ADVERTISEMENT

ಹಳ್ಳ ಜಿನುಗಲಿಲ್ಲ, ಜಲಾಶಯ ಭರ್ತಿಯಾಗಲಿಲ್ಲ!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 6:05 IST
Last Updated 22 ಮಾರ್ಚ್ 2014, 6:05 IST

ಮೊಳಕಾಲ್ಮುರು: ‘ಜಿನಗಿಹಳ್ಳ ನೀರು ಹರಿಯಲು ಬಿಟ್ಟು.. ರಂಗಯ್ಯನದುರ್ಗ ಜಲಾಶಯ ಕಟ್ಟದಿದ್ದರೆ!’ ಎಂದು ತಾಲ್ಲೂಕಿನಲ್ಲಿ ಯಾರನ್ನಾದರೂ ಕೇಳಿದರೆ ಬರುವ ಉತ್ತರ ಒಂದೇ ಏನಾಗುತ್ತಿತ್ತು? ಎಂದು.

ನಿರಂತರವಾಗಿ ಸೇವೆಯಿಂದ ದೂರವಾಗಿರುವ ರಂಗಯ್ಯನದುರ್ಗ ಜಲಾಶಯವನ್ನು ತಾಲ್ಲೂಕಿನ ಜನರು ಮರೆತು ವರ್ಷಗಳೇ ಉರುಳಿವೆ. ರಂಗಯ್ಯನದುರ್ಗ ಜಲಾಶಯ ಇದೆ ಎಂಬ ಒಂದೇ ಕಾರಣಕ್ಕೆ ತಾಲ್ಲೂಕು ನಂಜುಂಡಪ್ಪ ವರದಿಯಲ್ಲಿ ಅತಿ ಹಿಂದುಳಿದ ಬದಲು ಹಿಂದುಳಿದ ತಾಲ್ಲೂಕು ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದೇ ಒಂದು ದುರಂತ. ಆದರೆ, ತಾಲ್ಲೂಕಿನ ವಾಸ್ತವ ಸ್ಥಿತಿ ಇದಕ್ಕೆ ವಿರುದ್ಧವಾಗಿದೆ.

ನೀರಿನ ಮೂಲವಿಲ್ಲ: ತಾಲ್ಲೂಕಿನಲ್ಲಿರುವ ಸಣ್ಣ ನೀರಾವರಿ ಇಲಾಖೆಯ ನಾಗಸಮುದ್ರ, ಅಮಕುಂದಿ, ಅಶೋಕ ಸಿದ್ದಾಪುರ, ಗೌರ ಸಮುದ್ರ, ಚಿಕ್ಕೇರಹಳ್ಳಿ, ಹಿರೇಕೆರೆಹಳ್ಳಿ ಕೆರೆಗಳು, ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿರುವ ಗುಂಡ್ಲೂರು, ಚಿಕ್ಕೋಬನಹಳ್ಳಿ, ಕೃಷ್ಣರಾಜಪುರ, ಗುಡ್ಡದಹಳ್ಳಿ, ದೇವಸಮುದ್ರ ಮೂಕಬಸಪ್ಪ ಕೆರೆ, ಕೋಟಲಗುಂದಿ ಕೆರೆಗಳು ನೀರು ಕಾಣದೇ ವರ್ಷಗಳು ಉರುಳಿವೆ.
ಇದರಲ್ಲಿ ಅನೇಕ ಕೆರೆಗಳಿಗೆ ಮೂಲವಾಗಿರುವ ರಂಗಯ್ಯನದುರ್ಗ ಜಲಾಶಯವೇ ಸರಿಯಾದ ನೀರಿನ ಮೂಲ ಇಲ್ಲದೇ ಭಣಗುಟ್ಟುತ್ತಿದೆ.
ಜಲಾಶಯಕ್ಕೆ ಸಮೀಪದ ಶಿಡ್ಲಹಳ್ಳ ತಿರುವು ಮಾಡುವ ಮೂಲಕ ಮಳೆಗಾಲದಲ್ಲಿ ಇಲ್ಲಿನ ಹಳ್ಳಕ್ಕೂ ಪರಿಣಾಮಕಾರಿಯಾಗಿ ನೀರುಣಿಸಲು ಸಾಧ್ಯವಿದೆ. ಈ ಬಗ್ಗೆ ಅನೇಕ ಬಾರಿ ಮನವರಿಕೆ ಮಾಡಿಕೊಡಲಾಗಿದೆ, ಸರ್ವೇ ಸಹ ಮಾಡಲಾಗಿದೆ. ಆದರೆ, ಕೆಲ ಪಟ್ಟಭದ್ರ ವ್ಯಕ್ತಿಗಳ ವಿರೋಧಕ್ಕೆ ಮಣೆ ಹಾಕಲಾಗುತ್ತಿದೆ ಎಂದು ಅಚ್ಚುಕಟ್ಟುದಾರ ಶ್ರೀನಿವಾಸ್ ದೂರುತ್ತಾರೆ.

ರಂಗಯ್ಯನ ದುರ್ಗ ಜಲಾಶಯಕ್ಕೆ ತುಂಗಭದ್ರಾ ಜಲಾಶಯ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವ ವಿಚಾರಗಳು ಆಗಾಗ್ಗೆ ಚರ್ಚೆಯಾಗುತ್ತಿರುತ್ತವೆ. ಆದರೆ ಈ ಎರಡೂ ಯೋಜನೆಗಳ ಪ್ರಕ್ರಿಯೆ ರಾಜಕೀಯ ರಹಿತವಾದಾಗ ಮಾತ್ರ, ಜಲಾಶಯಕ್ಕೆ ನೀರು ತರಲು ಸಾಧ್ಯತೆ ಊಹಿಸಬಹುದಾಗಿದೆ ಎಂದು ಸಿಪಿಐನ ಪಟೇಲ್ ಪಾಪನಾಯಕ ಹೇಳುತ್ತಾರೆ.

ಗಡಸು ನೀರು, ಟಿಡಿಎಸ್ ಹೆಚ್ಚು!: ನೀರಿನ ಮೂಲಗಳು ಬತ್ತಿ ಅಂತರ್ಜಲ 800 ಅಡಿಗೂ ದಾಟಿರುವ ಕಾರಣ ಲವಣಾಂಶ ಹೆಚ್ಚುತ್ತಿರುವ ನೀರು ಲಭ್ಯವಾಗಿ ಅನಾರೋಗ್ಯ ಸಮಸ್ಯೆ ಎದುರಾಗಿದೆ. ಕೃಷಿಗೆ ನೀರು ಕೇಳುತ್ತಿದ್ದ ಮಂದಿ ಈಗ ಕುಡಿಯುವ ನೀರು ಸಿಕ್ಕರೆ ಸಾಕಪ್ಪಾ ಎಂಬ ಸ್ಥಿತಿಗೆ ಬಂದಿದ್ದಾರೆ. ರಾಜಕಾರಣಿಗಳು ಸಹ ಇದನ್ನು ಚುನಾವಣೆ ಸಮಯಕ್ಕೆ ಸರಿಯಾಗಿಯೇ ಬಳಸಿಕೊಂಡು ನಂತರ ಕೈಕೊಡುವುದನ್ನು ಮುಂದು ವರಿಸಿದ್ದಾರೆ. 100–150 ಟಿಡಿಎಸ್ ಲವಣಾಂಶ ಇದ್ದಲ್ಲಿ ನೀರು ಕುಡಿಯಲು ಯೋಗ್ಯ ಆದರೆ ತಾಲ್ಲೂಕಿನ ವಿವಿದೆಡೆ 3000ಕ್ಕೂ ಹೆಚ್ಚು ಟಿಡಿಎಸ್‌ ದಾಖಲಾಗುವ ಮೂಲಕ ಬಿಸಿಲು, ಮಳೆಕೊರತೆ, ಮೂಲಸೌಕರ್ಯ ಕೊರತೆ ಮುಂದಿಟ್ಟು, ತಾಲ್ಲೂಕನ್ನು ಅಲ್ಲಗೆಳೆಯುತ್ತಿದ್ದ ಮಂದಿಗೆ ಲವಣಾಂಶ ನೀರು ಮತ್ತೊಂದು ನೂತನ ಸೇರ್ಪಡೆಯಾಗಿದೆ ಎನ್ನಲಾಗಿದೆ.

ಇದಕ್ಕೆ ಪರಿಹಾರವಾಗಿ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನೀರು ಶುದ್ಧೀಕರಣ ಘಟಕ ಆರಂಭಿಸಬೇಕು ಹಾಗೂ ಸರ್ಕಾರ ತುಂಗಭದ್ರಾ ಹಿನ್ನೀರು ಮೂಲಕ ಕುಡಿಯುವ ನೀರಿನ ಯೋಜನೆ ತ್ವರಿತ ಆರಂಭಕ್ಕೆ ಮುಂದಾಗಿ ಶಾಶ್ವತ ಕ್ರಮ ಕೈಗೊಳ್ಳಬೇಕು. ಇದಕ್ಕೆ ಕೂಡಲೇ ಸರ್ವೇ ಆರಂಭಿಸಬೇಕು ಎಂದು ಪಟೇಲ್‌ ಪಾಪನಾಯಕ ಆಗ್ರಹಿಸುತ್ತಾರೆ.

ಶೇ 50ಕ್ಕೂ ಹೆಚ್ಚು ನೀರಾವರಿ ಪ್ರದೇಶವನ್ನು ಈಗಾಗಲೇ ಬೀಳು ಬಿಡಲಾಗಿದೆ. ಏನಾದರೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಈಗ ಸಮಯ ಪಕ್ವವಾಗಿದೆ. ಇನ್ನೂ ನಿರ್ಲಕ್ಷ್ಯ ಮುಂದುವರಿದಲ್ಲಿ ಯಾವ ಕ್ರಮಗಳಿಂದಲೂ ತಾಲ್ಲೂಕಿಗೆ ಕೃಷಿಗೆ ಇರಲಿ ಕುಡಿಯುವ ನೀರು ಕೊಡಲು ಸಹ ಸಾಧ್ಯವಾಗದೇ ಇರಬಹುದು. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತು ಕೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.