ADVERTISEMENT

ವಿಜೃಂಭಣೆಯ ಚನ್ನಕೇಶವ ಸ್ವಾಮಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2011, 8:30 IST
Last Updated 14 ನವೆಂಬರ್ 2011, 8:30 IST
ವಿಜೃಂಭಣೆಯ ಚನ್ನಕೇಶವ ಸ್ವಾಮಿ ಜಾತ್ರೆ
ವಿಜೃಂಭಣೆಯ ಚನ್ನಕೇಶವ ಸ್ವಾಮಿ ಜಾತ್ರೆ   

ನಾಯಕನಹಟ್ಟಿ: ಇಲ್ಲಿನ ಚನ್ನಕೇಶವ ಸ್ವಾಮಿ ಉತ್ಸವವು ಭಾನುವಾರ ಸಂಭ್ರಮ, ಸಡಗರದಿಂದ ಜರುಗಿತು.
ಶನಿವಾರ ರಾತ್ರಿಯಿಂದಲೇ ಗ್ರಾಮದಲ್ಲಿರುವ ಚನ್ನಕೇಶವಸ್ವಾಮಿ ದೇವಸ್ಥಾನ ಬಳಿ ಭೂತನ ಹಲಗೆಗಳಿಗೆ ಪೂಜೆ ಸಲ್ಲಿಸಿ ಬೆಳಗಿನ ಜಾವ ಎಡೆಯನ್ನು ಹಾಕಲಾಯಿತು. ಆ ಎಡೆಯನ್ನು ಕೈಗಳನ್ನು ಉಪಯೋಗಿಸದೆ ಬಾಯಿ ಹಚ್ಚಿ ಸೇವಿಸಿದರು.

ಭಾನುವಾರ ಮಧ್ಯಾಹ್ನ ಚನ್ನಕೇಶವ ಸ್ವಾಮಿಯನ್ನು ಪಲ್ಲಕಿಯಲ್ಲಿ ಕೂರಿಸಿ ಗ್ರಾಮದ ಅಬ್ಬೇನಹಳ್ಳಿ ರಸ್ತೆಯಲ್ಲಿರುವ ಮರಡಿ ಗುಡಿಯ ಬಳಿ ಸಕಲ ವಾದ್ಯಗಳೊಂದಿಗೆ ಕೊಂಡೊಯ್ಯಲಾಯಿತು. ಅಲ್ಲಿ ಕುರಿಗಳನ್ನು ದೇವರ ಗುಡಿ ಸುತ್ತ ಸುತ್ತಿಸಿ ಜಾನುವಾರುಗಳಿಗೆ ಯಾವುದೇ ತೆರನಾದ ಕಾಯಿಲೆಗಳು ಬರದಂತೆ ರಕ್ಷಿಸಿ ಎಂದು ಹರಕೆಗಳನ್ನು ಸಲ್ಲಿಸಿದರು.

ಮಹಿಳೆಯರು ಉಪವಾಸದೊಂದಿಗೆ ಬಾಯಿ ಬೀಗ ಹಾಕಿಕೊಂಡು ಆರತಿ ಹಿಡಿದು ಹರಕೆ ಸಲ್ಲಿಸುತ್ತಿದ್ದುದು ವಿಶೇಷವಾಗಿತ್ತು.  ತರುವಾಯ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು. ಸಂಜೆ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಡೊಳ್ಳು ಮತ್ತು ಜಾನಪದ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ತಂದು ಗುಡಿ ತುಂಬಿಸಲಾಯಿತು.

ಉತ್ಸವಕ್ಕೆ  ಗೌಡ ಕುರುಬರು ಬುಡಕಟ್ಟಿಗೆ ಸೇರಿದ ನೆರೆಯ ಆಂಧ್ರದ ಕಲ್ಯಾಣದುರ್ಗ, ಅಮರಾಪುರ, ಪಾವಗಡದ ವೈ.ಎನ್.ಹೊಸಕೋಟೆ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಮತ್ತಿತರ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

ಗಮನಸೆಳೆದ ಭೂತನ ಹಲಗೆ ನೃತ್ಯ: ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭೂತನ ಹಲಗೆ ನೃತ್ಯ ಎಲ್ಲರ ಗಮನಸೆಳೆಯಿತು. ದೇವರ ಪಲ್ಲಕ್ಕಿಯ ಮುಂಭಾಗದಲ್ಲಿ ಹರಕೆಹೊತ್ತವರು ಉಗ್ರನರಸಿಂಹ, ಕೆಂಚಪ್ಪ, ಕರಿಯಪ್ಪನ ಭೂತನ ಹಲಗೆಗಳನ್ನು ಹಿಡಿದು ನೃತ್ಯವನ್ನು ಮಾಡುತ್ತಾ ಮಣೇವು ಹಾಡುತ್ತಾ ಬೆಲ್ಲ,ಬಾಳೆಹಣ್ಣುಗಳನ್ನು ಸೇವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.