ADVERTISEMENT

ಶ್ರೀಗಳ ಶಿಸ್ತುಬದ್ಧ ಜೀವನ: ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 6:45 IST
Last Updated 23 ಸೆಪ್ಟೆಂಬರ್ 2011, 6:45 IST

ಸಿರಿಗೆರೆ: ಆದಾಯದ ದೃಷ್ಟಿಯಿಂದಲೇ ಎಲ್ಲವನ್ನೂ ನೋಡುವ ಮತ್ತು ಅದರ ಸಲುವಾಗಿಯೇ ಕೆಲಸ ಕಾರ್ಯ ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸೇವೆ ಸಲ್ಲಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 19ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಠದ ಮತ್ತು ಸಮಾಜದ ವ್ಯವಸ್ಥೆ ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿರಲು ಶ್ರೀಗಳ ಸಂಘಟನೆ ಹಾಗೂ ಹೋರಾಟವೇ ಕಾರಣ.

ಹಿಂದೆ ಕುಗ್ರಾಮಗಳಲ್ಲಿ ಸರ್ಕಾರ ಶಾಲೆ ತೆರೆಯಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಹಲವಾರು ಹಳ್ಳಿಗಳಲ್ಲಿ ಶಾಲೆ, ಪ್ರಸಾದನಿಲಯ, ಮಹಿಳಾ ಕಾಲೇಜು ಸ್ಥಾಪಿಸಿ ವಿದ್ಯಾದಾನ ಮಾಡಿದ ಶ್ರೀಗಳು ವಿವಾಹಗಳ ನೆಪದಲ್ಲಿ ಮಾಡುತ್ತಿದ್ದ ದುಂದುವೆಚ್ಚ ಕಡಿತಗೊಳಿಸುವ ಸಲುವಾಗಿ ಸಾಮೂಹಿಕ ವಿವಾಹಗಳಿಗೆ ಒತ್ತು ಕೊಟ್ಟಿದ್ದು, ತುಂಬಾ ಶ್ಲಾಘನೀಯ ಎಂದರು.

ಶಿವಮೊಗ್ಗದ ನಿವೃತ್ತ ಪ್ರಾಧ್ಯಾಪಕಿ ಸ. ಉಷಾ ಮಾತನಾಡಿ, ಶಿಕ್ಷಣದ ಮಹತ್ವ ಅರಿಯದ ಕಾಲದಿಂದಲೂ ವಿದ್ಯಾದಾನ ಮಾಡುತ್ತಾ ಶಿಕ್ಷಣ ಎಂಬುದು ದೇಹಕ್ಕೆ ಅಂಗ ಸಾಧನೆ, ಮನಸ್ಸಿಗೆ ಸಂಗೀತ ಎಂಬುದನ್ನು ತಿಳಿಸಿ ಅದರ ಕೊಡುಗೆಯನ್ನು ಸಮಾಜಕ್ಕೆ ಶ್ರೀಗಳವರು ನಲವತ್ತರ ದಶಕದಿಂದಲೇ ಧಾರೆಯೆರೆದವರು ಎಂದು ಹೇಳಿದರು.

ಮಹಿಳಾ ಶಿಕ್ಷಣವನ್ನು ವಿರೋಧಿಸುತ್ತಿದ್ದ ಕಾಲದಲ್ಲಿಯೂ ಸಹ ಹಲವಾರು ಸಮಸ್ಯೆಗಳನ್ನು ಎದುರಿಸಿ ಮೆಟ್ಟಿನಿಂತು ಮಹಿಳೆಯರಿಗೆ ಉನ್ನತ ಶಿಕ್ಷಣ ದೊರಕುವಲ್ಲಿ ಶ್ರೀಗಳು ಮಾಡಿದ ಸಾಧನೆ ಶ್ಲಾಘನೀಯ.  ಸಂಸ್ಥೆಯಲ್ಲಿ ಅಭ್ಯಸಿಸಿದ ಹಲವಾರು ಜನರು ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಕೂಡಾ ಉಲ್ಲೇಖನೀಯ ಎಂದು ಅವರು ಹೇಳಿದರು.

ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಡಾ.ವೈ.ಎಂ. ವಿಶ್ವಾನಾಥ್, ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮಹಾಲಿಂಗಪ್ಪ, ಉಪ ಕಾರ್ಯದರ್ಶಿ ರುದ್ರಪ್ಪ,ರಾಜ್ಯ ಪೌರಕಾರ್ಮಿಕ ಸಂಘದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸಿದ್ದಯ್ಯ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಕೆಂಚಪ್ಪ, ಆಡಳಿತಾಧಿಕಾರಿ ಪ್ರೊ.ಎಸ್.ಬಿ. ರಂಗನಾಥ್ ಉಪಸ್ಥಿತರಿದ್ದರು.ನೂತನವಾಗಿ ವೀರಗಾಸೆ ಕಲೆಯನ್ನು ಕಲಿತಿರುವ ಶ್ರೀ ಸಂಸ್ಥೆಯ ವಿದ್ಯಾರ್ಥಿನಿಯರು ಕಲಾ ಪ್ರದರ್ಶನ ನೀಡಿದರು.
ಸಂಡೂರಿನ ದರೋಜಿ ಈರಮ್ಮ ಮತ್ತು ತಂಡದವರು`ಬುರ‌್ರ ಕಥಾ~ ಕಾರ್ಯಕ್ರಮ ನಡೆಸಿಕೊಟ್ಟರು.
ಎಚ್. ಅಶ್ವಿನಿ ಸ್ವಾಗತಿಸಿದರು, ಡಿ. ರುದ್ರೇಶ ವಂದಿಸಿದರು. ಜೆ. ಪದ್ಮಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.