ADVERTISEMENT

ವೈಮನಸ್ಸಿಗೆ ಸಾಕ್ಷಿಯಾದ ಬಿಜೆಪಿ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 10:15 IST
Last Updated 20 ಫೆಬ್ರುವರಿ 2011, 10:15 IST

ಮೊಳಕಾಲ್ಮುರು: ಇಲ್ಲಿನ ತಾ.ಪಂ. ಅಧಿಕಾರ ಗದ್ದುಗೆ ಹಿಡಿದ ಹಿನ್ನೆಲೆಯಲ್ಲಿ ಬಿಜೆಪಿ ಶನಿವಾರ ಹಮ್ಮಿಕೊಂಡಿದ್ದ ವಿಜಯೋತ್ಸವ ಪಕ್ಷದಲ್ಲಿನ ಹಲವು ವೈಮನಸ್ಸುಗಳಿಗೆ ಸಾಕ್ಷಿಯಾಯಿತು.
ಕಳೆದ ವಿಧಾನಸಭಾ ಚುನಾವಣೆ ಅವಧಿಯಿಂದಲೂ ಬಿಜೆಪಿ ಕ್ಷೇತ್ರಾಧ್ಯಕ್ಷ ವೆಂಕಟಸ್ವಾಮಿ ಬಣ ಹಾಗೂ ಮುಖಂಡ ಹಾಗೂ ಜಿ.ಪಂ. ಸದಸ್ಯ ಎಚ್.ಟಿ. ನಾಗರೆಡ್ಡಿ ಬಣದ ಮಧ್ಯೆನಡೆಯುತ್ತಿರುವ ಒಳಜಗಳ ಇಲ್ಲಿಯೂ ಮುಂದುವರಿದಿದ್ದು, ವೆಂಕಟಸ್ವಾಮಿ ಸೇರಿದಂತೆ ಅವರ ಬಣದ ಯಾವುದೇ ಮುಖಂಡರು ವಿಜಯೋತ್ಸವದಲ್ಲಿ ಭಾಗಿಯಾಗಲಿಲ್ಲ. ನಾಗರೆಡ್ಡಿ ಬಣದ ಮುಖಂಡರು ಮಾತ್ರ ಪ್ರಮುಖವಾಗಿ ಕಂಡುಬಂದರು.

ಈ ಕುರಿತು ಪಿ.ಇ. ವೆಂಕಟಸ್ವಾಮಿ ಮಾತನಾಡಿ ‘ನಾನು ಮತ್ತು ಜಿಲ್ಲಾಧ್ಯಕ್ಷ ಸಿದ್ದೇಶ್ ಯಾದವ್ ಶನಿವಾರ ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಉಪಾಧ್ಯಕ್ಷರ ಸೂಚನೆ ಮೇರೆಗೆ ಹಾನಗಲ್ ಪ್ರವಾಸಿ ಮಂದಿರದಲ್ಲಿ ಕಾದು ವಾಪಸ್ ಬಂದೆವು, ಅಂತಿಮ ಆಯ್ಕೆ ಬಗ್ಗೆ ಪಕ್ಷದ ಗಮನಕ್ಕೆ ತಾರದೇ ಮಾಡಿರುವ ಬಗ್ಗೆ ಹೈಕಮಾಂಡ್‌ಗೆ ವರದಿ ಸಲ್ಲಿಸುವುದಾಗಿ’ ಹೇಳಿದರು.
ಎಚ್.ಟಿ. ನಾಗರೆಡ್ಡಿ ಮಾತನಾಡಿ, ಜಿಲ್ಲಾಧ್ಯಕ್ಷ ಸಿದ್ದೇಶ್ ಯಾದವ್ ಅವರು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಪಟ್ಟಂತೆ ಹಾನಗಲ್ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕೋರ್ ಕಮಿಟಿ ರಚಿಸಿ ಆಯ್ಕೆ ಅಂತಿಮಗೊಳಿಸುವ ನಿರ್ಣಯ ಪ್ರಕಟ ಮಾಡಿದ್ದು, ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಕೆರಳಿಸಿದೆ.

ಪೈಪೋಟಿ ಹಾಗೂ ಗೊಂದಲ ನಿವಾರಿಸಲು ಸ್ಥಳೀಯ ಮುಖಂಡರು, ಸದಸ್ಯರು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು ಆಯ್ಕೆ ಮಾಡುವ ಪರಿಸ್ಥಿತಿ ನಿರ್ಮಾಣ ಉಂಟಾಯಿತು. ಆಯ್ಕೆ ಮೊದಲು ಈ ಸಂಗತಿಯನ್ನು ಮುಖಂಡ ನೇರ್ಲಗುಂಟೆ ತಿಪ್ಪೇಸ್ವಾಮಿ ಅವರ ಗಮನಕ್ಕೆ ತಂದಿದ್ದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.