ADVERTISEMENT

ವೇದಾವತಿ ಮರಳು ಹರಾಜಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 10:15 IST
Last Updated 10 ಫೆಬ್ರುವರಿ 2012, 10:15 IST

ಚಳ್ಳಕೆರೆ: ತಾಲ್ಲೂಕಿನ ಜನರ ಜೀವನಾಡಿಯಾಗಿರುವ ವೇದಾವತಿ ನದಿಯಲ್ಲಿನ ಮರಳನ್ನು ಹರಾಜು ಹಾಕಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮ ಈ ಭಾಗದ ಜನ- ಜಾನುವಾರುಗಳ ವಿರೋಧಿಯಾದುದು ಎಂದು ನೂರಾರು ಜನ ರೈತರು ನದಿ ಪಾತ್ರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಈಗಾಗಲೇ ಬರಗಾಲ ಪೀಡಿತ ಪ್ರದೇಶ ಎಂದು ತಾಲ್ಲೂಕು ಘೋಷಣೆಯಾಗಿದೆ. ಇಲ್ಲಿ ನಡೆಯುವ ಅಕ್ರಮ ಮರಳು ದಂದೆಯಿಂದ ನದಿ ಪಾತ್ರದಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸುತ್ತಿದ್ದು, ರೈತರು ಸೇರಿದಂತೆ ಜನರು ಆತಂಕದಲ್ಲಿದ್ದಾರೆ.
 ಪ್ರಸಕ್ತ ವರ್ಷದ ಬೇಸಿಗೆ ಹೊತ್ತಿಗೆ ಇಲ್ಲಿನ ಜನರಿಗೆ ಕುಡಿಯುವ ನೀರಿಗೂ ತತ್ವಾರ ಪಡಬೇಕಾದಂತಹ ಪರಿಸ್ಥಿತಿ ಇರುವಾಗ ಸರ್ಕಾರ ಮರಳನ್ನು ಹರಾಜು ಹಾಕಿ ವೇದಾವತಿ ಒಡಲನ್ನು ಬಗೆಯುವುದು ಯಾವ ನ್ಯಾಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೇಣುಕಾಪುರ, ಕಸವಿಗೊಂಡನಹಳ್ಳಿ, ಬೂದಿಹಳ್ಳಿ, ಮೈಲನಹಳ್ಳಿ, ಗುಡಿಹಳ್ಳಿ, ನಾಗಗೊಂಡನ ಹಳ್ಳಿ, ತಪ್ಪಗೊಂಡನಹಳ್ಳಿ, ಮೋದೂರು, ಕಾಮಸಮುದ್ರ, ಜಾಜೂರು, ಹರವಿಗೊಂಡನಹಳ್ಳಿ, ಪಗಡಲಬಂಡೆ, ಮತ್ಸಮುದ್ರ, ಹಾಲಿಗೊಂಡನಹಳ್ಳಿ, ಚಟ್ಟೆಕಂಬ, ಸೂರನಹಳ್ಳಿ ನದಿಪಾತ್ರದಲ್ಲಿ ಅಕ್ರಮ ಮರಳು ತುಂಬುವುದನ್ನು ತಡೆಯಲು ಜನರು ಸಿದ್ದರಿದ್ದಾರೆ ಎಂದರು.

ಅಕ್ರಮ ಮರಳು ದಂದೆ ಕೋರರು ಮರಳು ತಡೆಯುವುದನ್ನು ತಡೆಗಟ್ಟಲು ಹೋದರೆ ಹಲ್ಲೆ ಮಾಡಲು ಬರುತ್ತಾರೆ. ಕೆಲವು ಘಟನೆಗಳು ಮೈಲನಹಳ್ಳಿ ನದಿ ಪಾತ್ರದಲ್ಲೂ ನಡೆದಿವೆ. ಅದ್ದರಿಂದ, ಸರ್ಕಾರಿ ಅಧಿಕಾರಿಗಳು ರಕ್ಷಣೆ ನೀಡಬೇಕು ಎಂದು ಕೋರಿಕೊಂಡರು.

ಧರಣಿ ನಿರತ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಎನ್.ಎಂ. ನಾಗರಾಜ, ಲೋಕೋಪಯೋಗಿ ಎಂಜಿನಿಯರ್ ರಾಮಚಂದ್ರಪ್ಪ, ಭೂವಿಜ್ಞಾನ ಇಲಾಖೆ ಅಧಿಕಾರಿ ಉದಯಶಂಕರ್, ಡಿವೈಎಸ್‌ಪಿ ಹನುಮಂತರಾಯ ಭೇಟಿ ನೀಡಿದ್ದರು.

ಹರಾಜು ಪ್ರಕ್ರಿಯೆ ಹಿಂದಕ್ಕೆ: ಮೈಲನಹಳ್ಳಿ ಹತ್ತಿರದ ವೇದಾವತಿ ನದಿ ಪಾತ್ರದಲ್ಲಿನ ಮರಳು ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದು, ಮುಂದಿನ ದಿನಗಳಲ್ಲಿ ಅಕ್ರಮವಾಗಿ ಮರಳು ತುಂಬುವುದು ಕಂಡುಬಂದಲ್ಲಿ ಈ ಭಾಗದ ರೈತರು ಸಹಕರಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಗುರುವಾರ ಸಂಜೆ ತಾಲ್ಲೂಕು ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ರೈತ ಮುಖಂಡರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.