ಚಿತ್ರದುರ್ಗ: ವನ್ಯಜೀವಿಗಳ ಚಿತ್ರಗಳನ್ನು ಸೆರೆ ಹಿಡಿಯಲು ಸಮಗ್ರ ಅಧ್ಯಯನ ಮುಖ್ಯ ಎಂದು ಹಿರಿಯ ವನ್ಯಜೀವಿ ಛಾಯಾಗ್ರಾಹಕ ಬೆಂಗಳೂರಿನ ಎಚ್. ಅನಂತ್ ಅಭಿಪ್ರಾಯಪಟ್ಟರು.
ನಗರದ ವಾಸವಿ ಮಹಲ್‌ನಲ್ಲಿ ಶನಿವಾರ ನೇಚರ್ ವೈಲ್ಡ್ ಚಿತ್ರದುರ್ಗ ಇದರ ವತಿಯಿಂದ ಆಯೋಜಿಸಿದ್ದ ಛಾಯಾಗ್ರಾಹಕ ಎಂ. ಕಾರ್ತಿಕ್ ಅವರ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಿರ ಶಬ್ದಗಳಲ್ಲಿ ಹೇಳಲು ಸಾಧ್ಯವಾಗದ್ದನ್ನು ಒಂದು ಛಾಯಾಚಿತ್ರ ಹೇಳುತ್ತದೆ. ಇಂತಹ ಉದ್ದೇಶದಿಂದ ತೆಗೆಯುವ ಚಿತ್ರಗಳು ಪ್ರೇಕ್ಷಕನಿಗೆ ನೇರವಾಗಿ ತಲುಪಬೇಕು. ಕೇವಲ ವನ್ಯಜೀವಿ ಚಿತ್ರಗಳನ್ನು ತೆಗೆಯುವುದು ಮಾತ್ರವಲ್ಲದೇ ಒಬ್ಬ ಛಾಯಾಗ್ರಾಹಕ ಸಾಮಾಜಿಕ ಕಳಕಳಿಯಿಂದಲೂ ಚಿತ್ರಗಳನ್ನು ತೆಗೆದು ಜನರನ್ನು ಸಮಾಜಮುಖಿ ಚಿಂತನೆಗೆ ಒಳಪಡಿಸಬೇಕು ಎಂದು ಅನಂತ್ ಹೇಳಿದರು.
ಇಂದಿನ ದಿನಗಳಲ್ಲಿ ಛಾಯಾಗ್ರಹಣ ಎಂಬುದು ಬದುಕಿನ ಹಾಸುಹೊಕ್ಕಾಗಿದೆ. ಇದನ್ನು ಬಳಸಿಕೊಂಡು ವನ್ಯಜೀವಿಗಳ ಚಿತ್ರಗಳನ್ನು ತೆಗೆದು, ವಿದ್ಯಾರ್ಥಿಗಳಲ್ಲಿ, ಆಸಕ್ತ ಪರಿಸರ ಪ್ರೇಮಿಗಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಛಾಯಾಗ್ರಾಹಕರು ಮಾಡುತ್ತಿದ್ದಾರೆ. ಮಕ್ಕಳು ಈ ಛಾಯಾಚಿತ್ರಗಳನ್ನು ಕೇವಲ ನೋಡದೆ, ಅಧ್ಯಯನ ದೃಷ್ಟಿಯಿಂದ ನೋಡಬೇಕು. ಮುಂದೆ ಅದರ ಪ್ರೇರಣೆಯಿಂದ ಪಕ್ಷಿಗಳ ಬಗ್ಗೆ ಅಧ್ಯಯನ ಮಾಡುವವರು ರೂಪುಗೊಂಡರೆ ಓರ್ವ ವನ್ಯಜೀವಿ ಛಾಯಾಚಿತ್ರಕಾರ ಮಾಡಿದ ಕೆಲಸ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಇತಿಹಾಸ ಸಂಶೋಧಕ ಪ್ರೊ.ಬಿ. ರಾಜಶೇಖರಪ್ಪ ಮಾತನಾಡಿ, ಚಿತ್ರದುರ್ಗ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಪ್ರದೇಶವಿದೆ. ಆದರೆ ಇದರಲ್ಲಿ ಎಷ್ಟು ಬಗೆಯ ಪ್ರಬೇಧಗಳಿವೆ ಎನ್ನುವುದು ಸಮಗ್ರವಾಗಿ ಯಾರಿಗೂ ತಿಳಿದಿಲ್ಲ. ಇವುಗಳಲ್ಲಿನ ವಿಶಿಷ್ಟ ಪ್ರಬೇಧಗಳನ್ನು ನಮ್ಮ ಮುಂದಿಡುವ ಕೆಲಸವನ್ನು ವನ್ಯಜೀವಿ ಛಾಯಾಚಿತ್ರಕಾರ ಕಾರ್ತಿಕ್ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಕುಮಾರಸ್ವಾಮಿ ಮಾತನಾಡಿ, ಚಿತ್ರದುರ್ಗದ ಜೋಗಿಮಟ್ಟಿ ಸೇರಿದಂತೆ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಸುಮಾರು 100ರಿಂದ 150ಪ್ರಬೇಧ ಪಕ್ಷಿಗಳಿವೆ ಎಂದರು.
ನಗರದ ಜೋಗಿಮಟ್ಟಿ ಊಟಿಯಂತಿದ್ದು, ಇಲ್ಲಿ ಹೆಚ್ಚು ಪ್ರಾಣಿಗಳಿವೆ. ಈ ನಿಟ್ಟಿನಲ್ಲಿ ಕಾರ್ತಿಕ್ ತೆಗೆದಿರುವ ಛಾಯಾಚಿತ್ರಗಳು ಅಪರೂಪ ಹಾಗೂ ಅಮೂಲ್ಯವಾಗಿವೆ. ಆಡುಮಲ್ಲೇಶ್ವರದಲ್ಲಿ ಪಕ್ಷಿ, ಪ್ರಾಣಿ ಹಾಗೂ ಪರಿಸರದ ಕುರಿತು ಮಾಹಿತಿ ಕೇಂದ್ರ ತೆರೆಯುವ ಉದ್ದೇಶವಿದೆ ಎಂದು ತಿಳಿಸಿದರು.
ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ‌್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್. ಕಾಶಿ ವಿಶ್ವನಾಥ ಶ್ರೇಷ್ಠಿ ವಹಿಸಿಕೊಂಡಿದ್ದರು. ಅಲ್ಲಮಪ್ರಭು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.