ADVERTISEMENT

ಸದಾಶಿವ ಆಯೋಗದ ವರದಿ ಅನುಮೋದನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 7:40 IST
Last Updated 9 ಜುಲೈ 2012, 7:40 IST

ಚಿತ್ರದುರ್ಗ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಮುಂಬರುವ ಅಧಿವೇಶನದಲ್ಲಿ ಯಥಾವತ್ತು ಅನುಮೋದಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ದಲಿತ ಮುಖಂಡ ಎಂ. ಜಯಣ್ಣ ಆಗ್ರಹಿಸಿದರು.

ಎ.ಜೆ. ಸದಾಶಿವ ಆಯೋಗ ಕಳೆದ ಏಳೂವರೆ ವರ್ಷದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪರಿಶಿಷ್ಟ ಜಾತಿಯ ಸ್ಥಿತಿಗತಿ ಅವಲೋಕಿಸಿ ಸರ್ಕಾರಕ್ಕೆ ವೈಜ್ಞಾನಿಕ ವರದಿ ಸಲ್ಲಿಸಿದೆ. 18 ವರ್ಷಗಳ ಸುಧೀರ್ಘ ಹೋರಾಟದಿಂದ ಈ ರೀತಿಯ ಫಲ ಪರಿಶಿಷ್ಟಜಾತಿಗೆ ಸಿಕ್ಕಿದ್ದು, ಸಮುದಾಯದ ಎಲ್ಲಾ ಸಂಘಟನೆಗಳು ಇದನ್ನು ಸಂತೋಷದಿಂದ ಸ್ವೀಕರಿಸಬೇಕು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೆಲವು ಸಂಘಟನೆಗಳು ಈ ವರದಿಯನ್ನು ಅವೈಜ್ಞಾನಿಕ ಎಂದು ವಿರೋಧಿಸುತ್ತಿದ್ದಾರೆ. ಈ ವರದಿಯನ್ನು ಯಾವ ರೀತಿ ಯೋಚಿಸಿದ್ದಾರೆ ಎನ್ನುವುದು ತಿಳಿದಿಲ್ಲ. ಹಲವಾರು ವರ್ಷಗಳಿಂದ ಮಾದಿಗ ಸಮುದಾಯಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಈಗಲಾದರೂ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನ ಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ ಎಂದರು.

ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಏಕಗವಾಕ್ಷಿ ಯೋಜನೆ ಜಾರಿಗೆ ತಂದು, ಮುಂದಿನ ಅಧಿವೇಶನದಲ್ಲಿ ಅದನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಹಾಗೂ 101 ಪರಿಶಿಷ್ಟ ಜಾತಿ ಉಪ ಜಾತಿಗಳಿಗೆ ಸಮಾನವಾಗಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಜಿ.ಎಸ್. ಮಂಜುನಾಥ್ ಮಾತನಾಡಿ, ವೈಯಕ್ತಿಕ, ರಾಜಕೀಯ ಉದ್ದೇಶದಿಂದ ಜಿಲ್ಲೆಯಲ್ಲಿ 16 ಸಂಘಟನೆಗಳು ಹುಟ್ಟಿಕೊಂಡಿವೆ. ವರದಿ ಅನುಷ್ಠಾನಕ್ಕಾಗಿ ಜಿಲ್ಲೆಯ ಎಲ್ಲಾ ಮಾದಿಗ ಸಮುದಾಯದ ಸಂಘಟನೆಗಳ ಮುಖಂಡರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಜಿಲ್ಲಾ ಮಾದಿಗ ಸಮುದಾಯ ಮಹಾಸಭಾ ಎಂಬ ಹೊಸ ಸಂಘಟನೆಯನ್ನು ಶೀಘ್ರದಲ್ಲಿ ಸ್ಥಾಪಿಸಲು ತೀರ್ಮಾನಿಸಿದೆ ಎಂದರು.

ಮುಖಂಡರಾದ ತಿಪ್ಪೇಸ್ವಾಮಿ, ರಾಜಗಿರಿ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.