ADVERTISEMENT

ಸಾಹಿತಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಮಲ್ಲಾಡಿಹಳ್ಳಿ ಆಶ್ರಮದಲ್ಲಿ 4 ದಶಕಗಳ ಸೇವೆ ಸಲ್ಲಿಸಿದ ರಾಘವೇಂದ್ರ ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 9:33 IST
Last Updated 11 ಡಿಸೆಂಬರ್ 2013, 9:33 IST

ಹೊಳಲ್ಕೆರೆ: ‘ಮಲ್ಲಾಡಿಹಳ್ಳಿ ಆಶ್ರಮದ ತುಂಬಾ ನೀರವ ಮೌನ. ಸಾವಿರಾರು ವಿದ್ಯಾರ್ಥಿಗಳು, ನೂರಾರು ಶಿಕ್ಷಕರು, ಸಿಬ್ಬಂದಿಗಳ ಕಣ್ಣಾಲಿಗಳು ತುಂಬಿ ಬಂದಿದ್ದವು. ಮಾತೇ ಹೊರಡದಂತೆ ಎಲ್ಲರೂ ಮೂಖ ವಿಸ್ಮಿತರಾಗಿ ನಿಂತಿದ್ದರು.

ಹಿರಿಯರು, ಕಿರಿಯರೆನ್ನದೆ ಹಲವರು ದು:ಖ ತಡೆಯಲಾರದೆ ಅತ್ತೇ ಬಿಟ್ಟರು. ಆಶ್ರಮ ತೊರೆಯದಂತೆ ಹಲವರು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರು...’ ಸುದೀರ್ಘ 40 ವರ್ಷ ಮಲ್ಲಾಡಿಹಳ್ಳಿ ಆಶ್ರಮದಲ್ಲಿದ್ದ  ರಾಘವೇಂದ್ರ ಪಾಟೀಲ ಅವರು ಇದ್ದಕ್ಕಿದ್ದಂತೆ ಹೊರಟು ನಿಂತಾಗ ಕಂಡು ಬಂದ ದೃಶ್ಯವಿದು.

ತಿರುಕ ನಾಮಾಂಕಿತ ರಾಘವೇಂದ್ರ ಸ್ವಾಮೀಜಿ 1942ರಲ್ಲಿ ಇಲ್ಲಿ ಅನಾಥ ಸೇವಾಶ್ರಮ ಕಟ್ಟಿ ಬೆಳೆಸಿದರು. ಸ್ವಾಮೀಜಿ 1996 ರಲ್ಲಿ ವಿಧಿವಶರಾದರು. ಆದರೆ ಆಶ್ರಮದಲ್ಲಿ ‘ರಾಘವೇಂದ್ರ’ ಎಂಬ ಹೆಸರು ಮಾತ್ರ ಮರೆಯಾಗಲಿಲ್ಲ. ಸ್ವಾಮೀಜಿಯ ಹೆಸರಿನವರೇ ಆದ ರಾಘವೇಂದ್ರ ಪಾಟೀಲ ಆಶ್ರಮದ ಜವಾಬ್ದಾರಿ ಹೊತ್ತು ನಡೆದರು.

ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲ್ಲೂಕಿನ ಬೆಟಗೇರಿ ಗ್ರಾಮದವರಾದ ರಾಘವೇಂದ್ರ ಪಾಟೀಲ 1973ರಲ್ಲಿ ಇಲ್ಲಿನ ಕಾಲೇಜಿಗೆ ಭೌತಶಾಸ್ತ್ರ ಉಪನ್ಯಾಸಕರಾಗಿ ಬಂದರು. 2013ರವರೆಗೆ ಆಶ್ರಮದಲ್ಲೇ ಇದ್ದು, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಆಶ್ರಮ ಎಂದರೆ ರಾಘವೇಂದ್ರ ಪಾಟೀಲ ಎನ್ನುವ ಮಟ್ಟಿಗೆ ಹೆಸರು ಗಳಿಸಿದರು.

ರಾಘವೇಂದ್ರ ಸ್ವಾಮೀಜಿ ಆಶ್ರಮದ ಬೇರುಗಳನ್ನು ಆಳಕ್ಕೆ ಇಳಿಸಿದರೆ, ಪಾಟೀಲರು ಆಶ್ರಮಕ್ಕೆ ಒಂದು ಸ್ಪಷ್ಟ ದಿಕ್ಕು ತೋರಿದರು. ಸ್ವಾಮೀಜಿಯ ನಿಧನ ನಂತರವಂತೂ ಸಂಪೂರ್ಣ ಜವಾಬ್ದಾರಿ ಹೊತ್ತ ಅವರು, ಆಶ್ರಮವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ದರು.

ಆಶ್ರಮದ ವ್ಯಾಪ್ತಿಯನ್ನು ವಿಸ್ತರಿಸಿದರು. ಆಶ್ರಮದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಜೀವ ತುಂಬಿದರು. ಹಳೇ ವಿದ್ಯಾರ್ಥಿಗಳಿಂದ ಆರ್ಥಿಕ ನೆರವು ಪಡೆದು 2003ರಲ್ಲಿ ತಿರುಕರಂಗ ನಾಟಕ ಸಂಘ ಆರಂಭಿಸಿ ಪ್ರತೀ ವರ್ಷ 5 ದಿನಗಳ ನಾಟಕ ಜಾತ್ರೆಗೆ ನಾಂದಿ ಹಾಡಿದರು. ದಾನಿಗಳಿಂದ ಹಣ ಪಡೆದು ಆಶ್ರಮದ ಆವರಣದಲ್ಲಿ ಶಾಲಾ ಕಾಲೇಜು, ವಿದ್ಯಾರ್ಥಿ ನಿಲಯ, ಕಚೇರಿ ಕಟ್ಟಡಗಳನ್ನು ನಿರ್ಮಿಸಿದರು.

ಸಮಾಧಿ ಮಂಟಪ ನಿರ್ಮಾಣ: ಆಶ್ರಮ ಕಟ್ಟಿ ಬೆಳೆಸಿದ ರಾಘವೇಂದ್ರ ಸ್ವಾಮೀಜಿ ಅವರ ಸಮಾಧಿ ಅನಾಥವಾಗಿದ್ದ ಸ್ಥಿತಿ ಕಂಡ ಪಾಟೀಲರು ವಿಶೇಷ ಮಂದಿರವೊಂದನ್ನು ನಿರ್ಮಿಸುವ ಪಣ ತೊಟ್ಟರು. ಹಳೆಯ ವಿದ್ಯಾರ್ಥಿಗಳು, ಆಶ್ರಮದ ಅಭಿಮಾನಿಗಳಿಂದ ದಾನ ಪಡೆದು, ಸುಮಾರು ₨ 2 ಕೋಟಿ ವೆಚ್ಚದಲ್ಲಿ ಆಕರ್ಷಕ ಸಮಾಧಿ ಮಂದಿರ ನಿರ್ಮಿಸಿದರು.

ಆದರೆ, ಇದ್ದಕ್ಕಿದ್ದಂತೆ ಆಶ್ರಮದಿಂದ ಹೊರನಡೆಯುವ ಕಠೋರ ನಿರ್ಧಾರ ತೆಗೆದುಕೊಂಡ ಪಾಟೀಲರು ಯಾರ ಮಾತೂ ಕೇಳದೆ ತಮ್ಮೂರಿಗೆ ಹೊರಟು ಹೋಗಿದ್ದಾರೆ. ಇವರ ಜತೆಗೆ ಸಹಾಯಕ ಆಡಳಿತಾಧಿಕಾರಿಗಳಾಗಿದ್ದ ಕೆ.ಡಿ. ಬಡಿಗೇರ ಮತ್ತು ಎಲ್‌.ಎಸ್‌. ಶಿವರಾಮಯ್ಯ ಕೂಡ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಆಶ್ರಮಕ್ಕೆ ಅಕ್ಷರಶಃ ಅನಾಥಪ್ರಜ್ಞೆ ಕಾಡುತ್ತಿದೆ.

‘ಆಶ್ರಮ ನನ್ನನ್ನು ಎತ್ತರಕ್ಕೆ ಬೆಳೆಸಿದೆ’
1973ರಲ್ಲಿ ಉಪನ್ಯಾಸಕನಾಗಿ ಆಶ್ರಮಕ್ಕೆ ಬಂದ ನಾನು 40 ವರ್ಷ ಇದೇ ನೆಲದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. 2003ರಿಂದ ಆಶ್ರಮದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಸಾಹಿತ್ಯ ಕ್ಷೇತ್ರದಲ್ಲಿ ನಾನು ಎತ್ತರಕ್ಕೆ ಏರಲು ಆಶ್ರಮದ ವಾತಾವರಣ ಪೂರಕವಾಯಿತು. 1998ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, 2005ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದವು. ಕಾರಂತ ಪುರಸ್ಕಾರ, ಚದುರಂಗ, ವರ್ಧಮಾನ, ಗೊರೂರು, ಆರ್ಯಭಟ ಪ್ರಶಸ್ತಿಗಳು ದೊರೆತವು.

ಧಾರವಾಡದ ಗೆಳೆಯರು ಇಲ್ಲಿಗೆ ಬನ್ನಿ ಎಂದು ಒತ್ತಡ ಹೇರುತ್ತಿದ್ದರು. ವಿಶ್ರಾಂತ ಜೀವನ ಕಳೆಯಲು ಆಶ್ರಮ ಬಿಟ್ಟು ಬಂದಿದ್ದೇನೆ. ಭಾವನಾತ್ಮಕ ಸಂಬಂಧ ಹೊಂದಿದ್ದ ಆಶ್ರಮ ಬಿಟ್ಟು ಬಂದಿದ್ದಕ್ಕೆ  ನನಗೆ ತೀವ್ರ ನೋವಿದೆ. ಇಲ್ಲಿ ನನ್ನ ಜತೆಗಾರರ ಒಡನಾಟದಲ್ಲಿದ್ದುಕೊಂಡು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗುತ್ತೇನೆ. ನನಗೆ ಸಹಕಾರ ನೀಡಿದ ಆಶ್ರಮದ ಸಿಬ್ಬಂದಿ, ಗ್ರಾಮಸ್ಥರು ಮತ್ತು ಹಿತೈಷಿಗಳಿಗೆ ಧನ್ಯವಾದ.
–ರಾಘವೇಂದ್ರ ಪಾಟೀಲ

ಜವಾಬ್ದಾರಿ ಕೆಲಸ
ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಆಶ್ರಮಕ್ಕೆ ಹೊಸ ಮೆರಗು ತಂದುಕೊಟ್ಟ ಕೀರ್ತಿ ಪಾಟೀಲ ಅವರಿಗೆ ಸಲ್ಲುತ್ತದೆ. ಆಶ್ರಮದೊಂದಿಗೆ ಗ್ರಾಮಸ್ಥರನ್ನು ಬೆಸೆಯುವಲ್ಲಿ ಅವರ ಪಾತ್ರ ಮಹತ್ವದ್ದು. ಅವರ ಸೇವಾ ಅವಧಿಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾರೆ. ನಾಟಕೋತ್ಸವ ಆರಂಭಿಸುವ ಮೂಲಕ ಮಲ್ಲಾಡಿಹಳ್ಳಿಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
–ಬಿ. ಕೃಷ್ಣಮೂರ್ತಿ
ಎಸ್‌ಎಸ್‌ಬಿಎಸ್‌ ಡಿ.ಇಡಿ ಕಾಲೇಜು ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT