ADVERTISEMENT

ಸೋರುತಿಹುದು ಶಾಲೆ ಮಾಳಿಗೆ...!

​ಪ್ರಜಾವಾಣಿ ವಾರ್ತೆ
Published 24 ಜುಲೈ 2012, 8:25 IST
Last Updated 24 ಜುಲೈ 2012, 8:25 IST
ಸೋರುತಿಹುದು ಶಾಲೆ ಮಾಳಿಗೆ...!
ಸೋರುತಿಹುದು ಶಾಲೆ ಮಾಳಿಗೆ...!   

ಭರಮಸಾಗರ: ಈ ಶಾಲೆ ಆರಂಭಗೊಂಡು ಶತಮಾನ ಕಳೆದಿದೆ. ಗ್ರಾಮೀಣ ಭಾಗದ ಅಸಂಖ್ಯ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕಾರಣವಾದ ಜ್ಞಾನದೇಗುಲ ಎನ್ನುವ ಹೆಗ್ಗಳಿಕೆ ಪಡೆದಿರುವ ಶಾಲೆ ಇಂದು ಇಲಾಖೆ ನಿರ್ಲಕ್ಷ್ಯದಿಂದ ಶಿಥಿಲಾವಸ್ಥೆಯಲ್ಲಿದೆ.

-ಇದು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸದ್ಯದ ಸ್ಥಿತಿಗತಿ.

ಬಡವರವ ಪಾಲಿನ ಜ್ಞಾನ ಮಂದಿರವಾಗಬೇಕಿದ್ದ ಈ ಶಾಲೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಹಾಳು ಸುರಿಯುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯ ನಡುವೆಯೂ ಉತ್ತಮ ದಾಖಲಾತಿ ಹೊಂದಿರುವ ಇಲ್ಲಿ 1ರಿಂದ 8ನೇ ತರಗತಿವರೆಗೆ ಸುಮಾರು 478 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲಿ ಕೊಠಡಿಗಳಿಲ್ಲ.

ADVERTISEMENT

ಹತ್ತು ಕೊಠಡಿಗಳಲ್ಲಿ ಬಳಕೆಗೆ ತಕ್ಕಮಟ್ಟಿಗೆ ಯೋಗ್ಯವಾಗಿರುವುದು 6 ಕೊಠಡಿಗಳು ಮಾತ್ರ. ಛಾವಣಿಯ ಹೆಂಚುಗಳು ಹೊಡೆದಿವೆ. ಮಳೆ ಬಂದರೆ ನೀರು ಸೋರುವುದರಿಂದ ವಿದ್ಯಾರ್ಥಿಗಳು ತರಗತಿಯೊಳಗೆ ಕೂರುವುದು ಕಷ್ಟದ ಸಂಗತಿಯಾಗಿದೆ. ಛಾವಣಿಗೆ ಆಧಾರವಾಗಿರುವ ತೊಲೆಗಳು ಶಿಥಿಲಗೊಂಡು ಮುರಿದು ಬೀಳುವ ಸ್ಥಿತಿಯಲ್ಲಿವೆ. ಅನೇಕ ಕೊಠಡಿಗಳಲ್ಲಿ ಕಿಟಕಿ-ಬಾಗಿಲುಗಳು ಸುಸ್ಥಿತಿಯಲಿಲ್ಲ. ವಿಶಾಲವಾಗಿರುವ ಶಾಲಾ ಆವರಣದ ಸುತ್ತ ನಿರ್ಮಿಸಿರುವ ಕಾಂಪೌಂಡ್ ಮುರಿದುಬಿದ್ದಿದ್ದು, ಇಲ್ಲಿ ತ್ಯಾಜ್ಯಗಳನ್ನು ಹಾಕುವುದರಿಂದ ಶಾಲೆ ಆವರಣದ ನೈರ್ಮಲ್ಯಕ್ಕೆ ಧಕ್ಕೆಯಾಗಿದೆ.

ಶಾಲೆಗೆ ಬೆಂಚು, ಡೆಸ್ಕ್ ಸೌಲಭ್ಯ ದೊರಕದೆ ವಿದ್ಯಾರ್ಥಿಗಳು ನೆಲದ ಮೇಲೆ ಕೂತು ಪಾಠ ಕೇಳುವುದು ಅನಿವಾರ್ಯವಾಗಿದೆ. ಏಳು ಕಂಪ್ಯೂಟರ್‌ಗಳನ್ನು ನೀಡಿದ್ದರೂ ಅವುಗಳಿಗೆ ಪ್ರತ್ಯೇಕ ಕೊಠಡಿ, ಕಂಪ್ಯೂಟರ್ ಕಲಿಸುವ ಶಿಕ್ಷಕರಿಲ್ಲದ ಕಾರಣ ಅವು ವಿದ್ಯಾರ್ಥಿಗಳ ಬಳಕೆಗೆ ಲಭ್ಯವಾಗದೆ ದೂಳು ತಿನ್ನುತ್ತಿವೆ!

ಇಲ್ಲಿ ಗ್ರಂಥಾಲಯದ ವ್ಯವಸ್ಥೆ ಇಲ್ಲ. ನೀರು ಶುದ್ಧೀಕರಣ ಯಂತ್ರ ಕಾರ್ಯ ನಿರ್ವಹಿಸದೆ ಇರುವುದರಿಂದ ವಿದ್ಯಾರ್ಥಿಗಳು ಫ್ಲೋರೈಡ್‌ಯುಕ್ತ ನೀರು ಸೇವಿಸುವುದು ಅನಿವಾರ್ಯವಾಗಿದೆ. ರಜಾ ದಿನಗಳಲ್ಲಿ ಕಿಡಿಗೇಡಿಗಳು ಶಾಲೆ ಆವರಣದಲ್ಲಿ, ಕೆಲವೊಮ್ಮೆ ಕೊಠಡಿಗಳ ಬಾಗಿಲು ಮುರಿದು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಸೂಕ್ತ ಭದ್ರತೆಯ ಅವಶ್ಯಕತೆ ಇದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಅನೇಕ ಬಾರಿ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ.

`ಇಲ್ಲಿ ಕಲಿತ ಅನೇಕ ಜನರು ವೈದ್ಯಕೀಯ, ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಎಲ್ಲರ ನೆರವು ಪಡೆದು ಶಾಲಾ ಶತಮಾನೊತ್ಸವ ಸಮಾರಂಭ ನಡೆಸಬೇಕು ಎನ್ನುತ್ತಾರೆ ಶಾಲೆಯ ಹಳೇ ವಿದ್ಯಾರ್ಥಿಗಳಾದ ರಾಜು, ಪ್ರಕಾಶ್, ಸೂರಪ್ಪ, ಪ್ರಸಾದ್, ರಹಮತ್, ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.