
ಮೊಳಕಾಲ್ಮುರು: ‘ಒಂದೆಡೆ ಮಳೆ ಇಲ್ಲ... ಮತ್ತೊಂದೆಡೆ ಅಂತರ್ಜಲ ಬಳಸಿಕೊಂಡು ಕೃಷಿ ಮಾಡಲು ಎಷ್ಟೇ ಆಳಕ್ಕೆ ಕೊರೆಸಿದರೂ ದೊರೆಯದ ನೀರು, ಪರಿಣಾಮ ಯಾವುದೇ ಪರ್ಯಾಯ ಮಾರ್ಗ ಕಾಣದೇ ಇರುವ ಕಿಂಚತ್ತು ನೀರಿನಲ್ಲಿ ಕೃಷಿ ಮಾಡಬೇಕು ಅಥವಾ ತೋಟ ಬೀಳು ಬಿಡಬೇಕು...!
–ಇದು ಸಧ್ಯದ ತಾಲ್ಲೂಕಿನ ನೀರಾವರಿ ಪ್ರದೇಶದಲ್ಲಿದ ಕೃಷಿ ಚಿತ್ರಣ.
‘ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದ ಪ್ರಮುಖ ಬೆಳೆ ಶೇಂಗಾ, ಇದೇ ರೀತಿ ಹತ್ತಾರು ವರ್ಷಗಳಿಂದ ಮುಂಗಾರು ಹಂಗಾಮಿನಲ್ಲಿ
ನೀರಾವರಿ ಪ್ರದೇಶದ ಮುಖ್ಯ ವಾಣಿಜ್ಯ ಬೆಳೆಯಾಗಿ ಈರುಳ್ಳಿ ಹೊರಹೊಮ್ಮಿದೆ. ಜೂನ್‌ನಿಂದ ಡಿಸೆಂಬರ್‌ಗೆ ಕೂಲಿ ಕಾರ್ಮಿಕರಿಗೆ ಆಸರೆ ಆಗಿರುವುದು ಮುಖ್ಯವಾಗಿ ಈರುಳ್ಳಿ ಎನ್ನಲಾಗಿದೆ.
ತೋಟಗಾರಿಕೆ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ರವಿಕುಮಾರ್ ಮಾಹಿತಿ ನೀಡಿ, ‘ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 1200–1300 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ನಾಟಿ ಮಾಡಿವ ಗುರಿ ಹೊಂದಲಾಗಿದೆ. ಇದು ಕಳೆದ ವರ್ಷ 300 ಹೆಕ್ಟೇರ್‌ನಷ್ಟು ಕುಸಿತವಾಗಿತ್ತು.
ಈ ಬಾರಿ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ತೀವ್ರ ಕುಸಿತವಾಗಿರುವಮತ್ತು ಮುಂಗಾರು ತಡವಾಗಿ ಆರಂಭವಾದ ಕಾರಣ 450–500 ಹೆಕ್ಟೇರ್‌ನಲ್ಲಿ ಮಾತ್ರ ನಾಟಿಯಾಗುವ ಮೂಲಕ ಶೇ 50ಕ್ಕೂ ಹೆಚ್ಚು ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.
ಮೊಳಕಾಲ್ಮುರು ಕಸಬಾ ಹೋಬಳಿ ವ್ಯಾಪ್ತಿ ಬಿ.ಜಿ.ಕೆರೆ, ಚಿಕ್ಕೋಬನಹಳ್ಳಿ, ಮುತ್ತಿಗಾರಹಳ್ಳಿ, ಕೋನಸಾಗರ, ಸೂರಮ್ಮನ ಹಳ್ಳಿ, ರಾಯಾಪುರ, ಹಾನಗಲ್, ಪೂಜಾರಹಳ್ಳಿ, ತುಮಕೂರ್ಲ ಹಳ್ಳಿ ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಚ್ಚು ಈರುಳ್ಳಿ ನಾಟಿ ಮಾಡಲಾಗಿದೆ.
ದೇವಸಮುದ್ರ ಹೋಬಳಿಯಲ್ಲಿ ತೀರಾ ಕಡಿಮೆ ನಾಟಿ ಮಾಡಲಾಗಿದೆ. ಮೇ ಅಂತ್ಯಕ್ಕೆ ಬಹುತೇಕ ನಾಟಿ ಮಾಡಿದ್ದು ಈಗ 55–60 ದಿನದ ಬೆಳೆಯಿದೆ ಎಂದರು.
ಕಂಡುಬಂದ ರೋಗಗಳು; ತೋಟಗಳಿಗೆ ಭೇಟಿ ನೀಡಿದ ವೇಳೆ ಮುಖ್ಯವಾಗಿ ‘ನೇರಳೆಮಚ್ಚೆ’ ಹಾಗೂ ‘ಬುಡಕೊಳೆ ರೋಗ’ ಮುಖ್ಯವಾಗಿದೆ ಕಾಣಸಿಕ್ಕಿದೆ. ನೇರಳೆಮಚ್ಚೆ ರೋಗಕ್ಕೆ‘ ಕವಾಚ್’ ಪ್ರತಿ ಲೀಟರ್‌ಗೆ 2 ಗ್ರಾಂ ಮಿಶ್ರಣ ಮಾಡಿ ಅಥವಾ ‘ಕಾರ್ಬನ್‌ಡೈಜಾಕ್ಸೈಡ್’ ಪ್ರತಿ ಲೀಟರ್‌ಗೆ ಒಂದು ಗ್ರಾಂ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.
ಬುಡಕೊಳೆ ರೋಗಕ್ಕೆ‘ ರೆಡೋಮಿಲ್’ ಪ್ರತಿ ಲೀಟರ್‌ಗೆ 2 ಗ್ರಾಂ ಮಿಶ್ರಣ ಮಾಡಿ ಸಿಂಪರಣೆ ಮಾಡಬಹುದು ಎಂದು ತೋಟಗಾರಿಕೆ ಮೂಲಗಳು ತಿಳಿಸಿವೆ.
ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಬೆಳೆಗಾರರು ಉತ್ತಮ ಬೆಳೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಲಾಗಿದೆ.
*
ಅನೇಕ ಕಡೆ ಜಿಂಕ್, ಪೊಟ್ಯಾಷ್ ಮುಂತಾದ ಜೀವಸತ್ವಗಳ ಕೊರತೆ ಕಂಡುಬಂದಿದೆ. ಅವುಗಳನ್ನು ನಿರ್ವಹಣೆ ಮಾಡಿದರೆ ಇಳುವರಿ ಸಾಧ್ಯ
– ರವಿಕುಮಾರ್,
ತೋಟಗಾರಿಕೆ ಇಲಾಖೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.