ADVERTISEMENT

ಸಾರ್ವತ್ರಿಕ ಚುನಾವಣೆಗೆ ಬನ್ನಿ: ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 6:00 IST
Last Updated 3 ಅಕ್ಟೋಬರ್ 2011, 6:00 IST

ಚಿತ್ರದುರ್ಗ: ಕೊಪ್ಪಳ ಉಪ ಚುನಾವಣೆ ಸೋಲನ್ನು ಪಕ್ಷ ಒಪ್ಪಿಕೊಳ್ಳುವುದಿಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಜನ ಬಿಜೆಪಿಗೆ ಬುದ್ಧಿ ಕಲಿಸುತ್ತಾರೆ. ಆಗ ಕಾಂಗ್ರೆಸ್ ಅಂದರೆ ಏನು ಎಂಬುದನ್ನು ತೋರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸವಾಲು ಹಾಕಿದರು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಭಾನುವಾರ ನಡೆದ `ಮತದಾರರೊಂದಿಗೆ ಮುಖಾಮುಖಿ~ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ದಿ.ಎಸ್. ನಿಜಲಿಂಗಪ್ಪ ದೇಶ ಕಂಡ ಪ್ರಾಮಾಣಿಕ ರಾಜಕಾರಣಿ. ಇದೇ ಸಮುದಾಯದ ಹೆಸರು ಹೇಳಿಕೊಂಡು ಗದ್ದುಗೆ ಏರಿ ಭ್ರಷ್ಟಾಚಾರದಲ್ಲಿ ನಿರತರಾಗಿರುವವರಿಗೆ ನಾಚಿಕೆಯಾಗಬೇಕು ಎಂದು ಯಡಿಯೂರಪ್ಪ ಹೆಸರು ಪ್ರಸ್ತಾಪಿಸದೇ ಅವರು ಟೀಕಿಸಿದರು.

ಬಿಜೆಪಿಯಲ್ಲಿ ಅನಂತಕುಮಾರ್, ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಜನಾರ್ದನ ರೆಡ್ಡಿ ಹೀಗೆ ಹತ್ತಾರು ಗುಂಪುಗಳಿವೆ. ಈ ಎಲ್ಲ ಗುಂಪುಗಳು ಸೇರಿಕೊಂಡಿರುವ ಒಂದು ರೀತಿಯ ಸಮ್ಮಿಶ್ರ ಸರ್ಕಾರವಿದು ಎಂದು ಛೇಡಿಸಿದರು.

ಕಾರ್ಯಕರ್ತರು ಮತದಾರರ ಮನೆಮನೆಗೆ ತೆರಳಿ ಅವರ ಅಹವಾಲು ಕೇಳಿಸಿಕೊಳ್ಳುವುದು, ಪಕ್ಷದ ಸಾಧನೆಗಳನ್ನು ತಿಳಿಸಿ ಪಕ್ಷ ಸಂಘಟಿಸಲು ಈ ಮುಖಾಮುಖಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜ. 14ರವರೆಗೆ ಮೂರು ತಿಂಗಳು ಕಾರ್ಯಕ್ರಮ ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿ ಮತ್ತು ವಾರ್ಡ್‌ಗಳಲ್ಲಿ ನಡೆಯಲಿದೆ ಎಂದು ಹೇಳಿದರು.

ಚಿತ್ರದುರ್ಗಕ್ಕೆ ಒಂದು ಇತಿಹಾಸವಿದೆ. ಇದು ಐತಿಹಾಸಿಕ ಅಷ್ಟೇ ಅಲ್ಲ. ನಿಜಲಿಂಗಪ್ಪ ಸೇರಿದಂತೆ ಅನೇಕ ಶುದ್ಧ ರಾಜಕಾರಣಿಗಳನ್ನು ರಾಜಕಾರಣಕ್ಕೆ ಕೊಡುಗೆಯಾಗಿ ನೀಡಿದ ಜಿಲ್ಲೆಯಿದು. ಈ ಕಾರಣಕ್ಕಾಗಿಯೇ ಈ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ನುಡಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ವಿರೋಧ ಪಕ್ಷ ನಾಯಕಿ ಮೋಟಮ್ಮ, ಶಾಸಕ ಡಿ.ಕೆ. ಶಿವಕುಮಾರ್, ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್ ಇತರರು ಮಾತನಾಡಿದರು.

ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ, ಕೆಪಿಸಿಸಿ ಉಪಾಧ್ಯಕ್ಷ ಎ. ಕೃಷ್ಣಪ್ಪ, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ತಿಮ್ಮಾಪುರ, ಮಾಜಿ ಸಂಸದ ಕೋದಂಡರಾಮಯ್ಯ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ನಾಯ್ಡು, ಶಾಸಕ ಎನ್.ವೈ. ಗೋಪಾಲಕೃಷ್ಣ, ಎಚ್. ಆಂಜನೇಯ, ಬಿ.ಜಿ. ಗೋವಿಂದಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಸೇತುರಾಮ್, ಜಿ.ಎಸ್. ಮಂಜುನಾಥ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.