ADVERTISEMENT

ಸೂತಕದ ಮನೆಯಲ್ಲಿ ಹಬ್ಬ ಮಾಡುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 5:55 IST
Last Updated 26 ಮಾರ್ಚ್ 2012, 5:55 IST
ಸೂತಕದ ಮನೆಯಲ್ಲಿ ಹಬ್ಬ ಮಾಡುವುದು ಹೇಗೆ?
ಸೂತಕದ ಮನೆಯಲ್ಲಿ ಹಬ್ಬ ಮಾಡುವುದು ಹೇಗೆ?   

ಹಿರಿಯೂರು: `ಸ್ವಾಮಿ ಈ ವರ್ಷ ಯುಗಾದಿ ಹಬ್ಬ ಮಾಡ್ಲಿಲ್ಲ. ಹಟ್ಟಿಯಲ್ಲಿ ಸೂತಕದ ವಾತಾವರಣ ಇದೆ. ನಮ್ಮ ಊರಿನ ಉಮ್ಮಣ್ಣ ಮತ್ತು ತಿಪ್ಪೇಸ್ವಾಮಿ ಸತ್ತಿದ್ದಾರೆ. ತಿಪ್ಪೇಸ್ವಾಮಿಗೆ ಎರಡು ಸಣ್ಣ ಮಕ್ಕಳಿವೆ. ಹೇಗೋ ಕೂಲಿ- ನಾಲಿ ಮಾಡಿ ಸಂಸಾರ ತೂಗಿಸುತ್ತಿದ್ದ. ಅಪಘಾತ ತಿಪ್ಪೇಸ್ವಾಮಿ ಕುಟುಂಬ ಬೀದಿಗೆ ಬೀಳುವಂತೆ ಮಾಡಿದೆ~.

ತಾಲ್ಲೂಕಿನ ಹಿಂಡಸಕಟ್ಟೆಗೆ ಭಾನುವಾರ ಸಂಜೆ ಮೃತಪಟ್ಟವರ ಕುಟುಂಬದವರಿಗೆ ತಲಾ ್ಙ 25 ಸಾವಿರ ವೈಯಕ್ತಿಕ ಪರಿಹಾರ ವಿತರಿಸಲು ಆಗಮಿಸಿದ್ದ ಶಾಸಕ ಡಿ. ಸುಧಾಕರ್ ಎದುರಿಗೆ ಗ್ರಾಮಸ್ಥರು ಮೃತರ ಕುಟುಂಬದ ಸ್ಥಿತಿಯನ್ನು ಬಿಚ್ಚಿಟ್ಟದ್ದು ಹೀಗೆ.

ಸರ್ಕಾರದಿಂದ ್ಙ 1 ಲಕ್ಷ ಪರಿಹಾರ ಘೋಷಣೆಯಾಗಿದೆ. ಆದಷ್ಟು ಬೇಗ ಹಣ ಸಿಗುವಂತೆ ಮಾಡುತ್ತೇನೆ. ಮಕ್ಕಳ ಓದಿಗೆ ನೆರವು ನೀಡುತ್ತೇನೆ. ನಿಮ್ಮ ದುಃಖದಲ್ಲಿ ಭಾಗಿಯಾಗಿರುತ್ತೇನೆ ಎಂದು ಸುಧಾಕರ್ ಭರವಸೆ ನೀಡಿದರು.

ನಾಯ್ಕರಕೊಟ್ಟಿಗೆಯಲ್ಲಿ ನಾಗಪ್ಪ- ಕೋಡಮ್ಮ ದಂಪತಿಯ ಇಬ್ಬರು ಪುತ್ರರಲ್ಲಿ ಹಿರಿಯ ಮಗ ರಮೇಶ (22) ಮೃತಪಟ್ಟಿದ್ದ. ಕೋಡಮ್ಮ ಅಪಘಾತ ಸಂಭವಿಸಿ ನಾಲ್ಕು ದಿನಗಳಾಗಿದ್ದರೂ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ಬೆಳೆದಿದ್ದ ಮಗನನ್ನು ಕಳೆದುಕೊಂಡೆ. ಅವನನ್ನು ಮರೆಯುವುದಾದರೂ ಹೇಗೆ ಎಂದು ಬಿಕ್ಕಿ ಬಿಕ್ಕಿ ಅತ್ತರು.

ಬಡಗೊಲ್ಲರಹಟ್ಟಿಯ ನೇತ್ರಮ್ಮ (19) ಯಲ್ಲದಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಆಕೆ ದಾವಣಗೆರೆ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದು, ಮಗಳು ಬದುಕಿ ಮನೆಗೆ ಬರುತ್ತಾಳೆ ಎಂದು ಕನಸು ಕಂಡಿದ್ದ ಪೋಷಕರನ್ನು ಕಂಗಾಲಾಗುವಂತೆ ಮಾಡಿದೆ.

ಹಿಂಡಸಕಟ್ಟೆ ದಲಿತ ಕಾಲೊನಿಯ ಹನುಮಪ್ಪನಿಗೆ 2 ಗಂಡು ಮತ್ತು 2 ಹೆಣ್ಣು ಮಕ್ಕಳು. ಪಿತ್ರಾರ್ಜಿತವಾಗಿ ಬಂದಿರುವ ಭೂಮಿ ಕೇವಲ 1 ಎಕರೆ. ಅದನ್ನು 4 ಜನ ಸಹೋದರರು ಹಂಚಿಕೊಳ್ಳಬೇಕು. ಭೂಮಿ ಹಂಚಿಕೆಯಾದರೆ ಈತನ ಪತ್ನಿ ಮತ್ತು 4 ಮಕ್ಕಳಿಗೆ ಉಳಿಯುವುದು ಕೇವಲ ಕಾಲು ಎಕರೆ ಮಾತ್ರ. ಮನೆಯಲ್ಲಿ ದುಡಿಯುವ ವ್ಯಕ್ತಿ ಈಗಿಲ್ಲ. ಮುಂದೆ ಹೇಗೆ ಎಂಬ ಪ್ರಶ್ನೆ ಆ ಕುಟುಂಬದ್ದು.

ಅಪಘಾತದಲ್ಲಿ ಮೃತಪಟ್ಟಿರುವ ಚಿಗಳಿಕಟ್ಟೆಯ ಮಹೇಶ್, ಹನುಮಣ್ಣ, ಶಾರದಮ್ಮ, ದೇವಮ್ಮ, ನೀಲಮ್ಮ, ಬ್ಯಾರಮಡು ಗ್ರಾಮದ ಕರೀಂಸಾಬ್, ಸೀಗೆಹಟ್ಟಿಯ ಬಾಲಜ್ಜ, ಹಂದಿಗನಡು ಗ್ರಾಮದ ಮೈಲಾರಿ ಬಹುತೇಕ ಎಲ್ಲರ ಮನೆಗಳ ಒಳಗೆ ಹೋಗಲು ತಲೆತಗ್ಗಿಸಿಯೆ ಪ್ರವೇಶಿಸಬೇಕು. ಬಹುತೇಕರಿಗೆ ಕೂಲಿಯೇ ಆಧಾರ. ಸರ್ಕಾರ ಘೋಷಿಸಿರುವ  ್ಙ 1 ಲಕ್ಷ ಮತ್ತು ಶಾಸಕರು ಕೊಟ್ಟಿರುವ ್ಙ 25 ಸಾವಿರ ರೂಪಾಯಿಯೇ ಈಗ ಅವರಿಗೆ ಆಧಾರ.

ಅಪಘಾತ ಸಂಭವಿಸಿದಾಗ ಬಾಯಿ ಮಾತಿನ ಸಾಂತ್ವನ ಹೇಳುತ್ತಿದ್ದವರೇ ಹೆಚ್ಚು. ಆದರೆ, ಶಾಸಕ ಸುಧಾಕರ್ ಚಿತ್ರದುರ್ಗದ ಆಸ್ಪತ್ರೆಗೆ ಬಂದು ಗಾಯಗೊಂಡವರಿಗೆ ತಲಾ ್ಙ 5 ಸಾವಿರ ಕೊಟ್ಟು ಹೋಗಿದ್ದರು. ಈಗ ಮನೆ ಬಾಗಿಲಿಗೆ ಬಂದು ್ಙ 25 ಸಾವಿರ ಕೊಟ್ಟಿದ್ದಾರೆ. ಈ ರೀತಿ ಧೈರ್ಯ ತುಂಬಿ, ಆರ್ಥಿಕ ನೆರವು ಕೊಟ್ಟವರನ್ನು ನೋಡಿರಲಿಲ್ಲ. ಜತೆಗೆ ಮೃತರ ಮಕ್ಕಳಿಗೆ ಓದಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಪಿಲ್ಲಾಜನಹಳ್ಳಿಯ ಗ್ರಾ.ಪಂ. ಮಾಜಿ ಸದಸ್ಯ ನಿಂಗಪ್ಪ ಸುದ್ದಿಗಾರರಿಗೆ ತಿಳಿಸಿದರು.

ಅಪಘಾತ ಸಂಭವಿಸಲು ಬಸ್ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಕಾರಣ. ಈ ಮಾರ್ಗದಲ್ಲಿ  ಹೆಚ್ಚು ಬಸ್ ಓಡಿಸಬೇಕು. ತಮ್ಮ ಗ್ರಾಮಕ್ಕೆ ಮುಖ್ಯ ರಸ್ತೆಯಿಂದ ಡಾಂಬರು ಹಾಕಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು ಎಂದು ಹಿರಿಯೂರಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಾದ ಜ್ಯೋತಿ, ಮಾಲಾಶ್ರೀ, ವಿಮಲಾಕ್ಷಿ ಮತ್ತಿತರರು ಶಾಸಕರಿಗೆ ಮನವಿ ಮಾಡಿದರು.

ಹಿರಿಯೂರು- ಉಡುವಳ್ಳಿ- ಹಿಂಡಸಕಟ್ಟೆ- ಕೆಕೆ ಹಟ್ಟಿ- ಹಂದಿಗನಡು- ಚಿಗಳಿಕಟ್ಟೆ- ಬ್ಯಾರಮಡು- ಶೇಷಪ್ಪನಹಳ್ಳಿ- ದಸೂಡಿ ಮಾರ್ಗವಾಗಿ ನಿತ್ಯ ಆರು ಬಾರಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಓಡಾಟಕ್ಕೆ ಸಾರಿಗೆ ಸಚಿವರ ಜತೆ ಚರ್ಚಿಸಿ ವ್ಯವಸ್ಥೆ ಮಾಡಿಸುವುದಾಗಿ ಎಂದು ಸುಧಾಕರ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.