ADVERTISEMENT

ಶೇಂಗಾ ಬಿತ್ತನೆ ಉಪಕರಣದ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 10:32 IST
Last Updated 19 ಜುಲೈ 2013, 10:32 IST

ನಾಯಕನಹಟ್ಟಿ: `ಬಿತ್ತನೆ ಬೀಜದ ಉಪಕರಣವಾದ ಸಂಯುಕ್ತ ಕೂರಿಗೆಯಿಂದ ಬಿತ್ತನೆ ಕಾರ್ಯ ಕೈಗೊಂಡರೆ ರೈತರ ಶ್ರಮ, ಹಾಗೂ ಸಮಯ ಉಳಿತಾಯವಾಗುತ್ತದೆ' ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಸ್ಫೂರ್ತಿ ಹೇಳಿದರು.

ಇಲ್ಲಿನ ರೈತ ಸಂಪರ್ಕ ಕೇಂದ್ರದ ಬಳಿಯ ಹೊಲದಲ್ಲಿ ಗುರುವಾರ ಶೇಂಗಾ ಬಿತ್ತನೆ ಬೀಜ ಉಪಕರಣವಾದ ಸಂಯುಕ್ತ ಕೂರಿಗೆಯ ಪ್ರಾತ್ಯಕ್ಷಿಕೆಯನ್ನು ರೈತರಿಗೆ ನೀಡಿ ಅವರು ಮಾತನಾಡಿದರು.

ಈ ಕೂರಿಗೆಯಲ್ಲಿ ಬೀಜ ಹಾಗೂ ಗೊಬ್ಬರವನ್ನು ಏಕಕಾಲಕ್ಕೆ ಬಿತ್ತನೆ ಮಾಡಬಹುದಾಗಿದೆ. ಉಪಕರಣವನ್ನು ಟ್ರ್ಯಾಕ್ಟರ್‌ಗೆ ಜೋಡಿಸಿದರೆ ಒಂದು ದಿನಕ್ಕೆ 15ರಿಂದ18 ಎಕರೆ ಬಿತ್ತನೆಯಾಗುತ್ತದೆ.

ನಾಯಕನಹಟ್ಟಿ ಹಾಗೂ ನೇರಲಗುಂಟೆಯ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಟ್ರ್ಯಾಕ್ಟರ್ ಹಾಗೂ ಸಂಯುಕ್ತ ಕೂರಿಗೆಯನ್ನು ನೀಡಲಾಗಿದೆ. ಇಲ್ಲಿ ರೈತರಿಗೆ ಈ ಉಪಕರಣ ಬಾಡಿಗೆ ದೊರೆಯುತ್ತದೆ ಎಂದು ತಿಳಿಸಿದರು.

ಇದರ ಮೂಲ ಬೆಲೆ ರೂ 55 ಸಾವಿರವಾಗಿದ್ದು, ರೈತರಿಗೆ ಸಬ್ಸಿಡಿ ದರ ರೂ 26,500ಗೆ ದೊರೆಯುತ್ತದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಇದಕ್ಕೆ ಹೆಚ್ಚಿನ ಕೂಲಿಕಾರರು ಬೇಕಾಗಿಲ್ಲ.

ಇದರಿಂದ ಶ್ರಮ, ಹಣ, ಹಾಗೂ ಸಮಯ ಉಳಿತಾಯವಾಗುತ್ತದೆ. ಕಡಿಮೆ ಮಳೆ ಬೀಳುವ ಪ್ರದೇಶವಾದ್ದರಿಂದ ಭೂಮಿಯ ತೇವಾಂಶ ಬೇಗ ಕಡಿಮೆಯಾಗುತ್ತದೆ. ಈ ಉಪಕರಣವನ್ನು ಉಪಯೋಗಿಸಿದರೆ ಈ ಸಮಸ್ಯೆಯನ್ನು ತಡೆಯಬಹುದಾಗಿದೆ ಎಂದು ಅವರು ತಿಳಿಸಿದರು. ಕೃಷಿ ಅಧಿಕಾರಿ ಗಿರೀಶ್, ಶ್ರೀನಿವಾಸ್, ಹಾಗೂ ರೈತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT