ADVERTISEMENT

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸ್ವಚ್ಛತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 8:25 IST
Last Updated 22 ಸೆಪ್ಟೆಂಬರ್ 2011, 8:25 IST

ಹಿರಿಯೂರು: ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡದ ಹೊರತು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವುದು ಅಸಾಧ್ಯದ ಕೆಲಸ. ನಾಗರಿಕರ ಸಹಕಾರ ಪಡೆದು ನಗರವನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಪುರಸಭೆ ಆಡಳಿತ ನಡೆಸುವವರು ಮಾಡಬೇಕು ಎಂದು ಲೋಕಸಭೆ ಸದಸ್ಯ ಜನಾರ್ದನ ಸ್ವಾಮಿ ಕರೆ ನೀಡಿದರು.

ನಗರದಲ್ಲಿ ಬುಧವಾರ ಆರೋಗ್ಯ ಇಲಾಖೆ ಹಾಗೂ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ತಾಲ್ಲೂಕು ಆಯುರ್ವೇದ ಆಸ್ಪತ್ರೆಗೆ ಶಂಕುಸ್ಥಾಪನೆ ನೆರೆವೇರಿಸಿ ಅವರು ಮಾತನಾಡಿದರು.

ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಗಮನವನ್ನು ನಗರದ ಸ್ವಚ್ಛತೆಯ ಕಡೆ ಹರಿಸಬೇಕು. ತಾವು ಪ್ರತಿನಿಧಿಸುವ ವಾರ್ಡ್‌ಗಳಲ್ಲಿ ಕಸದ ರಾಶಿ ಬೀಳದಂತೆ, ಚರಂಡಿಗಳು ಕಟ್ಟಿಕೊಳ್ಳದಂತೆ, ಮಳೆಯ ಅಥವಾ ಚರಂಡಿಯ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಚ್ಛತೆ ಪುರಸಭೆಗೆ ಸಂಬಂಧಿಸಿದ್ದೆಂದು ನಾಗರಿಕರು ತಾತ್ಸಾರ ಮಾಡಬಾರದು ಎಂದು ಅವರು ತಿಳಿಸಿದರು.

ಈಗ ಸಣ್ಣಪುಟ್ಟ ಕಾಯಿಲೆಗಳಿಗೂ ಅಲೋಪತಿ ವೈದ್ಯ ಪದ್ಧತಿಗೆ ಶರಣಾಗುತ್ತಿರುವುದು ವಿಷಾದದ ಸಂಗತಿ. ಯೋಗ, ನಿಯಮಿತ ಆಹಾರ ಸೇವನೆಯಿಂದಲೂ ರೋಗ ಬರದಂತೆ ತಡೆಯಬಹುದಾಗಿದೆ. ಯಾವುದೇ ವ್ಯತಿರಿಕ್ತ ಪರಿಣಾಮಗಳಿಲ್ಲದ ಆಯುರ್ವೇದ ವೈದ್ಯಪದ್ಧತಿ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಈಗ ್ಙ 50ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಚಂದ್ರಪ್ಪ ಮಾತನಾಡಿ, ಜನಸಾಮಾನ್ಯರಿಗೆ ಆಯುರ್ವೇದ ಪದ್ಧತಿಯ ಚಿಕಿತ್ಸೆಯ ಉಪಯೋಗಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.

ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ ಮಾತನಾಡಿ, ತಾಲ್ಲೂಕು ಕೇಂದ್ರಗಳಲ್ಲಿ ಆಯುರ್ವೇದ ಆಸ್ಪತ್ರೆಗಳನ್ನು ಪ್ರಾರಂಭಿಸುವುದರಿಂದ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಜಿ.ಪಂ. ಉಪಾಧ್ಯಕ್ಷೆ ವಿಜಯಮ್ಮ, ಸದಸ್ಯ ಕೆ. ದ್ಯಾಮಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟಶಿವರೆಡ್ಡಿ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ. ಕರಿಯಮ್ಮ ಡಿ. ಶಿವಣ್ಣ, ಡಿ.ಎಸ್. ಪ್ರಕಾಶ್, ತಾ.ಪಂ. ಅಧ್ಯಕ್ಷೆ ಅನುರಾಧಾ, ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್, ಬೆಂಗಳೂರಿನ ಆಯುಷ್ ಇಲಾಖೆಯ ಉಪ ನಿರ್ದೇಶಕಿ ಡಾ.ಆರ್. ಸರಸ್ವತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ವೆಂಕರಾಮಯ್ಯ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಸ್.ಆರ್. ಮಹಾಲಿಂಗಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಚ್. ಮೋಹನ್‌ಕುಮಾರ್, ತಾಲ್ಲೂಕು ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮೀ, ಡಾ.ಕುಮಾರಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.