ADVERTISEMENT

ಶಾಲೆಗೆ ಪಠ್ಯಪುಸ್ತಕಗಳೇ ಬಂದಿಲ್ಲ!

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 6:44 IST
Last Updated 5 ಡಿಸೆಂಬರ್ 2013, 6:44 IST
ಮೊಳಕಾಲ್ಮುರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ಆದರ್ಶ ಶಾಲೆಯ ಹೊರನೋಟ.
ಮೊಳಕಾಲ್ಮುರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ಆದರ್ಶ ಶಾಲೆಯ ಹೊರನೋಟ.   

ಮೊಳಕಾಲ್ಮುರು: ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹತ್ತರ ಯೋಜನೆಯ ಕೇಂದ್ರೀಯ ಆದರ್ಶ ಶಾಲೆಗೆ ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆ ಕಾಡುತ್ತಿದ್ದು ಈಗ ನೂತನವಾಗಿ ಪಠ್ಯಪುಸ್ತಕ ಕೊರತೆ ಸಮಸ್ಯೆ ಎದುರಿಸುತ್ತಿದೆ.

5–10ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಶಾಲೆಯಾದ ಇಲ್ಲಿ ಈಗ 5–9ರವರೆಗೆ ತರಗತಿಗಳು ನಡೆಯುತ್ತಿದ್ದು, 303 ವಿದ್ಯಾರ್ಥಿ ಗಳಿದ್ದಾರೆ. ಈ ವರ್ಷ ಸೆಪ್ಟೆಂಬರ್‌ ಕಳೆದರೂ ಶಿಕ್ಷಕರ ನೇಮಕವಾಗದೇ ಪಾಠ ಪ್ರವಚನ ಸರಿಯಾಗಿ ನಡೆಯಲಿಲ್ಲ. ಇದರ ಜತೆಗೆ 6 ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ದ್ವಿತೀಯ ಸೆಮಿಷ್ಟರ್‌ ಪಠ್ಯಪುಸ್ತಕಗಳನ್ನು ಈವರೆಗೂ ನೀಡದ ಪರಿಣಾಮ ಅಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಮೂಲಗಳು ತಿಳಿಸಿವೆ.

6ನೇ ತರಗತಿಯಲ್ಲಿ 80 ವಿದ್ಯಾರ್ಥಿಗಳಿದ್ದು, 64 ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆ ಪುಸ್ತಕ ನೀಡಿಲ್ಲ, ಕನ್ನಡ ಪುಸ್ತಕ ಯಾರಿಗೂ ನೀಡಿಲ್ಲ, ಐಚ್ಛಿಕ ವಿಷಯ ಪುಸ್ತಕವನ್ನು 40 ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗಿದೆ. 7ನೇ ತರಗತಿಯಲ್ಲಿ 20 ವಿದ್ಯಾರ್ಥಿಗಳಿಗೆ ಐಚ್ಛಿಕ ಹಾಗೂ 19 ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳ ಪಠ್ಯಪುಸ್ತಕವನ್ನು ಸರಬರಾಜು ಆಗದ ಕಾರಣ ನೀಡಿಲ್ಲ ಎಂದು ಮುಖ್ಯಶಿಕ್ಷಕ ಎಂ. ಮಲ್ಲಿಕಾರ್ಜುನ್‌ ಸೋಮವಾರ ತಿಳಿಸಿದರು.
ಶಾಲೆ ಆರಂಭದಲ್ಲಿ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿಗೆ ಸರಬರಾಜು ಆಗಿದ್ದ ಪಠ್ಯಪುಸ್ತಕಗಳು ವಾಪಾಸ್ ಹೋಗಿವೆ ಎನ್ನಲಾಗಿದೆ. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೇ ಪಠ್ಯಪುಸ್ತಕ ವಿತರಣೆಗೆ ಕ್ರಮ ಕೈಗೊಳ್ಳುವ ಮೂಲಕ ಗಡಿ ತಾಲ್ಲೂಕಿನ ವಿದ್ಯಾರ್ಥಿಗಳ ನೆರವಿಗೆ ಬರಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.