ADVERTISEMENT

ಶೇಂಗಾ ತವರಿನಲ್ಲಿ ಮಳೆಯಾಶ್ರಿತ ತೊಗರಿ!

ಜಿಲ್ಲೆಯ ವಿವಿಧೆಡೆ 600 ಎಕರೆಯಲ್ಲಿ ಕೃಷಿ, ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರ

ಗಾಣಧಾಳು ಶ್ರೀಕಂಠ
Published 19 ಜನವರಿ 2016, 10:40 IST
Last Updated 19 ಜನವರಿ 2016, 10:40 IST
ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿ ಸಮೀಪದಲ್ಲಿ ರೈತ ಚಿದಾನಂದಪ್ಪ ಅವರ ಜಮೀನಿನಲ್ಲಿರುವ ತೊಗರಿ ಬೆಳೆ.
ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿ ಸಮೀಪದಲ್ಲಿ ರೈತ ಚಿದಾನಂದಪ್ಪ ಅವರ ಜಮೀನಿನಲ್ಲಿರುವ ತೊಗರಿ ಬೆಳೆ.   

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಅತಿವೃಷ್ಟಿ, ಅನಾವೃಷ್ಟಿ ಯಿಂದ ಈರುಳ್ಳಿ, ಶೇಂಗಾ ಬೆಳೆ ತುಸು ಕಣ್ಣಾಮುಚ್ಚಾಲೆ ಆಡಿದರೂ, ಮಳೆ ಆಶ್ರಿತದಲ್ಲಿ ಏಕಬೆಳೆಯಾಗಿ ಬಿತ್ತಿದ್ದ ತೊಗರಿ ಫಸಲು ಕೈಹಿಡಿಯುವ ಸೂಚನೆ ತೋರಿದೆ..!

ಚಳ್ಳಕರೆ ತಾಲ್ಲೂಕಿನ ವಿಡುಪನ ಕುಂಟೆ, ಮೀರಸಾಬಿಹಳ್ಳಿ, ಕರೀಕೆರೆ ಸೇರಿದಂತೆ ಸುತ್ತಮುತ್ತ 600 ಎಕರೆಗೂ ಹೆಚ್ಚು ಪ್ರದೇಶದಲ್ಲಿ  ಬೆಳೆದಿರುವ ತೊಗರಿ ಕೊಯ್ಲಿಗೆ ಬಂದಿದ್ದು, ಬೆಳೆದವರಲ್ಲಿ ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದೆ.

ಪ್ರತಿ ವರ್ಷ ಈ ಭಾಗದ ಕೆಲವು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಬೀಜ ವಿತರಿಸಿ, ಖರೀದಿಯ ಖಾತರಿ ಹಾಗೂ ಒಪ್ಪಂದ ಮಾಡಿಕೊಂಡು, ತೊಗರಿ ಬೆಳೆಸುವ ಪರಿಪಾಠವಿದೆ. ತಾಲ್ಲೂಕಿನ 15ರಿಂದ 20 ರೈತರು ಆ ಪದ್ಧತಿಯಲ್ಲಿ ತೊಗರಿ ಬೆಳೆಯುತ್ತಿದ್ದಾರೆ. ಇದು ಮಳೆಯಾಶ್ರಿತ ಬೆಳೆಯಾಗಿದ್ದು, ಕನಿಷ್ಠ 15ರಿಂದ 60 ಎಕರೆವರೆಗೆ ತೊಗರಿ ಬೆಳೆಯುವ ರೈತರಿದ್ದಾರೆ.

60 ಎಕರೆಯಲ್ಲಿ ಬೆಳೆ: ಮೀರಸಾಬಿಹಳ್ಳಿ ಸಮೀಪದ ಕೈಮರಕ್ಕೆ ಹೊಂದಿಕೊಂಡ ಜಮೀನಿನಲ್ಲಿ ರೈತ ಚಿದಾನಂದಪ್ಪ ಈ ಬಾರಿ 60 ಎಕರೆಯಲ್ಲಿ ತೊಗರಿ ಬೆಳೆದಿ ದ್ದಾರೆ. ಇದು ತಾಲ್ಲೂಕಿನಲ್ಲಿ ಹೆಚ್ಚು ಎಕರೆ ಯಲ್ಲಿ ತೊಗರಿ ಬೆಳೆದ ದಾಖಲೆ. ಅವರ ಜಮೀನಿನಲ್ಲಿ ತೊಗರಿ ಕೊಯ್ಲು ಪ್ರಕ್ರಿಯೆ ಆರಂಭವಾಗಿದೆ. ನಿತ್ಯ 40 ಕೂಲಿ ಆಳುಗಳ ಜತೆ 40 ಎಕರೆ ತೊಗರಿ ಕೊಯ್ಲು ಮಾಡಿದ್ದಾರೆ. ಕಳೆದ ವರ್ಷ 24 ಎಕರೆಗೆ ತೊಗರಿ ಹಾಕಿದ್ದರು. 110 ಕ್ವಿಂಟಲ್ ಇಳುವರಿ ಬಂದಿತ್ತು. ಎಕರೆಗೆ ಸರಾಸರಿ ನಾಲ್ಕೂವರೆ ಕ್ವಿಂಟಲ್‌ನಂತೆ ಇಳುವರಿ ಸಿಕ್ಕಿತ್ತು. ಈ ವರ್ಷ 60 ಎಕರೆಗೆ ಹಾಕಿದ್ದಾರೆ  200 ಕ್ವಿಂಟಲ್‌ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಮಳೆಯಾಶ್ರಿತ ತೊಗರಿ: ಅಕ್ಕಡಿ ಸಾಲಿನಲ್ಲಿ ಬೆಳೆಯುವ ತೊಗರಿ ಬೆಳೆ ಯನ್ನು ಈ ಭಾಗದ ಕೆಲವು ರೈತರು ಮಳೆಯಾಶ್ರಿತವಾಗಿ ಏಕ ಬೆಳೆಯಾಗಿ, ಬಹುದೊಡ್ಡ ಹಿಡುವಳಿ­ಯಲ್ಲಿ ಬೆಳೆಯು ತ್ತಾರೆ. ಅದು ಮಳೆಯಾಶ್ರಿತದಲ್ಲಿ ಬೆಳೆಯು ವುದು ವಿಶೇಷ.

‘ನಮ್ಮಲ್ಲಿ ಮಳೆ ಕಡಿಮೆ ಇದೆ. ಆದರೆ, ಭೂಮಿ ಫಲವತ್ತತೆ ಕಳೆದು ಕೊಂಡಿಲ್ಲ. ಹಾಗಾಗಿ ಎಕರೆಗೆ ನಾಲ್ಕೈದು ಪಾಕೆಟ್ ಡಿಎಪಿ ಹಾಕಿದ್ದು ಬಿಟ್ಟು ಬೇರೆ ಯಾವ ರಸಗೊಬ್ಬರ ಹಾಕುವುದಿಲ್ಲ. ಈ ಬಾರಿ ಸ್ವಲ್ಪ ಹವಾಮಾನ ಹೆಚ್ಚು ಕಡಿಮೆಯಾಗಿದ್ರಿಂದ ಬೆಳೆಗೆ ಹುಳು ಬಾಧೆ ಹೆಚ್ಚಾಯಿತು. ಆಗ ಒಂದಷ್ಟು ಔಷಧ ಸಿಂಪಡಿಸಿದ್ದೇನೆ. ಉಳಿದಂತೆ ಬೇರೆ ಶ್ರಮ ಇಲ್ಲ. ಈ ಬಾರಿ ತೊಗರಿ ಚೆನ್ನಾಗಿ ಬಂದಿತ್ತು. ಒಂದೊಂದು ಗಿಡ ಮನುಷ್ಯನ ಎತ್ತರ ಬೆಳೆದಿತ್ತು. ದಾರಿ ಹೋಕರು ಅಚ್ಚರಿ ಪಡುತ್ತಿದ್ದರು’ ಎನ್ನುತ್ತಾ ಚಿದಾನಂದಪ್ಪ ತೊಗರಿ ಬೆಳವಣಿಗೆ ವಿವರಿಸುತ್ತಾರೆ.

ಜಿಕೆವಿಕೆಯೊಡನೆ ಒಪ್ಪಂದ: ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯ ದವರೇ ಬೀಜ ವಿತರಿಸುತ್ತಾರೆ.  ಎಕರೆಗೆ ಅಂದಾಜು 95 ಕೆ.ಜಿ ಬೀಜ ಬೇಕು, ಗೊಬ್ಬರ, ಔಷಧ ಎಲ್ಲ ಸೇರಿ ₹ 2,500 ಖರ್ಚಾಗಬಹುದು. ಕೃಷಿ ವಿವಿಯಿಂದ ಕೊಡುವ ಬೀಜಗಳು ಗಟ್ಟಿಯಾಗಿರುತ್ತವೆ. ಹುಟ್ಟುವ ಪ್ರಮಾಣವೂ ಉತ್ತಮ. ಪ್ರಮಾಣೀಕೃತ­ ಆಗಿರುವು­ದರಿಂದ ಜೊಳ್ಳು ಇರುವುದಿಲ್ಲ ಎನ್ನುವುದು ಬಿತ್ತನೆ ಬೀಜಗಳಿಗೆ ರೈತರು ಕೊಡುವ ಸರ್ಟಿಫಿಕೇಟ್‌.

‘ಬೆಳೆದ ಬೆಳೆಯನ್ನು ಕೃಷಿ ವಿವಿಗೆ ಕೊಡ್ತೀವಿ. ಅದು ಬೀಜ ಕೊಡ ಬೇಕಾದರೆ ಒಪ್ಪಂತವಾಗಿರುತ್ತದೆ. ಬೀಜ ಕೊಟ್ಟಾಗ ನಮ್ಮ ಸರ್ವೆ ನಂ. ವಿಳಾಸ ಎಲ್ಲ ಗುರುತು ಹಾಕಿಕೊಳ್ಳುತ್ತಾರೆ. ಬೆಳೆಯನ್ನು ವಿವಿಗೆ ಮಾರುವುದರಿಂದ ಒಂದಷ್ಟು ಹೆಚ್ಚುವರಿ ಸಬ್ಸಿಡಿ ಹಣ ಸಿಗುತ್ತದೆ. ಖರೀದಿ ಕಾಯಂ ಆಗಿರುವುದರಿಂದ ಬೆಳೆದು ಕೊಡುವುದು ಸುಲಭ. ನಾವು ಬೆಳೆದುಕೊಟ್ಟ ಬೆಳೆ, ನಾಡಿನ ಬೇರೆ ಭಾಗದ ರೈತರಿಗೆ ಬೀಜದ ರೂಪದಲ್ಲೇ ವಿವಿಯವರು ವಿತರಿಸುತ್ತಾರೆ’ ಎನ್ನುತ್ತಾರೆ ಚಿದಾನಂದಪ್ಪ.

ಸ್ಥಳೀಯವಾಗಿ ಮಾರಾಟ: ಜಿಕೆವಿಕೆಗೆ ಮಾರಾಟ ಮಾಡಿ ಉಳಿಯುವ ಫಸಲನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಾರೆ. ಕಳೆದ ವರ್ಷ ಜಿಕೆವಿಕೆಯಲ್ಲಿ ಕ್ವಿಂಟಲ್‌ ತೊಗರಿಯನ್ನು ₹ 6,500ಕ್ಕೆ ಖರೀದಿಸಿದ್ದ ರಂತೆ. ಒಂದಷ್ಟು ಬೆಳೆ ಅಲ್ಲಿಂದ ತಿರಸ್ಕರಿ ಸಲಾಗಿತ್ತು. ಆ ಬೆಳೆಗೆ ಚಿತ್ರದುರ್ಗ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 4,900 ರಂತೆ ಮಾರಾಟ ಮಾಡಿದ್ದಾರೆ. ಈ ವರ್ಷ ಕ್ವಿಂಟಲ್ ತೊಗರಿ ಬೆಲೆ ₹ 8,500 ಇದೆಯಂತೆ ಎನ್ನುತ್ತಾ ರೈತರು ಮಾರುಕಟ್ಟೆ ಲೆಕ್ಕಾಚಾರ ಬಿಡಿಸಿಡುತ್ತಾರೆ.

ಒಟ್ಟಾರೆ ಅರೆಬರೆ ಮಳೆ, ಹವಾಮಾನ ವೈಪರೀತ್ಯದ ನಡುವೆಯೂ ಕೃಷಿಕರು ಸಾಂಪ್ರದಾಯಿಕ ಬೆಳೆಗಳಲ್ಲಿ ವಿಶ್ವಾಸವಿಟ್ಟು ಬೆಳೆಯುತ್ತಿರುವುದಕ್ಕೆ ಚಳ್ಳಕೆರೆ ತಾಲ್ಲೂಕಿನ ತೊಗರಿ ಕೃಷಿ ಉತ್ತಮ ಉದಾಹರಣೆಯಾಗಿದೆ.

ಒಂದು ಟ್ರ್ಯಾಕ್ಟರ್‌ 10 ಕಾರ್ಮಿಕರಿಗೆ ಸಮ!
‘ಒಂದು ಟ್ರ್ಯಾಕ್ಟರ್, ಹತ್ತಾರು ಕಾರ್ಮಿಕರಿಗೆ ಸಮ ಸಾರ್. ಉಳುಮೆ, ಬಿತ್ತನೆ, ಕುಂಟೆ, ರೊಟೊವೇಟರ್‌... ಹೀಗೆ ಎಲ್ಲವುದಕ್ಕೂ ಒಂದೊಂದು ಉಪಕರಣ ಗಳನ್ನು ಟ್ರ್ಯಾಕ್ಟರ್‌ಗೆ ಜೋಡಿಸುತ್ತೇನೆ. ಕೆಲಸ ಸುಲಭವಾಗುತ್ತದೆ...’

ಕೂಲಿ ಕಾರ್ಮಿಕರ ಸಮಸ್ಯೆಗೆ ಏನು ಪರಿಹಾರ ಎಂದು ರೈತ ಚಿದಾನಂದಪ್ಪನವರನ್ನು ಕೇಳಿದಾಗ, ‘ತಮ್ಮ ಬಳಿಯಿರುವ ಟ್ರ್ಯಾಕ್ಟರ್‌ ಸಹಕಾರವನ್ನು ಉಲ್ಲೇಖಿಸುತ್ತಾ ಆತ್ಮವಿಶ್ವಾಸದಿಂದ ಉತ್ತರಿಸುತ್ತಾರೆ.

ಟ್ರ್ಯಾಕ್ಟರ್‌ಗೆ ಎಲ್ಲ ರೀತಿಯ ಉಪಕರಣಗಳನ್ನು ಅಳವಡಿಸುತ್ತಾರೆ. ಇದರ ಜತೆಗೆ ಕಾರ್ಮಿಕರನ್ನು ಬಳಸುತ್ತಾರೆ. ‘ತೊಗರಿ ಕೊಯ್ಲಾಗುವ ಹೊತ್ತಿಗೆ ಶೇಂಗಾ ಬೆಳೆ ಕೆಲಸ ಮುಗಿದಿರುತ್ತದೆ. ಹಾಗಾಗಿ, ಅಲ್ಲಿದ್ದ ಕಾರ್ಮಿಕರು ನಮಗೆ ಲಭ್ಯವಾಗುತ್ತಾರೆ.  ಕೊಯ್ಲು ಆಗುವವರೆಗೂ ಪ್ರತಿ ದಿನ 40 ಮಂದಿ ಕಾರ್ಮಿಕರನ್ನು ಬಳಸಿಕೊಳ್ಳುತ್ತೇವೆ’ ಎನ್ನುತ್ತಾರೆ.

‘ನಮ್ಮದು ಭೂಮಿ ಚೆನ್ನಾಗಿದೆ. ಕೊಯ್ಲಾದ ಮೇಲೆ ತೊಗರಿ ಗಿಡಗಳನ್ನು ರೊಟೊವೇಟರ್ ಮೂಲಕ ಭೂಮಿಗೆ ಹರಗುತ್ತೇವೆ. ಹಾಗಾಗಿ ರಸಗೊಬ್ಬರ ಬಳಕೆ ಕಡಿಮೆ. ಹಾಗೆ ಬಿತ್ತನೆ ಮಾಡಿ, ಸಾಲಿಂದ ಸಾಲಿಗೆ ಅಂತರ ಹೆಚ್ಚುಕೊಟ್ಟರೆ ಇಳುವರಿ ಚೆನ್ನಾಗಿರುತ್ತದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT