ADVERTISEMENT

ಶಾಲಾ ಕಟ್ಟಡ ಬಿರುಕು: ವಿದ್ಯಾರ್ಥಿಗಳಲ್ಲಿ ಆತಂಕ

ಪ್ರತಿಷ್ಠಿತ ಎನ್.ಜಿ.ಹಳ್ಳಿ ಪ್ರೌಢಶಾಲೆಯ ದುಃಸ್ಥಿತಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 10:26 IST
Last Updated 8 ಜುಲೈ 2013, 10:26 IST
ಶಾಲಾ ಕಟ್ಟಡ ಬಿರುಕು: ವಿದ್ಯಾರ್ಥಿಗಳಲ್ಲಿ ಆತಂಕ
ಶಾಲಾ ಕಟ್ಟಡ ಬಿರುಕು: ವಿದ್ಯಾರ್ಥಿಗಳಲ್ಲಿ ಆತಂಕ   

ಹೊಳಲ್ಕೆರೆ: ತಾಲ್ಲೂಕಿನ ಎನ್.ಜಿ ಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ ಬಿರುಕುಬಿಟ್ಟಿದ್ದು, ವಿದ್ಯಾರ್ಥಿಗಳು ಸದಾ ಆತಂಕದಲ್ಲೆೀ ಪಾಠ ಕೇಳುವ ಪರಿಸ್ಥಿತಿ ಇದೆ.

ಕಟ್ಟಡದಲ್ಲಿ ಒಟ್ಟು 14 ಕೊಠಡಿಗಳಿದ್ದು, ಅದರಲ್ಲಿ ಸುಮಾರು 6 ಕೊಠಡಿಗಳು ಶಿಥಿಲಗೊಂಡಿದ್ದೆ. ಶಿಥಿಲಗೊಂಡ ಕೊಠಡಿಯಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವುದರಿಂದ ಯಾವ ಸಂದರ್ಭದಲ್ಲಿಯೂ ಕಟ್ಟಡ ಬೀಳುವ ಆತಂಕ ಎದುರಾಗಿದೆ. ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕಟ್ಟಡದ ಆರ್‌ಸಿಸಿಯಿಂದ ನೀರು ಜಿನುಗುತ್ತಿದ್ದರೂ ನೀರಿನಲ್ಲೆೀ ವಿದ್ಯಾರ್ಥಿಗಳು ಪಾಠ ಕೇಳುವ ದು:ಸ್ಥಿತಿ ತಲೆದೋರಿದೆ. ತರಗತಿ ಕೊಠಡಿಗಳಲ್ಲದೆ ಪ್ರಯೋಗಾಲಯ, ವಾಚನಾಲಯ ಕೊಠಡಿಗಳೂ ಸಹ ಶಿಥಿಲಗೊಂಡಿವೆ.

ಕಿಟಕಿಗಳು, ಪಿಲ್ಲರ್‌ಗಳ ಒಳಗಿನ ಕಬ್ಬಿಣ ಕಾಣುತ್ತಿದ್ದು, ಶಿಕ್ಷಕರು ಸದಾ ಭಯದಲ್ಲೆೀ ಪಾಠ ಮಾಡುವಂತಾಗಿದೆ.
1971ರಲ್ಲಿ ಆರಂಭವಾದ ಈ ಪ್ರೌಢಶಾಲೆ ಪದವಿಪೂರ್ವ ಕಾಲೇಜನ್ನೂ ಹೊಂದಿದೆ. ಪ್ರೌಢಶಾಲೆಯ ಮೂರು ತರಗತಿಗಳಲ್ಲಿ 107 ವಿದ್ಯಾರ್ಥಿಗಳು, ಕಾಲೇಜು ವಿಭಾಗದ ಎರಡು ತರಗತಿಗಳಲ್ಲಿ 50 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹಿಂದೊಮ್ಮೆ ಈ ಭಾಗದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರೌಢಶಾಲೆ ಎಂಬ ಹೆಗ್ಗಳಿಕೆ ಪಡೆದಿದ್ದ ಈ ಶಾಲೆ ಈಗ ಬೀಳುವ ಹಂತದಲ್ಲಿದ್ದು, ಜನಪ್ರತಿನಿಧಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಸುತ್ತಲಿನ ಕಬ್ಬಳ, ಕೊಟ್ಟಿಗೆ, ನಾಗರಕಟ್ಟೆ, ಗೌಡಿಹಳ್ಳಿ ಮತ್ತಿತರ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಆದರೆ, ಕಾಲೇಜು ಕಟ್ಟಡದ ಸ್ಥಿತಿ ನೋಡಿ ಪೋಷಕರು ಮಕ್ಕಳನ್ನು ಬೇರೆ ಕಡೆ ದಾಖಲಾತಿ ಮಾಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಮದ ಹಿರಿಯರು.

ಮಂದಗತಿಯ ಕಾಲೇಜು ಕಟ್ಟಡ ಕಾಮಗಾರಿ:  ಪದವಿಪೂರ್ವ ಕಾಲೇಜು ಕಟ್ಟಡವನ್ನು ಎನ್.ಜಿ. ಹಳ್ಳಿ ಗೇಟ್‌ನಲ್ಲಿ ನಿರ್ಮಿಸುತ್ತಿದ್ದು, ಮೂರು ವರ್ಷಗಳಾದರೂ ಕಾಮಗಾರಿ ಮುಗಿದಿಲ್ಲ. ನಬಾರ್ಡ್‌ನಿಂದ ಮಂಜೂರಾದ 2 ಕೊಠಡಿಗಳನ್ನಷ್ಟೇ ಪೂರ್ಣಗೊಳಿಸಿದ್ದಾರೆ. ಇನ್ನೂ 4 ಕೊಠಡಿಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಆಗಿದ್ದರೂ, ಕೆಲಸ ಮಂದಗತಿಯಲ್ಲಿ ನಡೆಯುತ್ತಿದೆ. ಕಟ್ಟಡ ನಿರ್ಮಿಸುತ್ತಿರುವ ಜಾಗಕ್ಕೆ ಹೊಂದಿಕೊಂಡಂತೆ ಸಣ್ಣ ಕೆರೆ ಇರುವುದರಿಂದ ಎರಡು ಕೊಠಡಿಗಳನ್ನಷ್ಟೇ ಕಟ್ಟಲಾಗುತ್ತಿದೆ.

ಈ ಬಗ್ಗೆ ಎಂಜಿನಿಯರ್ ವಿಶ್ವನಾಥ್ ಅವರನ್ನು ಕೇಳಿದರೆ, ತರಗತಿ ಕೊಠಡಿ, ಪ್ರಾಂಶುಪಾಲರ ಕೊಠಡಿ, ಕಚೇರಿ, ವಾಚನಾಲಯಗಳಿಗೆ 4 ಕೊಠಡಿ ನಿರ್ಮಿಸಲು ್ಙ 50 ಲಕ್ಷ ಮಂಜೂರಾಗಿದೆ. ಸದ್ಯ 2 ಕೊಠಡಿಗಳನ್ನು ಕಟ್ಟುತ್ತಿದ್ದು, ಕೆರೆ ಮುಚ್ಚಿಸಿಕೊಟ್ಟರೆ ಇನ್ನೆರಡು ಕೊಠಡಿ ನಿರ್ಮಿಸುತ್ತೇವೆ. ಇಲ್ಲವಾದರೆ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ ಎನ್ನುತ್ತಾರೆ.

ನಮಗೆ ಕಾಲೇಜು ಆರಂಭಿಸಲು ಕನಿಷ್ಠ 8 ಕೊಠಡಿಗಳಾದರೂ ಬೇಕು. ಈಗ 2 ಕೊಠಡಿಗಳು ಮಾತ್ರ ನಿರ್ಮಾಣವಾಗಿದ್ದು, ಕಾಲೇಜು ಸ್ಥಳಾಂತರಿಸಲು ಬರುವುದಿಲ್ಲ. ಗೇಟ್‌ನಲ್ಲಿ ಮುಖ್ಯರಸ್ತೆ ಇರುವುದರಿಂದ ಅಲ್ಲಿ ಕಾಲೇಜು ಆರಂಭಗೊಂಡರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತದೆ. ಕೊಠಡಿಗಳ ಸಮಸ್ಯೆ ಇರುವುದರಿಂದ ವಿಜ್ಞಾನ ವಿಭಾಗ ಆರಂಭಿಸಲಾಗುತ್ತಿಲ್ಲ. ಇದರಿಂದ ಸುತ್ತಲಿನ ವಿದ್ಯಾರ್ಥಿಗಳು ದೂರದ ಹೊಸದುರ್ಗ, ಹೊಳಲ್ಕೆರೆ ಪಟ್ಟಣಗಳಿಗೆ ಹೋಗುವ ಸ್ಥಿತಿ ಎದುರಾಗಿದೆ. ಈಗಿರುವ 2 ಕೊಠಡಿಗಳ ಜತೆಗೆ ಕನಿಷ್ಠ ಇನ್ನು 4 ಕೊಠಡಿಗಳನ್ನಾದರೂ ನಿರ್ಮಿಸಿ ಕೊಡಬೇಕು ಎನ್ನುತ್ತಾರೆ ಪ್ರಾಂಶುಪಾಲ ಎನ್.ಆರ್.ನಾಗರಾಜಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.