ADVERTISEMENT

ವರುಣನ ಕರೆಗಾಗಿ ಗಿಡದ ಪೂಜೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 6:10 IST
Last Updated 19 ಜುಲೈ 2012, 6:10 IST

ಚಳ್ಳಕೆರೆ: ಬರದ ಛಾಯೆಗೆ ಮುಖವೊಡ್ಡಿ ಕುಳಿತಿರುವ ತಾಲ್ಲೂಕಿನಲ್ಲಿ ಜನರು ನಿಜಕ್ಕೂ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬುಧವಾರ ತಾಲ್ಲೂಕಿನ ದುರ್ಗಾವರದ ರಂಗಸ್ವಾಮಿ ಎಂಬುವರ ಅವಿಭಕ್ತ ಕುಟುಂಬವೊಂದು ಮಳೆಗಾಗಿ ಪ್ರಾರ್ಥಿಸಿ ಅಡವಿಯಲ್ಲಿ ಹಸಿರು ಗಿಡಕ್ಕೆ ಎಡೆ ಹಾಕಿ ಪೂಜೆ ಮಾಡುವ ಮೂಲಕ ಪಾರಂಪರಿಕ `ಗಿಡದ ದೇವರ ಪೂಜೆ~ ನೆರವೇರಿಸಿದ್ದಾರೆ.

 ಇಂತಹ ಸಂದರ್ಭದಲ್ಲಿ ತಮ್ಮ ಸಂಬಂಧಿಕರು, ನೆರೆಹೊರೆಯವರು, ನೆಂಟಸ್ಥರನ್ನು ಆಹ್ವಾನಿಸಿ ಅವರಿಗೆ ಊಟ ಹಾಕುವುದನ್ನು ತಾತ, ಮುತ್ತಜ್ಜರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವುದರಿಂದ ಈ ಭಾರಿಯೂ ಸಂಬಂಧಿಕರು ಗಿಡದ ಪೂಜೆಗೆ ಬಂದಿದ್ದಾರೆ ಎಂಬ ಮಾತು ಹಿರಿಯರಿಂದ ವ್ಯಕ್ತವಾಗುತ್ತದೆ.

ಮಳೆ ಬಾರದೇ ಅಡವಿಯಲ್ಲಿ ಹುಲ್ಲು ಕಡ್ಡಿಯೂ ಸಿಗದೇ ಇರುವ ಇಂತಹ ದುಸ್ಥಿತಿಯಲ್ಲಿ ಭೂಮಿ ತಾಯಿ ಹಸಿರಾಗಿರಬೇಕು. ಇದಕ್ಕೆ ವರುಣನ ಕರುಣೆ ಬೇಕು. ಅದಕ್ಕಾಗಿಯೇ ಆಷಾಢ ಮುಗಿದು ಶ್ರಾವಣ ಕಾಲಿಡುವ ಹೊತ್ತಿಗಾದರೂ ಮಳೆ ಬಂದು ಭೂಮಿ ತಾಯಿ ಹಸಿರಾಗಲಿ ಎಂದು ಹೊಲಗಳಲ್ಲಿರುವ ಯಾವುದಾದರೂ ಹಸಿರು ಗಿಡಕ್ಕೆ ಸಾಂಪ್ರಾದಾಯಿಕವಾಗಿ ಪೂಜೆ ಸಲ್ಲಿಸುತ್ತಿದ್ದೇವೆ ಎನ್ನುತ್ತಾರೆ ರಂಗಸ್ವಾಮಿ.

ಕಾಲಕ್ಕೆ ಸರಿಯಾಗಿ ಮಳೆ ಬಾರದೇ ಇದ್ದಾಗ ನಮ್ಮ ತಾತ, ಮುತ್ತಜ್ಜರು ಇಂತಹ ಪದ್ಧತಿಯೊಂದನ್ನು ಆಚರಿಸಿಕೊಂಡು ಬಂದಿದ್ದರು. ಅದ್ದರಿಂದ, ಇದೀಗ ನಾವು ಮುಂದುವರೆಸುತ್ತಿದ್ದೇವೆ ಎನ್ನುವ ಇವರು ಮುಂಜಾನೆಯೇ ಮನೆಯಿಂದ ಬಂಡಿಗಳಲ್ಲಿ ಬಂದು ಅಕ್ಕಿಯಿಂದ ಮಾಡಿದ ಎಡೆ ಅನ್ನವನ್ನು ಯಾವುದಾದರೂ ಹಸಿರು ಗಿಡವೊಂದರ ಬುಡಕ್ಕೆ ಇಟ್ಟು ತೆಂಗಿನ ಕಾಯಿ ಹೊಡೆದು ಪೂಜಿಸುತ್ತಾರೆ. ನಂತರ ಹತ್ತಿರದಲ್ಲೇ ಇರುವ ಹಳ್ಳದಲ್ಲಿ ಗಂಗಾಪೂಜೆ ನೆರವೇರಿಸಲಾಗುತ್ತದೆ ಎಂದು ವಿವರಿಸುತ್ತಾರೆ ಅವರು.

ನಂತರ ಪೂಜೆಗೆ ಬಂದ ಅಣ್ಣ-ತಮ್ಮಂದಿರು ಹಾಗೂ ಸಂಬಂಧಿಕರು, ನೆಂಟರಿಗೆ ಊಟ ಹಾಕಲಾಗುತ್ತದೆ. ಹೊತ್ತು ಮುಳುಗಿದ ನಂತರ ಮಾಡಿದ ಅಡುಗೆಯೆಲ್ಲವನ್ನೂ ಖಾಲಿ ಮಾಡಿ ಮನೆಗೆ ಹೊರಡುತ್ತಾರೆ. ಇದರಿಂದ, ಗ್ರಾಮೀಣರು ಪರಂಪರೆಯಿಂದಲೂ ಆಚರಿಸಿಕೊಂಡು ಬಂದಿರುವ ನಂಬಿಕೆ ಪ್ರಧಾನ ಆಚರಣೆಗಳ ಮೂಲಕ ಬರ ಆವರಿಸಿರುವ ಈ ಹೊತ್ತಿನಲ್ಲಿ ವರುಣನ ಓಲೈಕೆಯಲ್ಲಿ ತೊಡಗಿದ್ದಾರೆ. 

ಈ ಆಚರಣೆ ಮಾಡುವ ಸಂದರ್ಭದಲ್ಲಿ ಒಂದು ಹನಿ ಮಳೆಯಾದರೂ ಭೂಮಿಗೆ ಬೀಳುತ್ತದೆ ಎಂಬ ನಂಬಿಕೆಯೂ ಇವರಲ್ಲಿದೆ. ಇಂತಹ ನಂಬಿಕೆ ಇಟ್ಟುಕೊಂಡೇ ಮಳೆ ಇಲ್ಲದೇ ಬರಡಾಗಿರುವ ಭೂಮಿ ಹಸಿರಾಗಲಿ ಎಂದು ವರುಣನ ಮೊರೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.