ADVERTISEMENT

ಶರಣ ಸಂಸ್ಕೃತಿ ಉತ್ಸವಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 9:00 IST
Last Updated 27 ಸೆಪ್ಟೆಂಬರ್ 2011, 9:00 IST

ಚಿತ್ರದುರ್ಗ: ಬಸವಕೇಂದ್ರ ಮತ್ತು ಮುರುಘಾಮಠದ ಆಶ್ರಯದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಸೆ. 29ರಿಂದ ಅ. 8ರವರೆಗೆ ಉತ್ಸವ ನಡೆಯಲಿದ್ದು, ಮುರುಘಾಮಠದ ಮುರುಘಾ ವನದಲ್ಲಿ ಬೃಹತ್ ಪೆಂಡಾಲ್ ಹಾಕಲಾಗುತ್ತಿದೆ.

29 ಮತ್ತು 30ರಂದು ನಗರದ ಎಸ್‌ಜೆಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ `ಜಮುರಾ~ ಕಪ್ ನಡೆಯಲಿದೆ. ಈ ಬಾರಿ ಪುರುಷರ ಮತ್ತು ಮಹಿಳೆಯರ ರಾಜ್ಯಮಟ್ಟದ ಆಹ್ವಾನಿತ ಹೊನಲು ಬೆಳಕಿನ ಕಬಡ್ಡಿ ಕ್ರೀಡಾಕೂಟ ಆಯೋಜಿಸಲಾಗಿದೆ.

ಅಧ್ಯಾತ್ಮ ಮತ್ತು ನಿಸರ್ಗದ ವಾತಾವರಣದಿಂದ ಹೆಚ್ಚಿನ ಸ್ಫೂರ್ತಿ ದೊರೆಯಲಿ ಎನ್ನುವ ಉದ್ದೇಶದಿಂದ ಈ ಬಾರಿ ಮುರುಘಾ ಮಠದ ಆವರಣದಲ್ಲಿ ಉತ್ಸವ ಆಯೋಜಿಸಲಾಗಿದೆ. ಉತ್ಸವಕ್ಕೆ ಆಗಮಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.

ಉತ್ಸವದ ಅಂಗವಾಗಿ ಅ. 2ರಿಂದ 7ರವರೆಗೆ ಪ್ರತಿದಿನ ಬೆಳಿಗ್ಗೆ 7.45ಕ್ಕೆ ಸಹಜ ಶಿವಯೋಗ ನಡೆಯಲಿದೆ. 1ರಿಂದ 6ರವರೆಗೆ ಮಠದ ರಾಜಾಂಗಣದಲ್ಲಿ ಎಸ್‌ಜೆಎಂ ಚಿತ್ರಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ. ಸೆ. 29ರಂದು ಬೈಸಿಕಲ್ ಜಾಥಾ, 30ಕ್ಕೆ ಶ್ರಮದಾನ, ಅ.1ರಂದು ಪರಿಸರ ನಡಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

2ರಂದು ಕೃಷಿಮೇಳ, 3ಕ್ಕೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಜತೆ ಸಂವಾದ, ಅ. 4ಕ್ಕೆ ಮಹಿಳಾ ಸಮಾವೇಶ ಮತ್ತು ಬಸವಶ್ರೀ ಪ್ರಶಸ್ತಿ ಪ್ರದಾನ, 5ಕ್ಕೆ ಜಾನಪದ ಸಮಾವೇಶ, 6ಕ್ಕೆ ಜಾನಪದ ಕಲಾಮೇಳ ನಡೆಯಲಿದೆ. 6ರಂದು ನಡೆಯುವ ಕಲಾಮೇಳದ ಮೆರವಣಿಗೆ ಮೇಲೆ ನಗರದ ಗಾಂಧಿ ವೃತ್ತದ ಬಳಿ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ನಡೆಯಲಿದೆ. ಅಂದು ಸಂಜೆ ಚಿಣ್ಣರ ಮೇಳ ನಡೆಯಲಿದ್ದು, ಮೂರು ವರ್ಷದ ಬಾಲಕ ವಾಹನ ಚಲಾಯಿಸುವ ಕಾರ್ಯಕ್ರಮವಿದೆ ಎಂದು ವಿವರಿಸಿದರು.

7ರಂದು ಮುರುಘಾ ಮಠದ ಸಮೀಪದ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಬಸವೇಶ್ವರರ 100 ಅಡಿ ಎತ್ತರದ ಏಕಶಿಲಾ ಪುತ್ಥಳಿ ಪ್ರತಿಷ್ಠಾಪನಾ ಯೋಜನೆಯ ಅಡಿಗಲ್ಲು ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಉತ್ಸವ ಸಮಿತಿ ಉಪಾಧ್ಯಕ್ಷ ಆರ್. ಶೇಷಣ್ಣ ಕುಮಾರ್ ಹಾಜರಿದ್ದರು.

29ಕ್ಕೆ ಜಾಗೃತಿ ಸಮಿತಿ ಸಭೆ
ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ಪರಿಶೀಲನೆ ಮಾಡಲು ಸೆ. 29ರಂದು ಮಧ್ಯಾಹ್ನ 3ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಗೂ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.