ADVERTISEMENT

ಸಫಾಯಿ ಕರ್ಮಚಾರಿಗಳ ಅಭಿವೃದ್ದಿಗೆ ₹100 ಕೋಟಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 5:54 IST
Last Updated 10 ಅಕ್ಟೋಬರ್ 2017, 5:54 IST

ಚಿತ್ರದುರ್ಗ: ‘ಸಮಾಜದ ಆರೋಗ್ಯ ರಕ್ಷಿಸುವ ಸಫಾಯಿ ಕರ್ಮಚಾರಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ₹ 100 ಕೋಟಿ ನೀಡಿದೆ’ ಎಂದು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಮಾರಪ್ಪ ತಿಳಿಸಿದರು. ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

13 ಸಫಾಯಿ ಕರ್ಮಚಾರಿ ಆಯೋಗಗಳು ರಚನೆಯಾಗಿದ್ದರೂ, ಈ ವರ್ಗದವರ ಅಭಿವೃದ್ಧಿಗೆ ಎಲ್ಲಿಯೂ ಪ್ರತ್ಯೇಕ ನಿಗಮ ಸ್ಥಾಪಿಸಿಲ್ಲ. ಆದರೆ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ನಿಗಮ ಸ್ಥಾಪನೆಗೆ ಮುಂದಾಗಿದೆ’ ಎಂದರು. ‘2017–18ನೇ ಸಾಲಿಗೆ ₹100 ಕೋಟಿ ನೀಡಿದ್ದು, ಇದಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆಯನ್ನು ತಯಾರಿಸಲಾಗುತ್ತಿದೆ. ಈಗಾಗಲೇ ವಿವಿಧ ಜಿಲ್ಲೆಗಳಿಗ ಭೇಟಿ ನೀಡಿ ಅಧಿಕಾರಿ ಗಳೊಂದಿಗೆ ನಡೆಸಿ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ’ ಎಂದರು.

‘ಸಫಾಯಿ ಕರ್ಮಚಾರಿಗಳಿಗಾಗಿ ಜಾರಿಯಲ್ಲಿರುವ ಯೋಜನೆಗಳನ್ನು ಅವರಿಗೆ ತಲುಪಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದ ಅಧ್ಯಕ್ಷ ಮಾರಪ್ಪ, ‘ಅಭಿವೃದ್ದಿ ಯೋಜನೆಗಳ ಮೂಲಕ ಸಫಾಯಿ ಕರ್ಮಚಾರಿಗಳನ್ನು ಆಸ್ತಿಯನ್ನಾಗಿ ರೂಪಿಸಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸಫಾಯಿ ಕರ್ಮಚಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು. ನಿವೇಶನ ಇಲ್ಲದಿದ್ದಲ್ಲಿ ಸ್ಥಳೀಯವಾಗಿ ಜಮೀನು ಖರೀದಿ ಮಾಡಿ ಮನೆ ನಿರ್ಮಾಣ ಮಾಡಿಕೊಡಬೇಕು. ನಿಗಮದಿಂದ ವಸತಿಗಾಗಿ ₹ 6 ಲಕ್ಷದವರೆಗೆ ಅನುದಾನ ನೀಡಲಿದ್ದು, ಹೆಚ್ಚಿನ ಅನುದಾನ ಅವಶ್ಯಕತೆಯಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ರಾಜ್ಯ ಹಣಕಾಸು ಅನುದಾನದಡಿ ಮೀಸಲು ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ನಿವೇಶನ ಕಲ್ಪಿಸಲು ಜಮೀನು ಖರೀದಿ ಮಾಡಿದ್ದು ಅಗತ್ಯವಿದ್ದಲ್ಲಿ ಜಮೀನು ಖರೀದಿಗೂ ನಿಗಮದಿಂದ ಅನುದಾನ ನೀಡಲು ಮಾರ್ಗಸೂಚಿ ಕಳುಹಿಸಲಾಗುತ್ತದೆ’ಎಂದರು.

‘ಈ ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ವಾಣಿಜ್ಯ ವಾಹನಗಳನ್ನು ನೀಡುವ ಉದ್ದೇಶವಿದೆ. ಲೀಡ್ ಬ್ಯಾಂಕ್ ಮ್ಯಾನೇಜರ್ ಸಾಲದ ಹಣವನ್ನು ಬ್ಯಾಂಕ್‌ ಗಳಿಂದ ಭರಿಸುವ ಕೆಲಸ ಮಾಡಬೇಕು. ನೇರ ಸಾಲ ಯೋಜನೆಯಡಿ ₹ 50 ಸಾವಿರದಿಂದ ₹1 ಲಕ್ಷದವರೆಗೆ ಸಾಲ ನೀಡಿ ಸ್ವ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದರು.

‘ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶ ಕಲ್ಪಿಸುವ ಜತೆಗೆ, ವಿದ್ಯಾರ್ಥಿವೇತನ ನೀಡಲು ಅವಕಾಶ ಇದೆ. ‘ ಮಧುಗಿರಿಯ ಸ್ಥಳೀಯ ಸಂಸ್ಥೆಯಲ್ಲಿ ಪ್ರತಿ ತಿಂಗಳು ಸಫಾಯಿ ಕರ್ಮಚಾರಿ ಮಕ್ಕಳಿಗೆ ₹1ಸಾವಿರ ದಂತೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು.

ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ನಿರ್ದೇಶಕ ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ಉಪವಿಭಾಗಾಧಿಕಾರಿ ಟಿ.ರಾಘವೇಂದ್ರ, ಮುಖಂಡರಾದ ಕೇಶವಮೂರ್ತಿ, ಕೆ.ರಾಜಣ್ಣ, ಡಿ.ಶಿವಣ್ಣ, ಎಚ್.ಪಿ.ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.