ADVERTISEMENT

ರೋಗ ತಡೆಗೆ ಸಮುದಾಯದ ಸಹಭಾಗಿತ್ವ ಅಗತ್ಯ

ಮನುಮಯ್ಯನಹಟ್ಟಿಯಲ್ಲಿ ಎರಡು ಶಂಕಿತ ಡೆಂಗೆ ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:43 IST
Last Updated 5 ಸೆಪ್ಟೆಂಬರ್ 2013, 8:43 IST

ನಾಯಕನಹಟ್ಟಿ: ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಕಂಡು ಬಂದಲ್ಲಿ ಅವುಗಳ ನಿವಾರಣೆಗೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಸಲಹೆ ನೀಡಿದರು.

ಸಮೀಪದ ಮನುಮಯ್ಯನಹಟ್ಟಿಯಲ್ಲಿ ಬುಧವಾರ ಏರ್ಪಡಿಸಿದ್ದ ಡೆಂಗೆ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.
ಮನುಮಯ್ಯನಹಟ್ಟಿಯಲ್ಲಿ ಎರಡು ಶಂಕಿತ ಡೆಂಗೆ ಪ್ರಕರಣಗಳು ಪತ್ತೆಯಾಗಿವೆ.ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ.  ಸ್ವಚ್ಛತೆಯೇ ಡೆಂಗೆಗೆ ಪ್ರಮುಖ ಚಿಕಿತ್ಸೆಯಾಗಿದೆ. ಮನೆಗಳ ಬಳಿ ನೀರು ನಿಲ್ಲದಂತೆ ಎಲ್ಲರೂ ಎಚ್ಚರ ವಹಿಸಬೇಕು. ನೀರು ನಿಲ್ಲುವ ತಾಣವೇ ಸೊಳ್ಳೆಗಳ ಉಗಮ ಸ್ಥಾನ, ಸೊಳ್ಳೆಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಅವುಗಳನ್ನು ನಿಯಂತ್ರಿಸುವ ಕ್ರಮಗಳನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕಾಗಿದೆ ಎಂದರು.

ಈ ಕಾಯಿಲೆಗೆ ಕಾರಣವಾಗುವ ಸೊಳ್ಳೆ ಜೀವಿತಾವಧಿಯಲ್ಲಿ 1,200 ಮೊಟ್ಟೆಗಳನ್ನಿಡುತ್ತದೆ. ಆದ್ದರಿಂದ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು.  ಡೆಂಗೆ  ನಿಯಂತ್ರಣ ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ. ಪ್ರತಿಯೊಬ್ಬರೂ ಸ್ವಚ್ಛತೆಯತ್ತ  ಗಮನ ನೀಡಿ ಡೆಂಗೆ ನಿಯಂತ್ರಿಸಬಹುದು. ಮಲಗುವಾಗ ತಪ್ಪದೇ ಸೊಳ್ಳೆ ಪರದೆಗಳನ್ನು ಬಳಸಿ ಎಚ್ಚರ ವಹಿಸುವಂತೆ ಅವರು ಸಲಹೆ ನೀಡಿದರು.

ಪಿಡಿಒ ರಾಘವೇಂದ್ರ ಮಾತನಾಡಿ, ನೀರು ಸರಬರಾಜು ಮಾಡುವ ಪೈಪ್‌ಲೈನ್ ಹಾಳಾಗಿದ್ದರೆ ಕೂಡಲೇ ದುರಸ್ತಿ ಮಾಡಲಾಗುವುದು. ಫಾಗಿಂಗ್ ಮಾಡಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಟೈರ್, ಒಡೆದ ಚಿಪ್ಪು, ಮುಂತಾದ ಕಡೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ ಎಂದು ತಿಳಿಸಿದರು.

ಗ್ರಾಮಸ್ಥರು, ಯುವಕ ಸಂಘದ ಸದಸ್ಯರು ಸ್ವಯಂ ಪ್ರೇರಣೆಯಿಂದ ಇಡೀ ಗ್ರಾಮವನ್ನು ಸ್ವಚ್ಛಗೊಳಿಸುವ ಪ್ರತಿಜ್ಞೆ ಮಾಡಿದರು.
ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಹಾಂತೇಶ್ ಮಾತನಾಡಿದರು. ಆರೋಗ್ಯ ನಿರೀಕ್ಷಕ ತಿಪ್ಪೇಸ್ವಾಮಿ, ಶ್ರೀನಿವಾಸ್, ಮುಖಂಡರಾದ ಪುಟ್ಟಣ್ಣ, ಗ್ರಾಮ ಪಂಚಾಯ್ತಿ ಸದಸ್ಯರು, ಶಾಲಾ ಮಕ್ಕಳು, ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.