ADVERTISEMENT

ಹಾಸ್ಟೆಲ್ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 6:35 IST
Last Updated 8 ಜೂನ್ 2011, 6:35 IST

ಹೊಳಲ್ಕೆರೆ: ಪಟ್ಟಣದ ಎಸ್‌ಸಿ, ಎಸ್‌ಟಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಸಿಬ್ಬಂದಿ ದೌರ್ಜನ್ಯ ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸುತ್ತಾರೆ. ಊಟ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅನ್ನದಲ್ಲಿ ಹುಳು ಮತ್ತು ಮುದ್ದೆಯಲ್ಲಿ ಕಲ್ಲುಗಳು ಸಿಗುತ್ತಿವೆ. ಈ ಬಗ್ಗೆ ಪ್ರಶ್ನಿಸಿದಾಗ ಬೇಕಾದರೆ ತಿನ್ನಿ, ಇಲ್ಲವೆ ಎದ್ದು ಹೋಗಿ ಎಂದು ಗದರಿಸುತ್ತಾರೆ. ಅವ್ಯವಸ್ಥೆಗಳ ಬಗ್ಗೆ ಪ್ರಶ್ನಿಸಿದರೆ, ಹಲ್ಲೆಗೆ ಮುಂದಾಗುತ್ತಾರೆ.

ಹೆಚ್ಚಿಗೆ ಮಾತನಾಡಿದರೆ ಬೆಂಬಲಿಗರನ್ನು ಕರೆಸಿ ಹೊಡೆಸುವುದಾಗಿ ಪ್ರಾಣ ಬೆದರಿಕೆ ಹಾಕುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. 

ಅಡುಗೆ ಭಟ್ಟರು ಕೂಡ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ. ಕೆಲವರು ಮದ್ಯಪಾನ ಮಾಡಿ ಬರುತ್ತಾರೆ. ಬಾಯಲ್ಲಿ ಗುಟ್ಕಾ ಹಾಕಿಕೊಂಡು ಅಸಹ್ಯಕರವಾಗಿ ಅಡುಗೆ ಬಡಿಸುತ್ತಾರೆ. ವಿದ್ಯಾರ್ಥಿಗಳಿಗೆ ಇರುವ ಕ್ರೀಡಾ ಸಾಮಗ್ರಿಗಳನ್ನು ತಮ್ಮ ಮಕ್ಕಳಿಗೆ ಕೊಟ್ಟಿದ್ದಾರೆ. ಊಟದ ಕೊಠಡಿ ಇಕ್ಕಟ್ಟಾಗಿದ್ದು, ಕಿರಿಕಿರಿ ಹುಟ್ಟಿಸುತ್ತದೆ. ವಾರ್ಡನ್ ಮತ್ತು ಭಟ್ಟರು ತಮ್ಮ ಸ್ವಂತ ಮನೆಯಿಂದ ಊಟ ಕೊಡುತ್ತಿದ್ದಾರೇನೋ, ಎಂಬಂತೆ ನಡೆದುಕೊಳ್ಳುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯುವ ಒಕ್ಕೂಟಗಳ ರಾಜ್ಯ ಘಟಕದ ಅಧ್ಯಕ್ಷ ಎ. ಚಿತ್ತಪ್ಪ ಮಾತನಾಡಿ, ಹಾಸ್ಟೆಲ್‌ಗೆ ಸ್ವಂತ ಕಟ್ಟಡ ಇಲ್ಲ. ಆದ್ದರಿಂದ, ವಾರ್ಡನ್ ತನ್ನ ಮನೆಯ ನೆಲ ಅಂತಸ್ತನ್ನು ಹಾಸ್ಟೆಲ್‌ಗೆ ಬಾಡಿಗೆ ನೀಡಿದ್ದಾರೆ. ಇಲ್ಲಿನ ಅವ್ಯವಸ್ಥೆಗಳಿಂದ ಅನೇಕ ವಿದ್ಯಾರ್ಥಿಗಳು ಊಟಕ್ಕೆ ಬರುತ್ತಿಲ್ಲ.
 
ಈ ಬಗ್ಗೆ ಸಮಾಜ ಕಲ್ಯಾಣ ಅಧಿಕಾರಿಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸುವ ವಾರ್ಡನ್ ಮತ್ತು ಅಡುಗೆ ತಯಾರಕರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿಗಳಾದ ಟಿ. ರಘು, ಜಗದೀಶ್, ರಾಜಪ್ಪ, ಸೋಮೇಶ್, ಅಶೋಕ, ಹರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.