ADVERTISEMENT

ಹಿರಿಯೂರು: ತುಕ್ಕು ಹಿಡಿಯುತ್ತಿರುವ ವಾಹನಗಳು

ನಾಗರಿಕರ ತೆರಿಗೆ ಹಣ ಪೋಲು–ಸಾರ್ವಜನಿಕರ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 11:09 IST
Last Updated 18 ಜೂನ್ 2018, 11:09 IST
ಹಿರಿಯೂರಿನ ಲಕ್ಕವ್ವನಹಳ್ಳಿ ರಸ್ತೆಯ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ತುಕ್ಕುಹಿಡಿಯುತ್ತ ನಿಂತಿರುವ ನಗರಸಭೆಯ ರೋಡ್ ಸ್ವೀಪರ್ ವಾಹನ.
ಹಿರಿಯೂರಿನ ಲಕ್ಕವ್ವನಹಳ್ಳಿ ರಸ್ತೆಯ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ತುಕ್ಕುಹಿಡಿಯುತ್ತ ನಿಂತಿರುವ ನಗರಸಭೆಯ ರೋಡ್ ಸ್ವೀಪರ್ ವಾಹನ.   

ಹಿರಿಯೂರು: ಹಾಳಾಗಿರುವ ಟ್ರ್ಯಾಕ್ಟರ್‌ ಜೆಸಿಬಿ, ನೋಂದಣಿ ಭಾಗ್ಯ ಕಾಣದೆ ನಿರುಪಯುಕ್ತವಾಗಿ ನಿಂತಿರುವ ಆಲ್ಫಾ ಪ್ಲಸ್ ವಾಹನಗಳು, ಮೂಲೆ ಸೇರಿದ ನಗರಸಭೆಯ ಪ್ರಕಟಣೆ ಪ್ರಚಾರ ಮಾಡುವ ಜೀಪ್...

ಇಲ್ಲಿನ ನಗರಸಭೆ ಕಟ್ಟಡದ ಹಿಂಭಾಗ ಮತ್ತು ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ನೀರು ಶುದ್ಧೀಕರಣ ಘಟಕದ ಆವರಣಕ್ಕೆ ಹೋಗಿ ನೋಡಿದರೆ ತುಕ್ಕುಹಿಡಿದು ನಿಂತಿರುವ ಇಂತಹ ಹತ್ತಾರು ವಾಹನಗಳು ನಮ್ಮ ಕಣ್ಣಿಗೆ ಬೀಳುತ್ತವೆ.

ನಗರಸಭೆ ನಾಗರಿಕರ ಹಣದಿಂದ ಖರೀದಿಸಿದ ವಾಹನಗಳು ಉಪಯೋಗಕ್ಕೆ ಬಾರದೇ ತುಕ್ಕು ಹಿಡಿದು ನಿಂತಿವೆ. ವರ್ಷದ ಹಿಂದೆ ಖರೀದಿಸಿರುವ 4 ಆಲ್ಫಾ ಪ್ಲಸ್ ನೋಂದಣಿಯಾಗದೆ ಬಿಸಿಲು, ಮಳೆ, ದೂಳಿಗೆ ಬಣ್ಣ ಕಳೆದುಕೊಳ್ಳುತ್ತಿದ್ದರೆ, ನಗರಸಭೆ ಪ್ರಕಟಣೆಗಳನ್ನು ಪ್ರಚಾರ ಮಾಡಲು ಮೈಕ್ ವ್ಯವಸ್ಥೆ ಇರುವ ಜೀಪು ಎರಡು ವರ್ಷಗಳಿಂದ ಬಳಕೆ ಮಾಡದೆ ತುಕ್ಕು ಹಿಡಿಯುತ್ತಿದೆ.

ADVERTISEMENT

‘ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ನಿಂತಿರುವ ದೈತ್ಯ ಗಾತ್ರದ ‘ರೋಡ್ ಸ್ವೀಪರ್’ ಅನ್ನು ಪುರಸಭೆಯವರು ಬೇಡಿಕೆ ಸಲ್ಲಿಸದೇ ಇದ್ದರೂ ಅಂದಿನ ಜಿಲ್ಲಾಧಿಕಾರಿ ಆದಿತ್ಯ ಬಿಸ್ವಾಸ್ ಅವರು ₹ 28 ಲಕ್ಷ ವೆಚ್ಚದ ಈ ವಾಹನವನ್ನು ಕಳುಹಿಸಿದ್ದರು’ ಎಂದು ನಗರಸಭೆ ಸಿಬ್ಬಂದಿ ಹೇಳುತ್ತಾರೆ. ಈ ವಾಹನ ಬಂದ ಹೊಸದರಲ್ಲಿ ಐದಾರು ಬಾರಿ ಪ್ರಧಾನ ರಸ್ತೆಯಲ್ಲಿನ ದೂಳು ಸೆಳೆಯಲು ಬಳಸಿದ್ದುಂಟು. ಮಿತಿಮೀರಿ ಇಂಧನ ಕುಡಿಯುತ್ತದೆ ಎಂಬ ಕಾರಣಕ್ಕೆ ಬಳಸದೆ ಬಿಟ್ಟಿದ್ದರಿಂದ ಗುಜರಿಗೆ ಹಾಕುವ ಮಟ್ಟಕ್ಕೆ ಹಾಳಾಗಿದೆ.

‘₹ 15 ಲಕ್ಷ ವೆಚ್ಚದ ಟ್ರ್ಯಾಕ್ಟರ್ ಜೆಸಿಬಿ ಕೂಡ ಸದ್ಬಳಕೆ ಮಾಡದೇ ತುಕ್ಕು ಹಿಡಿಯುತ್ತಿದೆ. ಪುರಸಭೆ ಅಧ್ಯಕ್ಷರು, ಮುಖ್ಯಾಧಿಕಾರಿ ಬಳಸುತ್ತಿದ್ದ ಜೀಪೊಂದು ಆವರಣದ ಒಂದು ಮೂಲೆಯಲ್ಲಿ ಬಿದ್ದಿದೆ. ₹ 10 ಲಕ್ಷ ಮೌಲ್ಯದ ಕಂಪ್ಯಾಕ್ಟ್ ಅನ್ನು 2 ವರ್ಷಗಳ ಹಿಂದೆ ಬೆಂಗಳೂರಿಗೆ ದುರಸ್ತಿಗೆ ಕಳುಹಿಸಲಾಗಿತ್ತು. ಈಗ ದುರಸ್ತಿ ಕಾರ್ಯ ಮುಗಿದಿದ್ದು, ಅದರ ಬಾಬ್ತು ₹ 4 ಲಕ್ಷ ಕೊಟ್ಟು ತರಬೇಕಿದೆ’ ಎಂದು ನಗರಸಭೆ ಮೂಲಗಳು ಹೇಳುತ್ತವೆ.

‘ನಗರಸಭೆಯವರು ಬೇಡಿಕೆ ಸಲ್ಲಿಸಿದರೂ ಕೇಳಿದ್ದನ್ನು ಕೊಡಲು ವರ್ಷಗಟ್ಟಲೆ ಅಲೆದಾಡಿಸುವ ಉನ್ನತ ಅಧಿಕಾರ ವರ್ಗ, ಕೇಳದೇ ಇದ್ದರೂ ಲಕ್ಷಾಂತರ ಮೌಲ್ಯದ ಕೆಲಸಕ್ಕೆ ಬಾರದ ವಾಹನಗಳನ್ನು ಕೊಟ್ಟಿರುವುದರ ಹಿಂದಿನ ರಹಸ್ಯವನ್ನು ತನಿಖೆ ಮೂಲಕ ಬಯಲಿಗೆ ತರಬೇಕಿದೆ. ಬಳಕೆ ಮಾಡದೇ ಬಿಟ್ಟಿರುವ ₹ 28 ಲಕ್ಷ ಮೌಲ್ಯದ ರೋಡ್ ಸ್ವೀಪರ್ ಖರ್ಚನ್ನು ಸರಬರಾಜು ಮಾಡಿದವರಿಂದ ವಸೂಲಿ ಮಾಡಬೇಕು. ಹೊಸ ವಾಹನ ಖರೀದಿಸಿದರೂ ನೋಂದಣಿ ಮಾಡಿಸದೆ ಇರುವ ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸಬೇಕು’ ಎಂಬುದು ರಾಜ್ಯ ನಿವೃತ್ತ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ನಾರಾಯಣಾಚಾರ್ ಒತ್ತಾಯ.

‘ತೇರುಮಲ್ಲೇಶ್ವರ ರಸ್ತೆ, ಚರ್ಚ್ ರಸ್ತೆ, ಗಾಂಧಿ ವೃತ್ತದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಎಂದು ಗೋಗರೆದರೂ ಅನುದಾನವಿಲ್ಲ ಎನ್ನುವ ನಗರಸಭೆ ಆಡಳಿತ ಇಷ್ಟೆಲ್ಲ ನಿರುಪಯುಕ್ತ ವಾಹನಗಳನ್ನು ಖರೀದಿಸಿರುವುದರ ಹಿಂದಿನ ಮರ್ಮ ಎಲ್ಲರಿಗೂ ಅರ್ಥವಾಗುವಂಥದ್ದು. ನಾಗರಿಕರ ತೆರಿಗೆ ಹಣದಲ್ಲಿ ಖರೀದಿಸಿರುವ ವಾಹನಗಳನ್ನು ಬಳಸದೆ ಬಿಟ್ಟಿರುವುದು ದೊಡ್ಡ ಲೋಪ’ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್. ಗಿರಿಧರ್ ಆರೋಪಿಸುತ್ತಾರೆ.

‘ನಗರಸಭೆ ಅನುಮೋದನೆ ನಂತರ ದುರಸ್ತಿ’

‘ನಗರದ ಸ್ವಚ್ಛತೆಗೆ ಕೆಲವೊಂದು ವಾಹನಗಳು ಬೇಕೇಬೇಕು. ಆದರೆ ರೋಡ್ ಸ್ವೀಪರ್ ಅನ್ನು ಏಕೆ ಕೊಟ್ಟಿದ್ದಾರೆ ಎಂದು ತಿಳಿದಿಲ್ಲ. ಉಳಿದಂತೆ ಅಲ್ಫಾ ಪ್ಲಸ್‌ಗಳು ಇಷ್ಟರಲ್ಲೇ ನೋಂದಣಿಯಾಗಲಿವೆ. ಪುರಸಭೆಯ ಜೀಪನ್ನು ಹರಾಜಿಗೆ ಇಟ್ಟಿದ್ದು, ಯಾರೂ ಖರೀದಿಸಲು ಮುಂದೆ ಬಾರದ ಕಾರಣ ಅಲ್ಲಿಯೇ ಉಳಿದಿದೆ. ಇನ್ನುಳಿದಂತೆ ತಿಳಿಸಿರುವ ವಾಹನಗಳು ರಿಪೇರಿಗೆ ಬಂದಿದ್ದು, ನಗರಸಭೆ ಕೌನ್ಸಿಲ್ ಅನುಮೋದನೆ ಕೊಟ್ಟ ನಂತರ ರಿಪೇರಿ ಮಾಡಿಸುತ್ತೇವೆ’ ಎಂದು ನಗರಸಭೆ ಎಂಜಿನಿಯರ್ ಫಿರೋಜ್ ಹೇಳುತ್ತಾರೆ.

–ಸುವರ್ಣ ಬಸವರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.