ADVERTISEMENT

ರೈಲ್ವೆ ಯೋಜನೆಗೆ ಜಮೀನು ನೀಡಿದರೆ ಪುನರ್ವಸತಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 5:50 IST
Last Updated 6 ಜನವರಿ 2014, 5:50 IST

ಚಿತ್ರದುರ್ಗ: ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ ಕೆಲವೆಡೆ ಜಮೀನು ಬಿಟ್ಟುಕೊಡಲು ರೈತರು ಒಪ್ಪಿಗೆ ನೀಡದ ಕಾರಣ ಲೋಕಸಭೆಯಲ್ಲಿ ಹೊಸ ಕಾನೂನು ಜಾರಿಯಾಗಿದ್ದು, ರಾಜ್ಯದಲ್ಲಿ ಇನ್ನು ಅನುಷ್ಠಾನಕ್ಕೆ ಬಂದಿಲ್ಲ ಎಂದು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ರೈಲ್ವೆ ಹೋರಾಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈಲ್ವೆ ಯೋಜನೆಗೆ ರೈತರಿಂದ ಜಮೀನು ಖರೀದಿಸಿದರೆ ಅವರು ನಿರಾಶ್ರಿತರಾಗುತ್ತಾರೆ ಎನ್ನುವ ಉದ್ದೇಶದಿಂದ ಜಮೀನು ನೀಡಿದ ರೈತರಿಗೆ ಪುನರ್ವಸತಿ ಒದಗಿಸುವುದು ಕೇಂದ್ರದ ನೂತನ ಕಾನೂನಿನ ಉದ್ದೇಶ. ಇದರಿಂದ ರೈತರು ತಮ್ಮ ಜೀವನಕ್ಕೆ ಹೊಸ ದಾರಿ ಕಂಡುಕೊಳ್ಳ ಬಹುದಾಗಿದೆ ಎಂದು ಹೇಳಿದರು.

ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ಎದುರಾಗುವ ಸಾಧ್ಯತೆಯಿದ್ದು, ನೀತಿ ಸಂಹಿತೆ ಕಾರಣಕ್ಕಾಗಿ ಯಾವುದೇ ಯೋಜನೆಗಳಿಗೆ ಚಾಲನೆ ದೊರೆಯುವುದಿಲ್ಲ. ಹಾಗಾಗಿ ರೈಲ್ವೆ ಹೋರಾಟ ಸಮಿತಿ ಹೋರಾಟ ಮಾಡಲು ಆಗುವುದಿಲ್ಲ. ಅಲ್ಲಿಯವರೆಗೂ ಸಮಾಧಾನದಿಂದ ಕಾದು ನೋಡೋಣ ಎಂದು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಕಳೆದ ಸಭೆಯ ತೀರ್ಮಾನದಂತೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ನಿಯೋಗ ತೆರಳಿ ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗ ಯೋಜನೆ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಲಾಗಿದೆ. ಈ ಯೋಜನೆಗೆ ಈಗಾಗಲೇ ರೈಲ್ವೆ ಇಲಾಖೆಯಿಂದ ಟೆಂಡರ್ ಆಹ್ವಾನಿಸಿದ್ದು, ನೋಟಿಫಿಕೇಷನ್ ನಂತರ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರಯಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ಪರಿಸ್ಥಿತಿ ಕೊರತೆಯ ಕಾರಣಕ್ಕಾಗಿ ಹೊಸ ಯೋಜನೆಗಳಿಗೆ ಹಣವಿಲ್ಲ ಎಂಬುದಾಗಿ ಹೇಳಿದ್ದಾರೆ. ಆ ಕಾರಣದಿಂದ ಮುಂದಿನ ಬಜೆಟ್ ನಂತರವೇ ರೈಲ್ವೆ ಯೋಜನೆ ಹೋರಾಟ ಚುರುಕುಗೊಳಿಸಲಾಗುವುದು ಎಂದರು.
ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಜನತೆಗೆ ಈ ಯೋಜನೆಯಿಂದ ತುಂಬಾ ಅನುಕೂಲವಾಗಲಿದೆ. ಪ್ರಯಾಣ ದರ ಕಡಿಮೆಯಾಗುವುದರ ಜತೆಗೆ ಸಮಯವು ಉಳಿಯಲಿದೆ. ಅಲ್ಲದೇ ರೈತರು ತಾವು ಬೆಳೆದ ಬೆಳೆಗಳನ್ನು ಬೆಂಗಳೂರು ಅಥವಾ ತುಮಕೂರು ಮಾರುಕಟ್ಟೆಗೆ ಕೊಂಡೊಯ್ಯಲು ಕೂಡ ಸಹಕಾರಿಯಾಗಲಿದೆ ಎಂದು ಹೇಳಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ರಮಾ ನಾಗರಾಜ್ ಮಾತನಾಡಿ, ಮರಡಿಹಳ್ಳಿ ಸಮೀಪಕ್ಕೆ ಈಗಾಗಲೇ ಜಮೀನು ಗುರುತಿಸುವ ಕಾರ್ಯ ಆರಂಭಗೊಂಡಿದ್ದು, ರೈಲ್ವೆ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಸೇರಿಕೊಂಡು ಕೂಡಲೇ ಜಮೀನು ಸರ್ವೇ ಕಾರ್ಯ ಕೈಗೊಂಡು ರೈತರ ಮನವೊಲಿಸಿ ಜಮೀನು ಪಡೆದು ಅವರಿಗೆ ಪರಿಹಾರ ನೀಡುವ ಮೂಲಕ ನೇರ ರೈಲು ಮಾರ್ಗ ಯೋಜನೆ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರವನ್ನು ಅವರು ಒತ್ತಾಯಿಸಿದರು.

ನೀರಾವರಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ, ಮುಖಂಡ ಮುರುಘ ರಾಜೇಂದ್ರ ಒಡೆಯರ್, ಟಿಪ್ಪು ಖಾಸಿಂ ಆಲಿ, ವಕೀಲ ಶಿವುಯಾದವ್, ಜಿ.ಪಂ. ಮಾಜಿ ಅಧ್ಯಕ್ಷೆ ಶಾಂತಮ್ಮ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.