ADVERTISEMENT

ಸುಸಜ್ಜಿತ ಕಟ್ಟಡಕ್ಕೆ ವಸತಿಶಾಲೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 25 ಜೂನ್ 2011, 10:00 IST
Last Updated 25 ಜೂನ್ 2011, 10:00 IST
ಸುಸಜ್ಜಿತ ಕಟ್ಟಡಕ್ಕೆ ವಸತಿಶಾಲೆ ಸ್ಥಳಾಂತರ
ಸುಸಜ್ಜಿತ ಕಟ್ಟಡಕ್ಕೆ ವಸತಿಶಾಲೆ ಸ್ಥಳಾಂತರ   

ಮೊಳಕಾಲ್ಮುರು: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿಶಾಲೆಯನ್ನು ಕೊನೆಗೂ ಶುಕ್ರವಾರ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು.ಗುರುವಾರ ಶಾಲೆಯಲ್ಲಿ ಸಂಭವಿಸಿದ 21 ವಿದ್ಯಾರ್ಥಿನಿಯರ ಅನಾರೋಗ್ಯ ಘಟನೆಯಿಂದಾಗಿ ಪೋಷಕರು, ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಆಕ್ರೋಶಕ್ಕೆ ತುತ್ತಾಗಿ ಅಧಿಕಾರಿಗಳು  24 ಗಂಟೆಗಳ ಒಳಗಾಗಿ ಸುಸಜ್ಜಿತ ಹಾಗೂ ಮಾದರಿಯಾಗಿ ನಿರ್ಮಿಸಿರುವ ಮೊರಾರ್ಜಿ ವಸತಿಶಾಲೆ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ.

ಗುರುವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯ್ತಿ ಸಿಇಒ ರಂಗೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಂದ್ರಣ್ಣ, ರಂಗಸ್ವಾಮಿ, ಉಪ ವಿಭಾಗಾಧಿಕಾರಿ ನಾಗರಾಜ್ ಮತ್ತಿತರ ಅಧಿಕಾರಿಗಳು ಶಾಲೆ ನಡೆಯುತ್ತಿದ್ದ ಕಟ್ಟಡ ಪರಿಶೀಲನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸ್ವಂತ ಕಟ್ಟಡ ವ್ಯವಸ್ಥೆಯಾಗುವ ತನಕ ಮೊರಾರ್ಜಿ ವಸತಿ ಶಾಲೆ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲು ಸೂಚಿಸಿದರು ಎನ್ನಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ನೂತನ ಕಟ್ಟಡಕ್ಕೆ ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ ವ್ಯವಸ್ಥೆ ಮಾಡಿ ಸಂಜೆ ವೇಳೆಗೆ 128 ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದ್ದಾರೆ.

ಪ.ಪಂ.ಯ ಎಸ್‌ಎಫ್‌ಸಿ ಯೋಜನೆಯ ಶೇ. 22 ಅನುದಾನದಲ್ಲಿ ಖರೀದಿಸಿ,  ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದ 140 ಮಂಚಗಳನ್ನು ಸಹ ಶುಕ್ರವಾರ ಶಾಲೆಗೆ ಸ್ಥಳಾಂತರ ಮಾಡಿ ಜೋಡಣೆ ಕಾರ್ಯ ಕೈಗೊಳ್ಳಲಾಗಿದೆ.

ಇದಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ಭಾನುವಾರ ಶಾಸಕ ಎನ್.ವೈ. ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ನಿಗದಿ ಮಾಡಲಾಗಿದೆ ಎಂದು ಪ.ಪಂ. ಮೂಲಗಳು ತಿಳಿಸಿವೆ. ಪಟ್ಟಣದ  ವಿವಿಧ ವಸತಿ ಶಾಲೆಗಳು ಹಾಗೂ ಬಾಡಿಗೆ ಕಟ್ಟಡದಲ್ಲಿರುವ ಸರ್ಕಾರದ ವಿದ್ಯಾರ್ಥಿನಿಲಯಗಳ ಸ್ಥಿತಿ ಶೋಚನೀಯವಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.