ADVERTISEMENT

ಶಿಕ್ಷಣ ಸಾಲಕ್ಕೆ ವಾಸಸ್ಥಳದ ನಿರ್ಬಂಧ ಇಲ್ಲ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರ್‌ಬಿಐ ಸಹಾಯಕ ಪ್ರಬಂಧಕ ಜಿ.ಎಚ್. ರಾವ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 6:42 IST
Last Updated 15 ಡಿಸೆಂಬರ್ 2012, 6:42 IST

ಚಿತ್ರದುರ್ಗ: ನಿವಾಸ ಸ್ಥಳದ ವ್ಯಾಪ್ತಿಯಲ್ಲಿಯೇ ಬ್ಯಾಂಕ್‌ಗಳಿಂದ ಶಿಕ್ಷಣ ಸಾಲ ಪಡೆಯಬೇಕು ಎನ್ನುವ ನಿಯಮ ಅನ್ವಯ ಆಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಜಿ.ಎಚ್. ರಾವ್ ತಿಳಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಬ್ಯಾಂಕರ್ಸ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರಿಗೆ ಈ ಬಗ್ಗೆ ನಿರ್ದೇಶನ ನೀಡಿದರು.
ಶಿಕ್ಷಣ ಸಾಲ ಪಡೆಯುವವರು ನಿವಾಸಿ ಸ್ಥಳ ಬಿಟ್ಟು ಅವರು ಇಚ್ಛಿಸಿದ ಯಾವುದೇ ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಅವಕಾಶವಿದೆ. ಯಾವುದೇ ಬ್ಯಾಂಕ್‌ಗಳು ಸೇವಾ ಪ್ರದೇಶದಲ್ಲಿ ಪಡೆಯಬೇಕೆಂದು ಸಾಲ ನಿರಾಕರಿಸುವಂತಿಲ್ಲ. ಆದರೆ, ಸರ್ಕಾರ ಪ್ರಾಯೋಜಕತ್ವದ ಯೋಜನೆಗಳಿಗೆ ಮಾತ್ರ ವಾಸಸ್ಥಳದ ವ್ಯಾಪ್ತಿಯಲ್ಲಿನ ಸೇವಾ ಬ್ಯಾಂಕ್‌ಗಳಲ್ಲಿ ಪಡೆಯಬೇಕೆಂಬ ನಿಯಮವಿದೆ ಎಂದರು.

ಆರ್ಥಿಕ ಸೇರ್ಪಡೆ ಕಾರ್ಯಕ್ರಮದ ಅಡಿ ಎರಡು ಸಾವಿರ ಜನಸಂಖ್ಯೆಗಿಂತ ಹೆಚ್ಚಿರುವ ಗ್ರಾಮಗಳಲ್ಲಿ ವ್ಯವಹಾರ ಪ್ರತಿನಿಧಿ ಮತ್ತು ಕಿರು ಶಾಖೆಗಳನ್ನು ಆರಂಭಿಸುವ ಮೂಲಕ ಬ್ಯಾಂಕಿಂಗ್ ಸೇವೆಯನ್ನು ಕಲ್ಪಿಸಲಾಗುತ್ತಿದೆ. ಅದೇ ರೀತಿ ಎರಡು ಸಾವಿರಕ್ಕಿಂತ ಕಡಿಮೆ ಮತ್ತು ್ಙ 600ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಿಗೂ ಬ್ಯಾಂಕ್ ಸೇವೆ ವಿಸ್ತರಿಸಲು ಪ್ರತಿ ವರ್ಷ ಎಲ್ಲ ಬ್ಯಾಂಕ್‌ಗಳು ಸೇವೆಯನ್ನು ವಿಸ್ತರಿಸಿಕೊಳ್ಳಬೇಕು.

ಚಿತ್ರದುರ್ಗ ಜಿಲ್ಲೆಯಲ್ಲಿ 2 ಸಾವಿರಕ್ಕಿಂತ ಕಡಿಮೆ ಮತ್ತು 600 ಜನಸಂಖ್ಯೆಗಿಂತ ಹೆಚ್ಚು ಇರುವ 656 ಗ್ರಾಮಗಳಿವೆ ಎನ್ನುವ ಅಂಕಿ ಅಂಶ ನೀಡಲಾಗಿದ್ದು, ಈ ಗ್ರಾಮಗಳ ವ್ಯಾಪ್ತಿಯಲ್ಲಿ ಎಷ್ಟುಬ್ಯಾಂಕ್‌ಗಳು ಸೇವೆ ನೀಡುತ್ತಿವೆ ಎನ್ನುವ ಮಾಹಿತಿಯನ್ನು ಮುಂದಿನ ಸಭೆ ಒಳಗೆ ನೀಡುವಂತೆ ಲೀಡ್ ಬ್ಯಾಂಕ್ ಮ್ಯೋನೇಜರ್‌ಗೆ ತಿಳಿಸಿದರು.

ನಬಾರ್ಡ್ ಸಹಾಯಕ ಮಹಾಪ್ರಬಂಧಕ ಪ್ರಕಾಶ್ ಭಂಡಾರಿ ಮಾತನಾಡಿ, ಕೇಂದ್ರ ಸರ್ಕಾರದ ಕೃಷಿ ಮತ್ತು ಸಹಕಾರ ಸಚಿವಾಲಯದಿಂದ ಬರಪೀಡಿತ ರಾಜ್ಯಗಳಲ್ಲಿನ ತೋಟಗಾರಿಕೆ ಬೆಳೆಗಳ ರಕ್ಷಣೆಗಾಗಿ ಗರಿಷ್ಠ ್ಙ 60 ಸಾವಿರದವರೆಗೆ ಸಾಲವನ್ನು ಶೇ 3ರ ಬಡ್ಡಿ ದರದಲ್ಲಿ ಮೂರು ವರ್ಷಗಳ ಅವಧಿಗೆ ನೀಡಲು ಮಾರ್ಗಸೂಚಿ ನೀಡಿದೆ.

ಬರಪೀಡಿತ ಎಂದು ಘೋಷಣೆಯಾದ ಜಿಲ್ಲೆ, ತಾಲ್ಲೂಕುಗಳಲ್ಲಿನ ತೋಟಗಾರಿಕೆ ಬೆಳೆಗಾರರು ಎರಡು ಹೆಕ್ಟೇರ್‌ಗೆ ್ಙ 30 ಸಾವಿರ ಮತ್ತು ಗರಿಷ್ಠ 4 ಹೆಕ್ಟೇರ್‌ಗೆ 60 ಸಾವಿರದವೆರೆಗೆ ಸಾಲ ಪಡೆಯಲು ಅವಕಾಶವಿದೆ. ಬರಪೀಡಿತ ಪ್ರದೇಶದ ತೋಟಗಾರಿಕೆ ಬೆಳೆಗಾರರು ಜಲ ಸಂರಕ್ಷಣೆ, ಪೂರಕ ನೀರಾವರಿ ಸೌಲಭ್ಯ, ಬದು ನಿರ್ಮಾಣಗಳಿಗಾಗಿ ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದು. ಸಾಲ ಪಡೆಯಲು 2012  ಡಿ. 31 ಕೊನೆಯ ದಿನವಾಗಿರುತ್ತದೆ ಎಂದರು.

12ನೇ ಪಂಚವಾರ್ಷಿಕ ಯೋಜನೆ ಅಡಿ ಜಿಲ್ಲೆಯಲ್ಲಿನ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸಾಮರ್ಥ್ಯ ಇರುವ ಸಾಲ ಯೋಜನೆಯನ್ನು ನಬಾರ್ಡ್‌ನಿಂದ ತಯಾರಿಸಲಾಗಿದೆ. 2012-13ರಿಂದ 2016-17ರವರೆಗೆ ಸಾಲ ಯೋಜನೆ ತಯಾರಿಸಲಾಗಿದ್ದು, ಬರುವ 2013-14ನೇ ಸಾಲಿನಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗಾಗಿ ್ಙ 1,488 ಕೋಟಿ ಹಾಗೂ ಇತರ ಆದ್ಯತಾ ವಲಯಕ್ಕ್ಙೆ 353 ಕೋಟಿ ಸೇರಿದಂತೆ ಒಟ್ಟ್ಙು 1,926 ಕೋಟಿ ವಿವಿಧ ಬ್ಯಾಂಕ್‌ಗಳ ಮೂಲಕ ಸಾಲ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಪ್ರಸಕ್ತ ಸಾಲಿಗಿಂತ ಶೇ. 30ರಷ್ಟು ಕೃಷಿ ಸಾಲವನ್ನು ಹೆಚ್ಚಾಗಿ ನೀಡಲು ಯೋಜನೆ ರೂಪಿಸಲಾಗಿದೆ. ಸ್ವಸಹಾಯ ಗುಂಪುಗಳ ಬಲವರ್ಧನೆಗಾಗಿ ಈಗಾಗಲೇ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಜಿಲ್ಲೆಯಲ್ಲಿ 9,500 ಹೆಚ್ಚುವರಿ ಗುಂಪುಗಳನ್ನು ರಚಿಸಲಾಗಿದ್ದು, ನಬಾರ್ಡ್‌ನಿಂದ ್ಙ 10 ಸಾವಿರ ಸಹಾಯಧನ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ ಜಿಲ್ಲೆಯ ಮುಂದಿನ 5 ವರ್ಷಗಳ ಸಾಲ ಯೋಜನೆಯನ್ನು ಬಿಡುಗಡೆ ಮಾಡಿ ಮಾತನಾಡಿ ಬ್ಯಾಂಕ್‌ಗಳು ಸಹ ಸರ್ಕಾರದ ಪ್ರಾಯೋಜಕತ್ವದ ಯೋಜನೆಗಳಿಗೆ ಸ್ಪಂದಿಸಬೇಕು. ಕೆಲವು ಬ್ಯಾಂಕ್‌ಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಸಹ ಬಂದಿವೆ ಎಂದು ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಸಭೆಗೆ ಗೈರು ಹಾಜರಾಗಿದ್ದು, ಅವರಿಗೆ ನೋಟಿಸ್ ನೀಡುವಂತೆ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕರಿಗೆ ತಿಳಿಸಿದರು.

ಜಿಲ್ಲಾ ವ್ಯವಸ್ಥಾಪಕರ ಪರವಾಗಿ ಹಾಜರಾಗಿದ್ದ ಹಿರಿಯ ಸಹಾಯಕರನ್ನು ಸಭೆಯಿಂದ ಹೊರ ಹೋಗುವಂತೆ ತಿಳಿಸಿದರು.ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಬಿರಾದಾರ್,ಉಪ ವಿಭಾಗಾಧಿಕಾರಿಎನ್.ಎಂ. ನಾಗರಾಜ್, ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಲಕ್ಷ್ಮೀನಾರಾಯಣ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಆರ್.ಸಿ. ಪಾಟೀಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.