ADVERTISEMENT

ರೈಲ್ವೆ ಬಜೆಟ್ ಕೊಡುಗೆ.ಮಧ್ಯ ಕರ್ನಾಟಕದ ಜನತೆಗೆ ಸಂತಸ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 8:30 IST
Last Updated 26 ಫೆಬ್ರುವರಿ 2011, 8:30 IST

ಚಿತ್ರದುರ್ಗ: ಬಹುದಿನಗಳ ಬೇಡಿಕೆಯಾದ ದಾವಣಗೆರೆ -ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕೆ ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಅನುಮೋದನೆ ದೊರೆತಿರುವುದು ಮಧ್ಯಕರ್ನಾಟಕ ಜನತೆಯಲ್ಲಿ ಸಂತಸ ಮೂಡಿಸಿದೆ.ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಪಟ್ಟರು.

ರೈಲ್ವೆ ಬಜೆಟ್‌ನಲ್ಲಿ ಈ ಮಾರ್ಗಕ್ಕೆ ಅನುಮೋದನೆ ನೀಡಿರುವುದಕ್ಕೆ ಮಾಜಿ ಸಂಸದ ಮತ್ತು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕೋದಂಡರಾಮಯ್ಯ ಹರ್ಷ ವ್ಯಕ್ತಡಿಸಿದ್ದಾರೆ.‘ಯೋಜನಾ ಆಯೋಗದ ಅನುಮೋದನೆ ಪಡೆದ ನಂತರ ಈ ಯೋಜನೆಗೆ ಬಜೆಟ್‌ನಲ್ಲಿ ಅನುಮೋದನೆ ದೊರೆತಿದೆ. ಇದಕ್ಕಾಗಿ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ. ಜತೆಗೆ ರಾಜ್ಯ ಬಜೆಟ್‌ನಲ್ಲಿ ಪ್ರಸ್ತುತ ಜಾರಿಯಲ್ಲಿರುವ ರೈಲ್ವೆ ಯೋಜನೆಗಳಿಗೆ  ರೂ478 ಕೋಟಿ ಮತ್ತು ಹೊಸ ರೈಲ್ವೆ ಯೋಜನೆಗಳಿಗೆ ರೂ 487 ಕೋಟಿ ಮೀಸಲಿಟ್ಟಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇವೆ’ ಎಂದು ಕೋದಂಡರಾಮಯ್ಯ ತಿಳಿಸಿದ್ದಾರೆ.

‘ಸರ್ಕಾರ ತ್ವರಿತಗತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳನ್ನು ಆರಂಭಿಸಬೇಕು ಮತ್ತು ರೈಲ್ವೆ ಇಲಾಖೆ ಕಚೇರಿಗಳನ್ನು ತೆರೆಯಬೇಕು. ಈ ಯೋಜನೆಯನ್ನು 5 ವರ್ಷಗಳ ಒಳಗೆ ಮುಗಿಸಲು ಕಾಲಮಿತಿ ಹಾಕಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.ರೈಲ್ವೆ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಸಂಸದ ಜನಾರ್ದನಸ್ವಾಮಿ, ದಾವಣಗೆರೆ- ಚಿತ್ರದುರ್ಗ- ತುಮಕೂರು ರೈಲ್ವೆ ಯೋಜನೆಯನ್ನು ಬಜೆಟ್‌ನಲ್ಲಿ ಸೇರಿಸುವುದು ಸಂತಸದ ವಿಷಯ.
 
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಯೋಜನೆಯ ಶೇ. 50ರಷ್ಟು ವೆಚ್ಚವನ್ನು ಭರಿಸಲು ಒಪ್ಪಿಗೆ ನೀಡಿದ್ದರಿಂದ ರೈಲ್ವೆ ಇಲಾಖೆ ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡಿತು. ಈ ಯೋಜನೆ ಅನುಷ್ಠಾನಗೊಳಿಸಲು ಸಹಕರಿಸಿರುವ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,  ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು, ಜನತೆಗೆ ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.