ADVERTISEMENT

ವೇದಾವತಿ ನದಿಗೆ ಕಾಯಕಲ್ಪ: ಜನರ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 9:17 IST
Last Updated 17 ಜುಲೈ 2013, 9:17 IST

ಹಿರಿಯೂರು: ನಗರದ ಮಧ್ಯಭಾಗದಲ್ಲಿ ಹಾದು ಹೋಗುತ್ತಿರುವ ಐತಿಹಾಸಿಕ ವೇದಾವತಿ ನದಿ ಮೈತುಂಬಾ ಕೊಳಚೆಯನ್ನು ತುಂಬಿಕೊಂಡು ಹರಿಯುತ್ತಿದ್ದು, ನದಿಗೆ ಕಾಯಕಲ್ಪ ಕಲ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿ ಅಥವಾ ದತ್ತಾತ್ರೇಯ ಪೀಠದ ಬಳಿ ಹುಟ್ಟುವ ವೇದಾವತಿ ನದಿಗೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಪುರದ ಸಮೀಪ ಜಲಾಶಯ ನಿರ್ಮಿಸಿ ನೂರು ವರ್ಷಗಳು ಕಳೆದಿವೆ. ಚಿತ್ರದುರ್ಗ ಮತ್ತು ಹಿರಿಯೂರು ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ನಗರಕ್ಕೆ ಸಮೀಪವಿರುವ ಲಕ್ಕವ್ವನಹಳ್ಳಿ ಬಳಿ ಜಲಸಂಗ್ರಹಣೆಗೆ ಚಿಕ್ಕ ಅಣೆಕಟ್ಟೆ ನಿರ್ಮಿಸಲಾಗಿದ್ದು, 15 ದಿನಗಳಿಗೊಮ್ಮೆ ನದಿಯ ಮೂಲಕ ಚಿಕ್ಕ ಅಣೆಕಟ್ಟೆಗೆ ನೀರು ಹರಿಸಿ, ಅಲ್ಲಿ ನೀರನ್ನು ಶುದ್ಧೀಕರಿಸಿ ನಾಗರಿಕರ ಬಳಕೆಗೆ ನೀರು ಬಿಡಲಾಗುತ್ತಿದೆ.

ನೀರು ಸಂಗ್ರಹಿಸುತ್ತಿರುವ ಅಣೆಕಟ್ಟೆಗೆ ಜಲಾಶಯ ಕೆಳ ಭಾಗದ ಹೊಲಸು ನೀರಿನ ಜತೆ ಹರಿಯುತ್ತಿದ್ದು ಮಲೀನವಾಗಿದೆ. ಹೂಳು ಕೂಡಾ ತುಂಬಿದೆ. ಅಣೆಕಟ್ಟೆಯ ಕೆಳಗಿನಿಂದ ಆದಿವಾಲದವರೆಗೆ ವೇದಾವತಿ ನದಿ ಕೊಳಚೆಯನ್ನು ಹೊತ್ತು ಸಾಗುತ್ತದೆ. ಹಿರಿಯೂರಿಗೆ ಎಲ್ಲ ರೀತಿಯ ಸಾಂಕ್ರಾಮಿಕ ರೋಗಗಳನ್ನು ಹರಡುವ ಮೊದಲ ತಾಣ ಇದಾಗಿದ್ದರೆ, ಎರಡನೆಯದ್ದು ಪ್ರವಾಸಿ ಮಂದಿರ ವೃತ್ತದ ಪಕ್ಕದಲ್ಲಿ ಹಾದು ಹೋಗಿರುವ ವಾಣಿ ವಿಲಾಸ ಎಡನಾಲೆ ಎನ್ನುವುದು ನಾಗರಿಕರ ಆರೋಪ.

ಒತ್ತಾಯ: ವೇದಾವತಿ ನದಿಗೆ ನಗರದ ತ್ಯಾಜ್ಯವನ್ನು ನೇರವಾಗಿ ಬಿಡುವ ಬದಲು ಸಂಸ್ಕರಿಸಿಬಿಡಬೇಕು. ವಾಣಿ ವಿಲಾಸ ನಾಲೆಯನ್ನು ಸ್ವಚ್ಛಗೊಳಿಸಬೇಕು ಎನ್ನುವುದು ನಾಗರಿಕರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.