ADVERTISEMENT

ಸ್ಥಳೀಯರಿಗೆ ಟಿಕೆಟ್; ಬಿಜೆಪಿ ಸಂಪ್ರದಾಯ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 5:43 IST
Last Updated 15 ಮಾರ್ಚ್ 2014, 5:43 IST

ಚಿತ್ರದುರ್ಗ: ‘ಲೋಕಸಭಾ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಎಸ್. ನಿಜಲಿಂಗಪ್ಪ ಹಾಗೂ ಜನಾರ್ದನ ಸ್ವಾಮಿ ಹೊರತುಪಡಿಸಿದರೆ ಉಳಿದ ಸಂಸದರೆಲ್ಲ ಹೊರಗಿನವರೇ ಆಗಿದ್ದು, ಈ ಬಾರಿಯೂ ಕಾಂಗ್ರೆಸ್‌  ಹೊರಗಿನವರಗೆ ಟಿಕೆಟ್ ನೀಡುತ್ತಿದೆ. ಇದು ನಮ್ಮ ಅಭ್ಯರ್ಥಿ ಗೆಲುವಿಗೆ ವರದಾನವಾಗಿದೆ’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅಭಿಪ್ರಾಯ ಪಟ್ಟರು
ಇಲ್ಲಿನ ಬಸವೇಶ್ವರ ಟಾಕೀಸ್ ರಸ್ತೆಯಲ್ಲಿನ ಮಾರುತಿ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಚುನಾವಣಾ ಪ್ರಚಾರದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಒಂದು ಉತ್ತಮ ಸ್ಥಾನ ಕಲ್ಪಿಸಬೇಕೆಂದರೆ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಬೇಕು. ಅದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸಬೇಕು’ ಎಂದು ಮತದಾರರಲ್ಲಿ ಮನವಿ ಮಾಡಿದರು.

‘ದೇಶದ 16 ಯುವ ಸಂಸದರಲ್ಲಿ ನಮ್ಮ  ಸಂಸದ ಜನಾರ್ದನ ಸ್ವಾಮಿ ಸ್ಥಾನ ಪಡೆದಿದ್ದಾರೆ. ನಾಲ್ಕೈದು ದಶಕಗ­ಳಿಂದ ನೆನಗುದಿಗೆ ಬಿದ್ದಿದ್ದ ರೈಲ್ವೆ, ವಿಜ್ಞಾನ ನಗರದಂತಹ ಯೋಜನೆಗಳಿಗೆ ಐದು ವರ್ಷಗಳಲ್ಲಿ ಚಾಲನೆ ನೀಡಿದ್ದಾರೆ. ಇಷ್ಟೆಲ್ಲ ಧನಾತ್ಮಕ ಅಂಶಗಳನ್ನು ಮೆಚ್ಚಿ ಈ ಬಾರಿ ಪ್ರಜ್ಞಾವಂತ ಮತದಾರರು ಬಿಜೆಪಿಗೆ ಮತನೀಡುವ ವಿಶ್ವಾಸವಿದೆ’ ಎಂದರು. ‘ಕಳೆದ ಬಾರಿ ಯಾವದೇ ಪ್ರಭಾವವಿಲ್ಲದೇ ಕ್ಷೇತ್ರದ ಜನ ಜನಾರ್ದನಸ್ವಾಮಿ ಅವರನ್ನು ೧.35 ಲಕ್ಷ ಅಂತರದಿಂದ ಗೆಲ್ಲಿಸಿದ್ದಾರೆ ಎಂದರು.

‘ಚಂದ್ರಪ್ಪ ಗೈರು; ಅಪಾರ್ಥ ಬೇಡ’
ಕಾರ್ಯಾಲಯ ಉದ್ಘಾಟನೆಗೆ ಮಾಜಿ ಶಾಸಕ ಹೊಳಲ್ಕೆರೆಯ ಎಂ.ಚಂದ್ರಪ್ಪ ಅವರ ಗೈರು ಎದ್ದು ಕಾಣುತ್ತಿತ್ತು. ಈ ಬಗ್ಗೆ ಪತ್ರಕರ್ತರು ಶಾಸಕರನ್ನು ಪ್ರಶ್ನಿಸಿದಾಗ, ‘ಸಭೆಗೆ ಮಾಜಿ ಶಾಸಕ ಚಂದ್ರಪ್ಪ ಬಂದಿಲ್ಲ, ತಿಪ್ಪಾರೆಡ್ಡಿ ಹೇಳಿದವರಿಗೆ ಟಿಕೆಟ್ ನೀಡಿಲ್ಲ ಎನ್ನುವ ಅನುಮಾನಗಳು ಬೇಡವೇ ಬೇಡ’ ಎಂದು ಅವರು ತಿಳಿಸಿದರು.

ಸಂಸದ ಜನಾರ್ದನಸ್ವಾಮಿ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಕೇವಲ ಕಾಮಗಾರಿಗಳ ಶಂಕುಸ್ಥಾಪನೆ,  ರಾಜ್ಯ  ಸರ್ಕಾರ ಕೇವಲ ಉದ್ಘಾಟನೆಯಲ್ಲೇ ಕಾಲ ಹರಣ ಮಾಡುತ್ತಿದೆ. ೪೦-–೫೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಭದ್ರಾ ಯೋಜನೆ, ರೈಲ್ವೆ ಯೋಜನೆಗಳಿಗೆ ಬಿಜೆಪಿ ಸರ್ಕಾರ ತ್ವರಿತ ಚಾಲನೆ ನೀಡುವ ಮೂಲಕ ಬಯಲು ಸೀಮೆಯ ಅಭಿವೃದ್ಧಿಗೆ ಒತ್ತು ನೀಡಿದೆ’ ಎಂದರು.

‘ಹಿರಿಯರಾದ ಯಡಿಯೂರಪ್ಪ, ಶ್ರೀರಾಮುಲು ಪಕ್ಷಕ್ಕೆ ಮರಳಿದ್ದಾರೆ. ಬಿಜೆಪಿ ಈಗ ಮತ್ತಷ್ಟು ಬಲಿಷ್ಠವಾಗಿದೆ. ಪಕ್ಷಕ್ಕೆ ಮರಳಿದ ಹಾಗೂ ಅವರ ಬರುವಿಕೆಗೆ ಒಪ್ಪಿದ ಕೇಂದ್ರ ಬಿಜೆಪಿ ನಿರ್ಧಾರವನ್ನು ಸಂತೋಷದಿಂದ ಸ್ವಾಗತಿಸುತ್ತಿದ್ದೇವೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ಬಿಜೆಪಿ ಲೋಕಸಭಾ ಸಹ ಪ್ರಭಾರಿ ಜಿ.ಎಂ.ಸುರೇಶ್, ಜಿಲ್ಲಾಧ್ಯಕ್ಷ ನರೇಂದ್ರನಾಥ್, ಮುಖಂಡರಾದ ಕೆ.ಎಸ್.ನವೀನ್ ಕುಮಾರ್, ಲಿಂಗಮೂರ್ತಿ, ಬದರಿನಾಥ್, ತಿಪ್ಪೇಸ್ವಾಮಿ, ಕೊಲ್ಲಿಲಕ್ಷ್ಮಿ, ಶ್ಯಾಮಲ, ವಕ್ತಾರ ಪ್ರತಾಪ್ ರುದ್ರದೇವ್ ಸೇರಿದಂತೆ ಮತ್ತಿತರ ನಾಯಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.