ADVERTISEMENT

ಸಾಮಾಜಿಕ ಸೇವೆ ನಿರಂತರವಾಗಿರಲಿ

ಡಾ. ನಟರಾಜ್ ಅಭಿನಂದನೆ, ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ. ಶಿವಪ್ರಸಾದ್

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 7:21 IST
Last Updated 9 ಏಪ್ರಿಲ್ 2018, 7:21 IST

ಚಿತ್ರದುರ್ಗ: ಪ್ರಾಧ್ಯಾಪಕ ವೃತ್ತಿಯೊಂದಿಗೆ ಸಂಶೋಧನೆ, ಅಧ್ಯಯನದೊಂದಿಗೆ ಸಮಾಜಕ್ಕೆ ಅಗತ್ಯವಾದ ಕೃತಿಗಳನ್ನು ನೀಡಿರುವ ನಿವೃತ್ತ ಸಹ ಪ್ರಾಧ್ಯಾಪಕ ಡಾ. ನಟರಾಜ್ ಅವರ ಸೇವೆ ಸಮಾಜಕ್ಕೆ ಮತ್ತಷ್ಟು ಸಿಗುವಂತಾಗಬೇಕು ಎಂದು ಧಾರವಾಡದ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನಿರ್ದೇಶಕ ಪ್ರೊ.ಎಸ್.ಎಂ. ಶಿವಪ್ರಸಾದ್ ಅಭಿಪ್ರಾಯಪಟ್ಟರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಡಾ.ನಟರಾಜ್ ಅಭಿನಂದನೆ ಮತ್ತು ಕೃತಿಗಳ ಬಿಡುಗಡೆ’ ಸಮಾರಂಭದಲ್ಲಿ ‘ಹಸನ್ಮುಖಿ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಸೇವೆಯಿಂದ ನಿವೃತ್ತಿಯಾದ ಮೇಲೆ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚು ಸಮಯಾವಕಾಶ ಇರುತ್ತದೆ. ಆದ್ದರಿಂದ ಅಪರಾಧ ಶಾಸ್ತ್ರದಲ್ಲಿ ಪರಿಣತಿ ಪಡೆದಿರುವ ನಟರಾಜ್‌, ತಮ್ಮ ಸೇವೆಯನ್ನು ಮುಂದುವರಿಸಬೇಕು ಎಂದು ಆಶಿಸಿದರು.

ADVERTISEMENT

ಡಾ. ನಟರಾಜ್ ಅವರ ‘ಅಪರಾಧ ಅರಿವು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೋಗನ್ ಶಂಕರ್ ಮಾತನಾಡಿ, ‘ಅವರ ಬದುಕು ಹೋರಾಟದ್ದು, ಆದರೂ ಅವರಲ್ಲಿ ನಗು, ಖುಷಿ, ಸಂತೋಷ ಅಡಗಿದೆ. ನಿಷ್ಠುರತೆ, ಪ್ರಾಮಾಣಿಕತೆ, ಶಿಸ್ತು, ಪಾಂಡಿತ್ಯ ಅವರಲ್ಲಿ ಕಾಣಬಹುದು’ ಎಂದರು.

ಚಿತ್ರದುರ್ಗದ ಪಾಳೆಯಗಾರರ ಆಳ್ವಿಕೆಯಲ್ಲಿ ನ್ಯಾಯ ವಿತರಣೆಯನ್ನು ನಟರಾಜ್ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ದೊಡ್ಡ ಗ್ರಂಥಗಳಲ್ಲಿ ಇರಬೇಕಾದ ವಿಚಾರಗಳನ್ನು ಚಿಕ್ಕದಾಗಿ, ಸರಳವಾಗಿ ಕೃತಿಯಲ್ಲಿ ಸೇರಿಸಿದ್ದಾರೆ ಎಂದು ವಿವರಿಸಿದರು.

ಜನ ಸಾಮಾನ್ಯರಿಗೆ ಅರ್ಥವಾಗುವಂತಹ ಅಪರಾಧ ಶಾಸ್ತ್ರದ ಪದಗಳನ್ನು ಬಳಸಿರುವ ಈ ಕೃತಿ ವಿದ್ಯಾರ್ಥಿಗಳಿಗಷ್ಟೇ ಅಲ್ಲ. ಇಡೀ ಸಮಾಜಕ್ಕೆ ಉಪಯುಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಲೀಸ್ ಠಾಣೆ, ನ್ಯಾಯಾಂಗ ಇಲಾಖೆಯಲ್ಲಿಯೂ ತಮ್ಮಲ್ಲಿರುವ ಮಾಹಿತಿಯನ್ನು ಬಿತ್ತಿದ್ದಾರೆ. ಹತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯ ಹಾಗೂ ಎರಡು
ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿರುವ ಹೆಗ್ಗಳಿಕೆ ನಟರಾಜ್‌ ಅವರದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿದ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್ ಮಾತನಾಡಿ, ‘ಸೇವೆಯಿಂದ ನಿವೃತ್ತಿಯಾದ ಮೇಲೆ ಸಾಮಾನ್ಯವಾಗಿ ಆಯಾ ಕಾಲೇಜುಗಳಲ್ಲಿ ಬೀಳ್ಕೊಡುಗೆ ನೀಡುವುದು ಸಹಜ. ಆದರೆ, ನನಗೆ ನೂರಾರು ಅಭಿಮಾನಿಗಳು, ಶಿಷ್ಯ ವೃಂದ, ಬಂಧು ಬಳಗ, ಎಲ್ಲಾ ಜಾತಿ ಧರ್ಮಿಯರು ಸೇರಿ ಸನ್ಮಾನ ಮಾಡಿರುವುದು ಖುಷಿ ಕೊಟ್ಟಿದೆ’ ಎಂದು ಭಾವುಕರಾದರು.

ದಾವಣಗೆರೆ ವಿಶ್ವವಿದ್ಯಾಲಯ  ಹೆಚ್ಚುವರಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೂ ಮೊದಲು ಇನ್‌ಸ್ಪೈರ್ ಮೀಡಿಯಾ ಸಲ್ಯೂಷನ್ಸ್‌ ಬೆಂಗಳೂರಿನ ಲಿಂಗರಾಜು ಡಾ.ನಟರಾಜ್‌ ಕುರಿತು ಸಿದ್ಧಪಡಿಸಿದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗದ ಜಿ.ಬಿ.ಟಿ.ಮೋಹನ್‌ಕುಮಾರ್, ಶಿಕಾರಿಪುರದ ಉದ್ಯಮಿ ಎಚ್.ಮುರುಗೇಶ್ ಇದ್ದರು. ಡಾ.ನಟರಾಜ್ ಮತ್ತು ಡಾ.ಮಂಗಳಗೌರಿ ನಟರಾಜ್ ಅವರನ್ನು ಅಭಿನಂದಿಸಲಾಯಿತು.ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಉಪನ್ಯಾಸಕಿ ಡಾ.ಪ್ರಜ್ಞಾ ಡಾ.ನಟರಾಜ್‌ ಕುರಿತು ಅಭಿನಂದನಾ ನುಡಿಗಳನ್ನಾಡಿದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಡಿ. ಗೋಪಾಲಸ್ವಾಮಿ ನಾಯಕ, ಅನೇಕರು  ಡಾ.ನಟರಾಜ್ ದಂಪತಿಯನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.