ADVERTISEMENT

ಸಾಧನೆಯ ಶಿಖರವೇರಿದ ಸರ್ಕಾರಿ ವಿದ್ಯಾದೇಗುಲ

ಅತ್ಯುತ್ತಮ ಪರಿಸರ, ತಾಂತ್ರಿಕ ವ್ಯವಸ್ಥೆ ಹೊಂದಿರುವ ಇಂಗಳದಹಳ್ಳಿ ಶಾಲೆ

ಜೆ.ತಿಮ್ಮಪ್ಪ
Published 6 ಸೆಪ್ಟೆಂಬರ್ 2013, 5:41 IST
Last Updated 6 ಸೆಪ್ಟೆಂಬರ್ 2013, 5:41 IST

ಚಿಕ್ಕಜಾಜೂರು: ಹೊಳಲ್ಕೆರೆ ತಾಲ್ಲೂಕಿನ ಗಡಿ ಗ್ರಾಮವಾದ ಇಂಗಳದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಜ್ಯದ ಅತ್ಯುತ್ತಮ ಪರಿಸರ ಹಾಗೂ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡ ಶಾಲೆಗಳಲ್ಲಿ ಒಂದಾಗಿದೆ.

ಗ್ರಾಮದಲ್ಲಿ ಇರುವುದು ಕೇವಲ 35 ಮನೆಗಳು ಮಾತ್ರ. 1997ರಲ್ಲಿ ಕೇವಲ ನಾಲ್ಕು ಮಕ್ಕಳ ದಾಖಲಾತಿಯೊಂದಿಗೆ ಶಾಲೆ ಆರಂಭಿಸಲಾಗಿತ್ತು. ಅಲ್ಲಿಂದ ಸುಮಾರು 16 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ, ಇತ್ತೀಚೆಗಷ್ಟೆ ಬೇರೆ ಶಾಲೆಗೆ ವರ್ಗಾವಣೆ ಗೊಂಡಿರುವ ಮುಖ್ಯ ಶಿಕ್ಷಕ ಎಂ. ಕುಮಾರ್ ಹಾಗೂ ಸಹ ಶಿಕ್ಷಕರ ಸೇವೆ ಶ್ಲಾಘನೀಯ. ಇಂದು ಶಾಲೆಯಲ್ಲಿ 15 ಮಕ್ಕಳು ಇದ್ದಾರೆ. 

ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಐದನೇ ತರಗತಿಯ ಮಕ್ಕಳಿಗಾಗಿ ರಾಜ್ಯಮಟ್ಟದಲ್ಲಿ ನಡೆಸುವ ಕೆಎಸ್‌ಕ್ಯೂಒಎ ನಿಂದ ಮಕ್ಕಳ ಶಿಕ್ಷಣ ಹಾಗೂ ಜ್ಞಾನದ ಬಗ್ಗೆ ಉತ್ತಮ ಪ್ರಶಂಸೆ ಬಂದಿದೆ. ಶಿಕ್ಷಕರ ಜತೆ ಶಾಲಾ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಸಹಕಾರ, ಶಾಲೆ ಜಿಲ್ಲೆಯ ಮಾದರಿ ಶಾಲೆಗಳಲ್ಲಿ ಒಂದಾಗಿ ಹೆಸರು ಪಡೆಯುವಲ್ಲಿ ಸಹಕಾರಿಯಾಗಿದೆ.

ಮಳೆನೀರು ಕೊಯ್ಲು: ಬೆಂಗಳೂರಿನ ಆರ್ಘ್ಯಂ ಹಾಗೂ ಚಿತ್ರದುರ್ಗದ ಜಿಯೋ ವಾಟರ್ ರೈನ್ ಬೋರ್ಡ್ ಸಹಕಾರದಿಂದ ಶಾಲೆಗೆ ಮಳೆ ನೀರು ಕೊಯಿಲಿಗಾಗಿ ರೂ.1ಲಕ್ಷ 35 ಸಾವಿರ ವೆಚ್ಚದಲ್ಲಿ ಉತ್ತಮವಾದ ನೀರು ಸಂಗ್ರಹಣೆ ಮಾಡಲಾಗಿದೆ. 8,000 ಲೀಟರ್ ಸಂಗ್ರಹಣಾ ಸಾಮರ್ಥ್ಯದ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಈ ನೀರನ್ನು ಕುಡಿಯಲು ಹಾಗೂ ಬಿಸಿ ಊಟಕ್ಕೂ ಬಳಸಲಾಗುತ್ತಿದೆ.

ಅಲ್ಲದೆ, ಶಾಲೆಯ ಆವರಣದಲ್ಲಿ ಸುಂದರವಾದ ಕೈತೋಟ ನಿರ್ಮಿಸಿ, ಸೊಪ್ಪು- ತರಕಾರಿ ಬೆಳೆಯಲಾಗುತ್ತಿದೆ. ತಾಜಾ ತರಕಾರಿಯನ್ನು ಬಿಸಿ ಊಟದ ತಯಾರಿಕೆಗೆ ಬಳಸಲಾಗುತ್ತಿದೆ. ಅಲ್ಲದೆ, ಕೈತೋಟದಲ್ಲಿ ಬೆಳೆದಿರುವ ಬಾಳೆ ಹಣ್ಣನ್ನು ಊಟದ ನಂತರ ಮಕ್ಕಳಿಗೆ ವಿತರಿಸಲಾಗುವುದು. ಶಾಲೆಯ ಬಗ್ಗೆ ಗ್ರಾಮಸ್ಥರಲ್ಲಿ ಅಭಿಮಾನ ಇರುವುದರಿಂದ ಯಾರೊಬ್ಬರೂ ಸಹ ಇಲ್ಲಿನ ತರಕಾರಿಯನ್ನಾಗಲಿ, ಬಾಳೆಹಣ್ಣು, ತೆಂಗಿನ ಕಾಯಿಗಳನ್ನಾಗಲಿ ಮುಟ್ಟುವುದಿಲ್ಲ.

ಶಾಲೆಯ ಬಗ್ಗೆ ಮಾಹಿತಿ ಪಡೆದ ಧಾರವಾಡ ವಿಶ್ವವಿದ್ಯಾನಿಲಯದ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳು ಶಾಲೆಯ ಬಗ್ಗೆ ವಿಷಯ ಪ್ರಬಂಧ ಬರೆದಿದ್ದಾರೆ. ಅಲ್ಲದೆ, ಬೆಂಗಳೂರಿನ ಎನ್‌ಜಿಒ ನೇತೃತ್ವದಲ್ಲಿ ಅಮೆರಿಕಾ ಮತ್ತು ಇರಾನ್‌ನ ಪರಿಸರ ವಿದ್ಯಾರ್ಥಿಗಳು ಸಹ ಶಾಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಇಲ್ಲಿನ ತಂತ್ರಗಾರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈನ ರತನ್ ಟಾಟಾ ಟ್ರಸ್ಟ್, ಗುಜರಾತ್‌ನ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು, ಇಲ್ಲಿನ ತಂತ್ರಗಾರಿಕೆ ಅಳವಡಿಸಿಕೊಳ್ಳಲು ಮಾಹಿತಿ ಸಂಗ್ರಹಿಸಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಕ್ರಿಯೆ: ತಾಲ್ಲೂಕಿನ ಗಡಿ ಭಾಗದಲ್ಲಿದ್ದು, ಕಿರಿಯ ಪ್ರಾಥಮಿಕ ಶಾಲೆ ಆಗಿದ್ದರೂ ಇಲ್ಲಿ ಉತ್ತಮ ಪರಿಸರ ಹಾಗೂ ಉತ್ತಮ ಕಲಿಕಾಮಟ್ಟವನ್ನು ಹೊಂದಿದೆ. ಶಾಲೆಯ ಪ್ರಗತಿಯಲ್ಲಿ ಮುಖ್ಯ ಶಿಕ್ಷಕ ಎಂ.ಕುಮಾರ್ ಅವರ ಶ್ರಮ ಶ್ಲ್ಯಾಘನೀಯ ಎಂದು ಹೊಳಲ್ಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್. ಮಂಜುನಾಥ್ ತಿಳಿಸಿದ್ದಾರೆ.

ಶಾಲೆಯ ಹಾಗೂ ಮಕ್ಕಳ ಜ್ಞಾನಾಭಿವೃದ್ಧಿಗೆ ತಮ್ಮಂದಿಗೆ ಕೈಜೋಡಿಸಿ ಶ್ರಮ ವಹಿಸಿದ ಸಹ ಶಿಕ್ಷಕಿಯರಾದ ಸುಶೀಲಮ್ಮ ಹಾಗೂ ಎಂ.ಎನ್.ಗೀತಮ್ಮ ಅವರ ಪಾತ್ರವೂ ಹೆಚ್ಚಿನದಾಗಿದೆ ಎನ್ನುತ್ತಾರೆ ಎಂ.ಕುಮಾರ್.

ಶಾಲೆಯ ಅಭಿವೃದ್ದಿಯನ್ನು ನೋಡಲು  ರಾಜ್ಯದ ವಿವಿಧ ಕಡೆಗಳಿಂದ ಶಾಲಾ ಶಿಕ್ಷಕ ವೃಂದ ಮತ್ತು ಎಸ್‌ಡಿಎಮ್‌ಸಿ ಸದಸ್ಯರು ಬಂದು ಶಾಲೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಶಾಲೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು www.arghya.com ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.