ADVERTISEMENT

ಹಳ್ಳಿಗಳ ಸಾಂಸ್ಕೃತಿಕ ಸದೃಢತೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 6:55 IST
Last Updated 15 ಮಾರ್ಚ್ 2011, 6:55 IST

ಸಿರಿಗೆರೆ: ಸಾಂಸ್ಕೃತಿಕವಾಗಿ ಗ್ರಾಮೀಣ ಪ್ರದೇಶಗಳು ಸದೃಢವಾದಾಗ ಅಭಿವೃದ್ಧಿ ಸಾಧ್ಯ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಸಮೀಪದ ಚಿಕ್ಕೇನಹಳ್ಳಿಯಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಈಚೆಗೆ ನಡೆದ ಪರಶುರಾಮ ಎಚ್. ಬಣಕಾರ ವಿರಚಿತ ‘ಸತ್ಯ ಕಟ್ಟಿದ ಸಾಮ್ರಾಜ್ಯ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವುದರ ಜತೆಗೆ ಸಾಂಸ್ಕೃತಿಕವಾಗಿಯೂ ಕೂಡ ಅಭಿವೃದ್ಧಿ ಹೊಂದಬೇಕು. ಜನಪದ ಗೀತೆಗಳ ಗಾಯನ, ಚೌಡಿಕೆ ಪದ, ಗೊರವರ ಪದ, ಗೀಗೀ ಪದ, ಭಜನೆ, ವೀರಗಾಸೆಗಳಂತಹ ಕಲೆಗಳು ವಿನಾಶವಾಗದಂತೆ ಕಾಪಾಡಿಕೊಳ್ಳಬೇಕು. ಜನಪದ ಕಲೆಗಳನ್ನು ಪೋಷಿಸಿ ಅವುಗಳನ್ನು ನಮ್ಮ ಮುಂದಿನ ಪೀಳಿಗೆಯೂ ರೂಢಿಸಿಕೊಂಡು ಹೋಗುವಂತೆ ನೋಡಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯೆ ಬಿ. ವತ್ಸಲಾ ಪ್ರಭು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಕಾಶ್, ಗ್ರಾಮ ಪಂಚಾಯ್ತಿ  ಮಾಜಿ ಅಧ್ಯಕ್ಷ ಎಸ್.ಜಿ. ಪ್ರಭು, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಕೆ. ಮಂಜುನಾಥ್ ಇತರರಿದ್ದರು.ಪಳಿಕೆಹಳ್ಳಿಯ ಗ್ರಾಮೀಣ ರಂಗ ನಿರ್ದೇಶಕ ಟಿ.ಎಸ್. ಹನುಮಂತಪ್ಪ ನಾಟಕ ನಿರ್ದೇಶಿಸಿದ್ದರು.

ವಸ್ತು ಪ್ರದರ್ಶನ
ಹೊಸದುರ್ಗ:
ಕೃಷಿ ಇಲಾಖೆ ಆಶ್ರಯದಲ್ಲಿ ಇಲ್ಲಿನ ಬಸ್‌ನಿಲ್ದಾಣದಲ್ಲಿ ಕೃಷಿ ಪರಿಕಗಳು ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.ಕೃಷಿ ಚಟುವಟಿಕೆಗಳಿಗೆ ಬಳಸುವ ಆಧುನಿಕ ಯಂತ್ರೋಪಕರಣಗಳು, ಆಧುನಿಕ ಕೃಷಿ ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಕೃಷಿ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು.

ತಾ.ಪಂ. ಅಧ್ಯಕ್ಷೆ ಪವಿತ್ರಮ್ಮ ವಸ್ತುಪ್ರದರ್ಶನ ಉದ್ಘಾಟಿಸಿದರು. ಜಿ.ಪಂ. ಸದಸ್ಯರಾದ ಡಿ. ಪರಶುರಾಮಪ್ಪ, ಆರ್. ಹನುಮಂತಪ್ಪ, ತಾ.ಪಂ. ಉಪಾಧ್ಯಕ್ಷೆ ಬೋರಮ್ಮ, ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಆರ್. ಹಂಸವೇಣಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಕುಮಾರ್, ಕೃಷಿ ಅಧಿಕಾರಿ ಪರಪ್ಪ, ತಾ.ಪಂ. ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.