ADVERTISEMENT

ಸೇತುವೆ ದುರಸ್ತಿಗೆ ಆಗ್ರಹಿಸಿ ರಸ್ತೆತಡೆ.

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 10:00 IST
Last Updated 20 ಫೆಬ್ರುವರಿ 2011, 10:00 IST

ಹಿರಿಯೂರು: ಎರಡು ವರ್ಷಗಳಿಂದ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದ್ದ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗ್ರಾಮಸ್ಥರು ರಸ್ತೆತಡೆ ನಡೆಸಲು ಆರಂಭಿಸಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಮಗಾರಿ ಆರಂಭಿಸಿದ ಘಟನೆ ಶನಿವಾರ ತಾಲ್ಲೂಕಿನ ಹುಚ್ಚವ್ವನಹಳ್ಳಿ ಸಮೀಪ ನಡೆಯಿತು.ಹಿರಿಯೂರು-ವಾಣಿ ವಿಲಾಸಪುರ ರಸ್ತೆಯಲ್ಲಿ ಹಳೆಯ ಸೇತುವೆ ಶಿಥಿಲಗೊಂಡಿದ್ದರಿಂದ, ಗ್ರಾಮಸ್ಥರ ಒತ್ತಾಯದ ಮೇರೆಗೆ ನೂತನ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿತ್ತು. ಆರಂಭದಲ್ಲಿ ಭರದಿಂದ ಸಾಗಿದ್ದ ಕಾಮಗಾರಿ ನಂತರ ನಿಧಾನಗತಿಯಲ್ಲಿ ಸಾಗುತ್ತಾ, ಕೊನೆಗೆ ನಿಂತೇ ಹೋಗಿತ್ತು.

ನೂತನ ಸೇತುವೆ ಅಪೂರ್ಣವಾಗಿದ್ದರಿಂದ ವಾಹನಗಳ ಓಡಾಟಕ್ಕೆ ಹಳೆಯ ಸೇತುವೆಯನ್ನೇ ಬಳಸಲಾಗುತ್ತಿತ್ತು. ಕಳೆದ ವರ್ಷ ಶಿಥಿಲವಾಗಿದ್ದ ಹಳೆಯ ಸೇತುವೆಯಿಂದ ಖಾಸಗಿ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು.ಬಸ್ ದುರಂತದ ನಂತರ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸಾಕಷ್ಟು ಒತ್ತಡ ಬಂದಿದ್ದರೂ, ಪ್ರಯೋಜನವಾಗಿರಲಿಲ್ಲ. ಕೊನೆಗೆ ಹುಚ್ಚವ್ವನಹಳ್ಳಿ ಹಾಗೂ ಉಪ್ಪಾರಹಟ್ಟಿಯ ಗ್ರಾಮಸ್ಥರು ರಸ್ತೆ ತಡೆಗೆ ಇಳಿದಾಗ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮುಕ್ಕಣ್ಣನಾಯಕ ಸ್ಥಳಕ್ಕೆ ಆಗಮಿಸಿದಾಗ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಹಣ ಬಿಡುಗಡೆ ಆಗುವಲ್ಲಿ ವಿಳಂಬವಾಗಿರುವ ಕಾರಣ ಕಾಮಗಾರಿ ತಡವಾಗಿದೆ. ಬರುವ ಮೇ ತಿಂಗಳ ಒಳಗೆ ಸೇತುವೆ ಪೂರ್ಣಗೊಳಿಸಲಾಗುವುದು ಎಂದು ಮುಕ್ಕಣ್ಣನಾಯಕ ಭರವಸೆ ನೀಡಿದರು. ಅಧಿಕಾರಿ ನೀಡಿರುವ ಭರವಸೆ ಮೇರೆಗೆ ತಾತ್ಕಾಲಿಕವಾಗಿ ರಸ್ತೆತಡೆ ಹಿಂದೆ ಪಡೆದಿದ್ದೇವೆ. ಈಗ ಆರಂಭಿಸಿರುವ ಕೆಲಸ ಮತ್ತೆ ನಿಂತರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮುಖಂಡರಾದ ಭೂತರಾಜು, ತಿಪ್ಪೇಸ್ವಾಮಿ, ಉಪ್ಪಾರಹಟ್ಟಿ ಬಸವರಾಜು, ಉದಯಶಂಕರ್, ಸಕ್ಕರಜ್ಜರ ಜಯರಾಂ, ಪಾಪಣ್ಣ, ಮೋಹನ್‌ಕುಮಾರ್, ಈರಣ್ಣ, ರಂಗನಾಥ್, ವಿಶ್ವನಾಥ್, ಮಂಜುನಾಥ್, ಜುಂಜಣ್ಣ, ಶಿವಕುಮಾರ್, ಜಬ್ಬಾರ್‌ಸಾಬ್ ಮತ್ತಿತರರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.