಪಟ್ಟಣದ ಕಸ್ತೂರ ಬಾ ಗಾಂಧಿ ಸರ್ಕಾರಿ ಬಾಲಕಿಯರ ವಸತಿಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾಭ್ಯಾಸದಿಂದ ವಂಚಿತರಾಗಿ ಅರ್ಧಕ್ಕೆ ಶಾಲೆ ಬಿಟ್ಟ ಬಾಲಕಿಯರನ್ನು ಕರೆತಂದು ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಇಲ್ಲಿನ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಮಕ್ಕಳು ವಿದ್ಯಾಭ್ಯಾಸದ ಸಮಯದಲ್ಲಿ ಬೇರೆಡೆಗೆ ತಮ್ಮ ಆಲೋಚನೆಗಳನ್ನು ಹರಿಯಬಿಡದೇ ಓದುವ ಕಡೆಗೆ ಹೆಚ್ಚು ಆಸಕ್ತರಾಗಬೇಕು ಎಂದು ನುಡಿದರು.

ಕೆ.ಎ.ಮೂರ್ತಪ್ಪ, ವಸತಿಶಾಲೆಯ ಮುಖ್ಯ ಶಿಕ್ಷಕಿ ಎಂ.ಎನ್.ಶಿವಲೀಲಾ, ಸಿಆರ್‌ಪಿಗಳಾದ ಮಲ್ಲಿಕಾರ್ಜುನ್, ನಾಗರಾಜು, ಮಂಜುನಾಥಾಚಾರಿ, ತಿಮ್ಮಣ್ಣ, ಪಿ.ತಿಪ್ಪೇಸ್ವಾಮಿ, ಸರಸ್ವತಮ್ಮ, ಗುರ‌್ರಪ್ಪರೆಡ್ಡಿ ಹಾಗೂ ಶಾಲೆಯ ಸಹ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.