ADVERTISEMENT

ವಸೂಲಾತಿ ಸಾಧಿಸದಿದ್ದರೆ ಬ್ಯಾಂಕ್‌ಗೆ ಭವಿಷ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 8:50 IST
Last Updated 14 ಮಾರ್ಚ್ 2011, 8:50 IST

ಹರಪನಹಳ್ಳಿ: ಕೃಷಿ ಹಾಗೂ ಕೃಷಿಯೇತರ ಅಭಿವೃದ್ಧಿಗೆ ನೀಡಿದ ಸಾಲವನ್ನು ನಿಗದಿತ ಅವಧಿಯೊಳಗೆ ವಸೂಲಾತಿಯಲ್ಲಿ ಪ್ರಗತಿ ಸಾಧಿಸದಿದ್ದರೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಿಗೆ ಭವಿಷ್ಯವಿಲ್ಲ ಎಂದು ಬೆಂಗಳೂರಿನ ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಕಾಸ್ಕಾರ್ಡ್) ಅಧ್ಯಕ್ಷ ಚೊಕ್ಕ ಬಸವನಗೌಡ ಹೇಳಿದರು.ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ನಿರ್ಮಿಸಿರುವ ನೂತನ ವಾಣಿಜ್ಯ ಮಳಿಗೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಭದ್ರತಾ ಕೊಠಡಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

ರಾಜ್ಯದಲ್ಲಿರುವ 177ಪಿಕಾರ್ಡ್ ಬ್ಯಾಂಕ್‌ಗಳಲ್ಲಿ ಈಗಾಗಲೇ 2ಶಾಖೆಗಳು ಬಾಗಿಲು ಮುಚ್ಚಿವೆ. ಕೆಲವು ಬ್ಯಾಂಕ್‌ಗಳು ಮಾತ್ರ ಸಮಾಧಾನಕರ ಸ್ಥಿತಿಯಲ್ಲಿವೆ. ಅದರಲ್ಲಿಯೂ ಕೇವಲ 30ಬ್ಯಾಂಕುಗಳು ಉತ್ತಮ ಸಾಧನೆ ಪ್ರಗತಿಯ ಹಾದಿಯಲ್ಲಿವೆ. ಉಳಿದವುಗಳು ನಷ್ಟದಲ್ಲಿ ಮುಂದುವರಿಯುತ್ತಿವೆ ಎಂದರು.

ಸಾಲ ಪಡೆದಿರುವ ಕೆಲವರು ಸಾಲ ಮರುಪಾವತಿಯ ಬಗ್ಗೆ ಚಿಂತಿಸುತ್ತಿದ್ದರೆ, ಉಳಿದ ಬಹುತೇಕರು ಸಾಲಮನ್ನಾ ಆಗುತ್ತದೆ. ಸಾಲ ಮರುಪಾವತಿ ಮಾಡಬೇಡ ಎಂದು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಹೀಗಾದರೆ ಬ್ಯಾಂಕ್‌ಗಳ ವ್ಯವಹಾರ-ವಹಿವಾಟು ಹೇಗೆ ನಡೆಯಬೇಕು?. ಹೇಗೆ ಪುನಶ್ಚೇತನ ಕಂಡುಕೊಳ್ಳಬೇಕು? ಎಂದು ಅವರು ಪ್ರಶ್ನಿಸಿದರು.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ನಬಾರ್ಡ್ ` 153 ಕೋಟಿ ಸಾಲ ನೀಡಿದೆ. ಜತೆಗೆ, ಸುಮಾರು ` 60 ಕೋಟಿ ಸ್ವಂತ ಬಂಡವಾಳದಿಂದ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ನೀಡಿದೆ. ನಬಾರ್ಡ್ ಸೇರಿದಂತೆ ಬೇರೆಬೇರೆ ಮೂಲಗಳಿಂದ ಕೇವಲ ಸಾಲ ತೆಗೆದುಕೊಂಡು ವಿತರಿಸುವ ಕೆಲಸ ಮಾತ್ರ ಮುಂದುವರೆದಿದೆ. ಆದರೆ, ಪಡೆದ ಸಾಲವನ್ನು ಕೆಲವರನ್ನು ಹೊರತುಪಡಿಸಿ, ಸ್ವಪ್ರೇರಣೆಯಿಂದ ಯಾರು ಮರು ಪಾವತಿಸಲು ಮುಂದೆ ಬರುತ್ತಿಲ್ಲ ಎಂದು ವಿಷಾದಿಸಿದರು.

ಸಾಲ ಮಂಜೂರಾತಿ ಮಾಡುವ ಮುನ್ನಾ ನಬಾರ್ಡ್ ಹಾಗೂ ಕಾಸ್ಕಾರ್ಡ್ ಬ್ಯಾಂಕುಗಳು ಪ್ರತಿವರ್ಷ ಮಾರ್ಚ್ ಅಂತ್ಯದವರೆಗೆ ಶೇ. 50ರಷ್ಟು ಸಾಲ ವಸೂಲಾತಿ ಮಾಡಬೇಕೆಂಬ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಲಾಗಿದೆ. ಒಂದು ವೇಳೆ ಆ ಗುರಿ ತಲುಪದಿದ್ದರೆ, ಅಂಥಹ ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳಲ್ಲಿ ವಿಲೀನಗೊಳಿಸಬೇಕೆಂದು ಸಹ ಸೂಚಿಸಿದೆ.ಇದುವರೆಗೂ ವಸೂಲಾಗಿರುವ ಪ್ರಮಾಣ ಕೇವಲ ಶೇ. 42ರಷ್ಟು ಮಾತ್ರ. ಮುಂದಿನ ದಿನಗಳಲ್ಲಿ ವಸೂಲಾತಿ ಪ್ರಮಾಣ ಹೆಚ್ಚಿಸಿ ಬ್ಯಾಂಕ್ ಪುನಶ್ಚೇತನಗೊಳಿಸಬೇಕಿದೆ ಎಂದರು.

ಕಾಸ್ಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಬೆಳ್ಳೂಡಿ ರಾಮಚಂದ್ರಪ್ಪ, ನಿರ್ದೇಶಕ ಕುಮಾರಸ್ವಾಮಿ, ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಕುಬೇರಪ್ಪ, ಪಿಕಾರ್ಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸುಬ್ರಹ್ಮಣ್ಯ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಿ.ಎಲ್. ಪೋಮ್ಯಾನಾಯ್ಕ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಮಲ್ಲಪ್ಪ, ದಾವಣಗೆರೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುರುಗೇಂದ್ರಪ್ಪ, ಹೊನ್ನಾಳಿ ನಾಗರಾಜ್, ಚನ್ನಗಿರಿಯ ಲೋಕೇಶಪ್ಪ, ಜಗಳೂರಿನ ಜಗದೀಶ್, ವ್ಯವಸ್ಥಾಪಕ ಟಿ.ಎಂ. ಮಲ್ಲಿಕಾರ್ಜುನಯ್ಯ, ನಿರ್ದೇಶಕರಾದ ಗುರುಬಸವನಗೌಡ, ಡಾ.ಕೊಟ್ರೇಶ್ ಬಿದ್ರಿ, ಎಚ್. ದೇವರಾಜ್, ಪಿ.ಬಿ. ಗೌಡ  ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.