ADVERTISEMENT

ಸಾಂಪ್ರದಾಯಿಕ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 8:40 IST
Last Updated 14 ಅಕ್ಟೋಬರ್ 2011, 8:40 IST

ಚಿತ್ರದುರ್ಗ: ಸಾಂಪ್ರದಾಯಿಕ ಕ್ರೀಡೆಗಳು ಹಿಂದಿನ ಜೀವಂತಿಕೆ ಪಡೆದುಕೊಳ್ಳುವ ಅಗತ್ಯವಿದೆ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಸಿ.ಕೆ. ಮಹೇಶ್ವರಪ್ಪ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಕಾಲೇಜಿನ ಒಳ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಪುರುಷರ, ಮಹಿಳೆಯರ ಭಾರ ಎತ್ತುವ, ಪವರ್ ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಸ್ಪರ್ಧೆ ಹಾಗೂ ವಿಶ್ವವಿದ್ಯಾನಿಲಯ ತಂಡದ ಆಯ್ಕೆ 2011-12ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಚಿನ್ನಿದಾಂಡು, ಕಬಡ್ಡಿಯಂತಹ ದೇಶಿಯ ಕ್ರೀಡೆಗಳಿಗೆ ಪ್ರಾಮುಖ್ಯತೆ ದೊರೆತ್ದ್ದಿದರೆ ಗ್ರಾಮೀಣ ಭಾಗದ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಲು ಅನುಕೂಲವಿತ್ತು. ಆದರೆ, ಜಾಗತೀಕರಣ ಪ್ರಭಾವದಿಂದ ವಿವಿಧ ಕಂಪೆನಿಗಳು ತಮಗಿಷ್ಟವಾದ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ಸಾಂಪ್ರದಾಯಿಕ ಕ್ರೀಡೆಗಳು ನಶಿಸುತ್ತಿವೆ ಎಂದರು.

ಕಾರ್ಪೋರೇಟ್ ಕಂಪೆನಿಗಳಿಗೆ ವಿಶ್ವವಿದ್ಯಾಲಯಗಳು ದೇಶಿಯ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುವಂತೆ ಮನವೊಲಿಸುವ ಮೂಲಕ ಸಾಂಪ್ರದಾಯಿಕ ಕ್ರೀಡೆಗಳ ಜೀವಂತಿಗೆ ಉಳಿಸಬೇಕು. ದೇಶಿ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯ ದೈಹಿಕ ನಿರ್ದೇಶಕ ರಾಜಕುಮಾರ್ ಮಾತನಾಡಿ, ಕ್ರೀಡಾಪಟುಗಳು ಎದೆಗುಂದದೆ ಸಾಮರ್ಥ್ಯ ಮೀರಿ ಪ್ರಯತ್ನ ಮಾಡಿ ಯಶಸ್ಸು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯೆ ರಮಾ ನಾಗರಾಜ್, ಒಂದೇ ಕ್ರೀಡೆಗೆ ಪ್ರಾಮುಖ್ಯತೆ ನೀಡದೇ ಎಲ್ಲ ಕ್ರೀಡೆಗಳಿಗೂ ಸಮಾನವಾಗಿ ಪ್ರೋತ್ಸಾಹಿಸುವ ಮೂಲಕ ಕ್ರೀಡೆಗಳಲ್ಲಿ ತಾರತಮ್ಯ ಹೋಗಲಾಡಿಸಬೇಕಿದೆ ಎಂದು ನುಡಿದರು.

ಉಪನ್ಯಾಸಕ ಗೋಪಾಲಪ್ಪ, ಅಂತರ್‌ರಾಷ್ಟ್ರೀಯ ಕ್ರೀಡಾಪಟು ಎನ್.ಡಿ. ಕುಮಾರ್ ಮತ್ತಿತರರು ಹಾಜರಿದ್ದರು. ಚನ್ನಗಿರಿಯ ಕ್ರೀಡಾಪಟು ಮಮತಾ ಪ್ರಾರ್ಥಿಸಿದರು. ಉಪನ್ಯಾಸಕ ಕೊಟ್ರಪ್ಪ ಸ್ವಾಗಸಿದರು. ಮುರುಗೇಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.