ADVERTISEMENT

ಸೌಲಭ್ಯ ಸದುಪಯೋಗಕ್ಕೆ ಮನವಿ

`ನೇಕಾರರಿಗೆ ಕ್ರೆಡಿಟ್ ಕಾರ್ಡ್' ವಿತರಣಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 5:57 IST
Last Updated 27 ಡಿಸೆಂಬರ್ 2012, 5:57 IST

ಮೊಳಕಾಲ್ಮುರು: ವೃತ್ತಿಯಲ್ಲಿ ಉನ್ನತಿ ಹೊಂದುವ ನಿಟ್ಟಿನಲ್ಲಿ ನೇಕಾರರಿಗೆ ಜಾರಿಗೆ ತಂದಿರುವ ಕ್ರೆಡಿಟ್ ಕಾರ್ಡ್ ಸೌಲಭ್ಯ ಸದುಪಯೋಗಕ್ಕೆ ಎಲ್ಲಾ ಬಗೆಯ ನೇಕಾರರು ಪ್ರಾಮಾಣಿಕ ಯತ್ನ ಮಾಡಬೇಕು ಎಂದು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಕೇಂದ್ರೀಯ ಕಚೇರಿ ಮಹಾ ವ್ಯವಸ್ಥಾಪಕ ಕೆ. ಸುಬ್ರಮಣ್ಯಂ ಮನವಿ ಮಾಡಿದರು.

ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಬುಧವಾರ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ `ನೇಕಾರರಿಗೆ ಕ್ರೆಡಿಟ್ ಕಾರ್ಡ್' ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ರೈತರ ನಂತರದ ಸ್ಥಾನದಲ್ಲಿರುವ ನೇಕಾರರು ತೀವ್ರ ಸಂಕಷ್ಟದಲ್ಲಿ ಇರುವುದನ್ನು ಕೇಂದ್ರ ಸರ್ಕಾರ ಮನಗಂಡು ಬ್ಯಾಂಕ್‌ಗಳ ಮೂಲಕ ಅವರಿಗೆ ಆರ್ಥಿಕ ಸಹಾಯ ಕಲ್ಪಿಸಲು ಕ್ರಮ ಕೈಗೊಂಡಿದೆ. ಅಂಕಿ-ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ 40 ಲಕ್ಷ ನೇಕಾರರು ಇದ್ದಾರೆ. ಅವರಿಗೆ ಸ್ವಉದ್ಯೋಗಕ್ಕೆ ಅನುಕೂಲವಾಗಲಿ ಎಂದು ಕಿಸಾನ್‌ಕಾರ್ಡ್ ಮಾದರಿಯಲ್ಲಿ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡಲಾಗುತ್ತಿದ್ದು, ಅಗತ್ಯ ಬಿದ್ದಾಗ ಹಣ ಪಡೆದುಕೊಂಡು ಸೂಕ್ತ ಮರುಪಾವತಿ ಮಾಡಬೇಕು ಎಂದು ಹೇಳಿದರು.

ಬ್ಯಾಂಕ್‌ನ ಹುಬ್ಬಳ್ಳಿ ವೃತ್ತ ಮಹಾ ಪ್ರಬಂಧಕ ಬಿ.ಎನ್. ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಕೆ. ಗುರುಲಿಂಗಪ್ಪ, ಬ್ಯಾಂಕ್‌ನ ಹುಬ್ಬಳ್ಳಿ ಶಾಖೆ ಮುಖ್ಯ ವ್ಯವಸ್ಥಾಪಕ ಶಂಕರಮೂರ್ತಿ, ಪಟ್ಟಸಾಲೆ ಸಮಾಜ ಅಧ್ಯಕ್ಷ ಡಿ. ಷಡಾಕ್ಷರಪ್ಪ ಮಾತನಾಡಿದರು.

ಸ್ಥಳೀಯ ಶಾಖೆ ವ್ಯವಸ್ಥಾಪಕ ಎನ್. ಪಾರ್ಥೀಬನ್, ರಾಂಪುರ ಶಾಖೆಯ ರಮೇಶ್‌ನಾಯಕ್, ಚಳ್ಳಕೆರೆ ಶಾಖೆಯ ರಾಮನಾಯಕ್, ರಾಘವೇಂದ್ರ ಮತ್ತು ಕೈಮಗ್ಗ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವೆಬ್‌ಸೈಟ್ ಆರಂಭ:  ಪ್ರಸಿದ್ಧ ಮೊಳಕಾಲ್ಮುರು ರೇಷ್ಮೆಸೀರೆ ಕುರಿತು ಕೈಮಗ್ಗ ಹಾಗೂ ಜವಳಿ ಇಲಾಖೆ ವೆಬ್‌ಸೈಟ್ ಸಿದ್ಧಪಡಿಸಿದೆ ಎಂದು ಇಲಾಖೆ ಭೋಜರಾಜ್ ಕಠಾರಿ ಬುಧವಾರ ತಿಳಿಸಿದರು.

ಡಿ. 28ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ವೆಬ್‌ಸೈಟ್ ಉದ್ಘಾಟನೆ ಮಾಡಲಾಗುವುದು. ಇದರಿಂದಾಗಿ ಮೊಳಕಾಲ್ಮುರು ರೇಷ್ಮೆ ಸೀರೆ ಮತ್ತು ಈ ಭಾಗದ ನೇಯ್ಗೆ ಕಾರ್ಯ ಮತ್ತಷ್ಟು ಪ್ರಸಿದ್ಧಿ ಪಡೆಯಲು ಸಹಾಯವಾಗಲಿದೆ ಎಂದು ಮಾಹಿತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.