ADVERTISEMENT

ಸಮತೋಲನ ಆಹಾರ ಸಂಸ್ಕೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 5:34 IST
Last Updated 9 ಏಪ್ರಿಲ್ 2013, 5:34 IST

ಚಿತ್ರದುರ್ಗ: ಸಮತೋಲನ ಆಹಾರ ಸೇವನೆ ಪದ್ಧತಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಂಡಾಗ ಮಾತ್ರ ರಕ್ತದೊತ್ತಡದಿಂದ ದೂರ ಉಳಿದು ಆರೋಗ್ಯವಂತರಾಗಿ ಬಾಳಲು ಸಾಧ್ಯವಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಕುಮಾರ್ ಸಲಹೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಅನೇಕರು ಒತ್ತಡದಿಂದ ಜೀವಿಸುತ್ತಿರುವ ಪರಿಣಾಮ ರಕ್ತದೊತ್ತಡಕ್ಕೆ ತುತ್ತಾಗುತ್ತಿದ್ದಾರೆ. ಶರವೇಗದ ಜೀವನಶೈಲಿ, ದುರಾಸೆ, ಅತೃಪ್ತಿಕರವಾದ ಜೀವನ, ಒಬ್ಬರನ್ನೊಬ್ಬರು ಹೊಲಿಕೆ ಮಾಡಿಕೊಳ್ಳುವುದು ಸೇರಿದಂತೆ ಅನುವಂಶಿಕತೆಯಿಂದ ರಕ್ತದೊತ್ತಡ ಮಾನವನ ಸಾವಿಗೆ ಕಾರಣವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರಕ್ತದೊತ್ತಡದಿಂದ ದೂರವಿರಲು ಎಲ್ಲರೂ ಆರೋಗ್ಯ ಪೂರಕ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕು. ಪ್ರತಿನಿತ್ಯ ಆರೋಗ್ಯವಂತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜೀವನಶೈಲಿ ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಡಾ.ಕೃಪಾದೇವಿ ಮಾತನಾಡಿ, ಟಿವಿಗಳಲ್ಲಿ ಬರುವ ಅಡುಗೆ ಕಾರ್ಯಕ್ರಮಗಳನ್ನು ವೀಕ್ಷಿಸುವ ಮಹಿಳೆಯರು ತಮ್ಮ ಮಕ್ಕಳಿಗೆ ರುಚಿಕರವಾದ  ತಿನಿಸು ಮಾಡಿಕೊಡುತ್ತಿದ್ದಾರೆ. ಇದರಿಂದ 10 ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಕೊಬ್ಬು ಹೆಚ್ಚುತ್ತಿದೆ. ಇಂತಹ ಮಕ್ಕಳು ಮುಂದೆ 25ರಿಂದ 40 ವರ್ಷದ ಯೌವ್ವನಾವಸ್ಥೆಯಲ್ಲಿ ಕಾಯಿಲೆಗಳಿಗೆ ತುತ್ತಾಗಿ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಯೊಬ್ಬ ಪ್ರಜೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹಾಲಿಂಗಪ್ಪ, ಡಾ.ಬಿ. ಜಯಮ್ಮ, ಡಾ. ಕಾಶಿ, ಎಸ್.ವಿ. ಕರಿಯಣ್ಣ ಹಾಜರಿದ್ದರು. ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳಾ ಶುಶ್ರೂಷಕಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.