ಹಿರಿಯೂರು: `ಆರೋಗ್ಯದ ಬಗ್ಗೆ ಬಹಳಷ್ಟು ಜನ ನಿರ್ಲಕ್ಷ್ಯ ವಹಿಸುತ್ತಾರೆ. ಇದರಿಂದ ತೀವ್ರ ರೀತಿಯ ನೋವು ಅನುಭವಿಸ ಬೇಕಾಗುತ್ತದೆ. ಕನಿಷ್ಠ ಪ್ರತಿ ಆರು ತಿಂಗಳಿಗೊಮ್ಮೆ ವೈದ್ಯರಿಂದ ಸಾಮಾನ್ಯ ತಪಾಸಣೆಗೆ ಒಳಪಡುವುದು ಒಳಿತು' ಎಂದು ಬೆಂಗಳೂರಿನ ಆರ್ಯನ್ ಆಸ್ಪತ್ರೆಯ ವೈದ್ಯೆ ಡಾ.ರತ್ನಮಾಲಾ ಹೇಳಿದರು.
ನಗರದಲ್ಲಿ ಭಾನುವಾರ ರೆಡ್‌ಕ್ರಾಸ್ ಸಂಸ್ಥೆ, ರೋಟರಿ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯಲು ಎಲ್ಲರೂ ದೌಡಾಯಿಸುತ್ತಾರೆ. ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು, ಕಾಯಿಲೆ ಉಲ್ಬಣಿಸುವ ಮೊದಲು ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಆಧುನಿಕ ಶೈಲಿಯ ಆಹಾರ ಪದ್ಧತಿ, ಕಠಿಣ ಪರಿಶ್ರಮವಿಲ್ಲದೆ ಹಣ ಗಳಿಸುವಿಕೆ ಹೃದಯ ಸಂಬಂಧಿ ರೋಗಗಳಿಗೆ ಮುಖ್ಯ ಕಾರಣ. ನಿಗದಿತ ಪ್ರಮಾಣದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಯೋಗ-ಧ್ಯಾನ, ಉತ್ತಮ ಚಿಂತನೆಗಳಿಂದ ಕಾಯಿಲೆಗಳನ್ನು ದೂರವಿಡಬಹುದು. ಸ್ವಯಂ ಸೇವಾ ಸಂಸ್ಥೆಗಳು ಏರ್ಪಡಿಸುವ ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಬಡವರು ಪಡೆಯಬೇಕು ಎಂದು ಅವರು ಸಲಹೆ ಮಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಆರ್.ಶಿವಕುಮಾರ್ ಮಾತನಾಡಿ, ಬಡವರಿಗೆ ಹೆಚ್ಚಿನ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೇರೆ ನಗರಗಳಿಂದ ತಜ್ಞ ವೈದ್ಯರನ್ನು ಕರೆಸಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದೇವೆ. ಇನ್ನು ಮುಂದೆ ಆರೋಗ್ಯದಿಂದ ವಂಚಿತರಾಗಿರುವ ಗ್ರಾಮೀಣ ಪ್ರದೇಶದ ಬಡವರಿಗೆ ಉಚಿತ ಶಿಬಿರ ನಡೆಸಲಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷೆ ಸೌಭಾಗ್ಯವತಿ ದೇವರು ಅವರು, ಸಾವಿನೊಂದಿಗೆ ಮಣ್ಣು ಅಥವಾ ಅಗ್ನಿಗೆ ಆಹುತಿಯಾಗುವ ಕಣ್ಣುಗಳನ್ನು ದಾನ ಮಾಡಿದರೆ ಅಂಧರಿಬ್ಬರ ಬಾಳಿಗೆ ಬೆಳಕು ನೀಡಬಹುದು. ನೇತ್ರ ದಾನಕ್ಕೆ ಸಾರ್ವಜನಿಕರು ಸ್ವಯಂ ಸ್ಫೂರ್ತಿಯಿಂದ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆನಂದಪ್ರಕಾಶ್, ಉದ್ಯಮಿ ಬಿ.ಎಸ್.ನವಾಬ್ ಸಾಬ್, ತಾ.ಪಂ. ಸದಸ್ಯ ಮಹಮ್ಮದ್ ಫಕೃದ್ಧೀನ್, ಡಾ.ಎಸ್. ರಮೇಶ್, ಡಾ. ವೆಂಕಟೇಶ್, ಚಿಕ್ಕಣ್ಣ, ರಾಘವೇಂದ್ರ, ಗಜೇಂದ್ರಶರ್ಮ, ಸತೀಶ್‌ಬಾಬು, ಮಂಜುನಾಥ್, ರಾಜಶೇಖರ್, ಉಮಾ, ದೇವರಾಜ ಮೂರ್ತಿ, ತಿಪ್ಪೇಸ್ವಾಮಿ, ಶಶಿಕಲಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.