ADVERTISEMENT

ಹರಿಯಬ್ಬೆ ಶಾಲೆಗೆ ಸುವರ್ಣ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 4:30 IST
Last Updated 14 ನವೆಂಬರ್ 2012, 4:30 IST

ಧರ್ಮಪುರ: ಹೋಬಳಿಯ ಹರಿಯಬ್ಬೆ ಸರ್ಕಾರಿ ಪ್ರೌಢಶಾಲೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ.

ಬಯಲುಸೀಮೆ ಎಂದೇ ಪ್ರಖ್ಯಾತವಾಗಿರುವ ಗಡಿ ಪ್ರದೇಶವಾಗಿರುವ ಧರ್ಮಪುರ ಹೋಬಳಿಯ ನಾಗರಿಕರು ಆರ್ಥಿಕವಾಗಿ ಅಷ್ಟೇನೋ    ಬಲಿಷ್ಠರಲ್ಲ. ಆದರೂ, ಶೈಕ್ಷಣಿಕ, ರಾಜಕೀಯ ವಾಗಿ ಗುರುತಿಸಿಕೊಂಡಿರುವ ಸಮೀಪದ ಹರಿಯಬ್ಬೆಯಲ್ಲಿ  ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ಆಳ್ವಿಕೆಯ ಅಡಿಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಪ್ರಾರಂಭಗೊಂಡಿದ್ದವು.

ಆದರೆ, ನಂತರದ ಹೆಚ್ಚಿನ ವಿದ್ಯಾಭ್ಯಾಸಕ್ಕೆ            ದೂರದ ಚಿತ್ರದುರ್ಗ, ಮಲ್ಲಾಡಿಹಳ್ಳಿ, ಬೆಂಗಳೂರು ಇಲ್ಲವೇ ನಗರ ಪ್ರದೇಶಗಳಿಗೆ ಹೋಗಬೇಕಿತ್ತು. ಬಡ ಕುಟುಂಬಗಳು, ಪರಿಶಿಷ್ಟ ಜಾತಿ, ಪಂಗಡದ ಹಾಗೂ ಆರ್ಥಿಕವಾಗಿ ಮುಗ್ಗರಿಸಿದ ಅದೆಷ್ಟೋ ಪ್ರತಿಭಾವಂತರು  ಮಾಧ್ಯಮಿಕ ಶಿಕ್ಷಣಕ್ಕೆ ಸೀಮಿತವಾಗಿ ಪ್ರೌಢ ಶಿಕ್ಷಣದಿಂದ  ವಂಚಿತರಾಗುತ್ತಿದ್ದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ  ಹರಿಯಬ್ಬೆ ಗ್ರಾಮದ  ಹಿರಿಯ ಚೇತನಗಳಾದ ದಿ.ಆರ್.ಕೆ. ಪಟೇಲ್, ಎಚ್.ಡಿ. ಗುಂಡಪ್ಪ, ದೊಡ್ಡಬಳೆ ಗುಂಡಪ್ಪ, ಬಿ. ಸತ್ಯನಾರಾಯಣ, ಚಿಕ್ಕಪ್ಪ, ಎಚ್.ವಿ. ಗುಂಡಪ್ಪ, ಸಿದ್ದಪ್ಪ, ತಿಮ್ಮಚಾರ್, ತಿರುಮಲಾ ಶ್ರೇಷ್ಟಿ, ತಿಮ್ಮಜ್ಜ, ಮೂಡ್ಲಪ್ಪ, ಪೂಜಾರ್  ಯೆಂಜಾರಪ್ಪ ಅವರೆಲ್ಲರ ಅವಿರತ ಪರಿಶ್ರಮ ಮತ್ತು ಉತ್ಸುಕತೆ ಫಲವಾಗಿ 1961ರಲ್ಲಿ `ಮಹಾತ್ಮ ಗಾಂಧಿ ಗ್ರಾಮಾಂತರ ಪ್ರೌಢಶಾಲೆ~ ಪ್ರಾರಂಭವಾಯಿತು.

ನಂತರ ಇದು ಖಾಸಗಿ ವಲಯದಿಂದ ತಾಲ್ಲೂಕು ಮಂಡಳಿ ಪ್ರೌಢಶಾಲೆಯಾಗಿ, ತದನಂತರ ಸರ್ಕಾರಿ ಪ್ರೌಢಶಾಲೆಯಾಗಿ ರೂಪಾಂತರಗೊಂಡಿತು. ಈಗ ಪದವಿ ಪೂರ್ವ ಮಹಾವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬಂದು ಸುಮಾರು 10 ಎಕರೆಯಲ್ಲಿ ವಿಶಾಲವಾಗಿ ಮೈದಳೆದು ಈ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

 ಸುದೀರ್ಘವಾದ 50 ವರ್ಷಗಳ ಸಾರ್ಥಕ ಸೇವಾ ಹಾದಿ ಕ್ರಮಿಸಿ ಗ್ರಾಮಾಂತರ ವಿದ್ಯಾರ್ಥಿಗಳಿಗೆ  ಜ್ಞಾನ ದಾಹವನ್ನು ಅಡಗಿಸುವುದರ ಜತೆಗೆ ಅವರ ಜೀವನವನ್ನು ಸಾರ್ಥಕ ಗೊಳಿಸಲು ಸಹಕಾರಿಯಾಗಿರುವುದು ಶ್ಲಾಘನೀಯ ಮತ್ತು ಅವಿಸ್ಮರಣೀಯ.

ಈ ಶಾಲೆಯಿಂದ ಹೊರಬಂದ ಪ್ರತಿಭಾವಂತರು ವೈದ್ಯಕೀಯ, ಪಶು ವೈದ್ಯಕೀಯ, ರೇಷ್ಮೆ, ಹೈನು ತಂತ್ರಜ್ಞಾನ, ಕೃಷಿ, ಎಂಜಿನಿಯರಿಂಗ್, ಔಷಧಿ ಶಾಸ್ತ್ರ, ನ್ಯಾಯಶಾಸ್ತ್ರ, ಸ್ನಾತಕೋತ್ತರ, ಡಾಕ್ಟರೇಟ್ ಮತ್ತು ಡಿ.ಲಿಟ್. ಪದವಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಸರಿಸಿದ್ದಾರೆ.
ಈ  ಶಾಲೆಯ ಹಳೇ ವಿದ್ಯಾರ್ಥಿ ಗೆಳೆಯರ ಬಳಗ  ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ನ. 24 ಮತ್ತು 25 ರಂದು ಹಮ್ಮಿಕೊಂಡಿದ್ದಾರೆ. 
ವಿ. ವೀರಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.