ಹಿರಿಯೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಒಪ್ಪಿ, ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಆ. 15ರಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿಧಾನಸೌಧದ ಮುಂದೆ ಕಪ್ಪುಬಾವುಟ ಪ್ರದರ್ಶನ ಹಾಗೂ ಧ್ವಜಾರೋಹಣ ನೆರವೇರಿಸಲಿರುವ ಮುಖ್ಯಮಂತ್ರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಪಾವಗಡ ಶ್ರೀರಾಮ್ ತಿಳಿಸಿದರು.
ಆ. 15ರಂದು ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳ್ಲ್ಲಲು ಪ್ರತಿಭಟನೆ ನಡೆಸಲಾಗುವುದು. ಮಾದಿಗರಿಗೆ ಒಳ ಮೀಸಲಾತಿ ಕಲ್ಪಿಸುವುದಕ್ಕೆ ವಿರೋಧಿಸುವ ಎಲ್ಲಾ ಶಾಸಕರಿಗೂ ಮುತ್ತಿಗೆ ಹಾಕಿ, ಧ್ವಜಾರೋಹಣಕ್ಕೆ ಅಡ್ಡಿಪಡಿಸಲಾಗುವುದು.
ಇತ್ತೀಚೆಗಷ್ಟೇ ಮುಕ್ತಾಯವಾದ ಅಧಿವೇಶನದಲ್ಲಿ ಒಳ ಮೀಸಲಾತಿ ವಿಚಾರದ ಒಪ್ಪಿಗೆಗೆ ಅವಕಾಶ ಮಾಡಿಕೊಡಬೇಕು ಎಂದು 164 ಶಾಸಕರು, 13 ಮಂತ್ರಿಗಳು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ, ಎಚ್.ಡಿ. ರೇವಣ್ಣ ಅವರಿಗೆ ಮನವಿ ಸಲ್ಲಿಸಿದ್ದೆವು. ಇವರೆಲ್ಲರಿಗೆ ಅದೇನಾಯಿತೋ, ಒಬ್ಬರೂ ಒಳ ಮೀಸಲಾತಿ ಬಗ್ಗೆ ಚಕಾರ ಎತ್ತಲಿಲ್ಲ. ನ್ಯಾ. ಸದಾಶಿವ ಅವರು ವರದಿ ಕೊಟ್ಟು ಎರಡು ತಿಂಗಳಾಗಿದ್ದರೂ ಏಕೆ ಅಂಗೀಕರಿಸಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಜ್ಯದಲ್ಲಿ 120 ಕ್ಷೇತ್ರಗಳಲ್ಲಿ ಶಾಸಕರನ್ನು ಗೆಲ್ಲಿಸುವ ಶಕ್ತಿ ಮಾದಿಗ ಸಮಾಜಕ್ಕಿದೆ. ಈಗಲೂ ಮಲ ಹೊರುತ್ತಿರುವ, ಚರಂಡಿ- ರಸ್ತೆಗಳ ಕಸ ಗುಡಿಸುವ ಮಾದಿಗರಿಗೆ ಮೀಸಲಾತಿ ಬೇಡವೇ? ಮಾದಿಗರ ಮೀಸಲಾತಿ ವಿರೋಧಿಸುವ ಎಲ್ಲಾ ಜನಪ್ರತಿನಿಧಿಗಳನ್ನು ಚುನಾವಣೆಯಲ್ಲಿ ಸೋಲಿಸಲು ಕರೆ ನೀಡಿದ್ದೇವೆ. ಚಿತ್ರದುರ್ಗ ಕ್ಷೇತ್ರದ ಸಂಸತ್ ಸದಸ್ಯರು ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಅವರ ಹೇಳಿಕೆ ಖಂಡನೀಯ ಎಂದರು.
ಹೋರಾಟಕ್ಕೆ ಫಲ ಸಿಗಲೇಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರ ರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು.
ಗುರುಶ್ಯಾಮಯ್ಯ, ಹನುಮಂತ ರಾಜ್, ಹುಚ್ಚವ್ವನಹಳ್ಳಿ ಓ. ತಿಪ್ಪೇಸ್ವಾಮಿ, ಆರ್. ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.