ADVERTISEMENT

ಹಿರಿಯೂರು: ಸಂತ್ರಸ್ತ ರೈತರ ಬಂಧನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2011, 9:00 IST
Last Updated 6 ನವೆಂಬರ್ 2011, 9:00 IST
ಹಿರಿಯೂರು: ಸಂತ್ರಸ್ತ ರೈತರ ಬಂಧನ
ಹಿರಿಯೂರು: ಸಂತ್ರಸ್ತ ರೈತರ ಬಂಧನ   

ಹಿರಿಯೂರು: ತಮಗೆ ಸೂಕ್ತ ಪರಿಹಾರ ನೀಡದ ಹೊರತು ಅನಿಲ ಕೊಳವೆ ಮಾರ್ಗ ನಿರ್ಮಾಣ ಕಾಮಗಾರಿ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಕಾಮಗಾರಿಗೆ ಅಡ್ಡಿ ಪಡಿಸಿದ ಸಂತ್ರಸ್ತ ರೈತರನ್ನು ಪೊಲೀಸರು ಬಂಧಿಸಿ ಕಾಮಗಾರಿ ನಡೆಸಿದ ಘಟನೆ ತಾಲ್ಲೂಕಿನ ಗಿಡ್ಡೋಬನಹಳ್ಳಿ ಸಮೀಪ ಶನಿವಾರ ನಡೆದಿದೆ.
ಅನಿಲ ಕೊಳವೆ ಮಾರ್ಗ ನಿರ್ಮಾಣದ ಗುತ್ತಿಗೆ ಪಡೆದಿರುವ ಗೇಲ್ ಕಂಪೆನಿ ಪೊಲೀಸ್ ಬೆಂಗಾವಲಿನಲ್ಲಿ

ಕಾಮಗಾರಿ ನಡೆಸಲು ಬಂದಾಗ, ಭೂಮಿ ಕಳೆದುಕೊಳ್ಳುವ ಗಿಡ್ಡೋಬನಹಳ್ಳಿ, ಮೇಟಿಕುರ್ಕೆ, ಗನ್ನಾಯಕನಹಳ್ಳಿ, ಮ್ಯಾಕ್ಲೂರಹಳ್ಳಿ, ಪಟ್ರೆಹಳ್ಳಿ, ಆದಿವಾಲ, ನಂದಿಹಳ್ಳಿ, ಬಬ್ಬೂರು, ಕೆ.ಆರ್. ಹಳ್ಳಿ ಮೊದಲಾದ ಗ್ರಾಮಗಳ ನೂರಾರು ರೈತರು ಕಾಮಗಾರಿ ನಡೆಸುತ್ತಿದ್ದ ಸ್ಥಳದಲ್ಲಿ ಜಮಾಯಿಸಿ, ಮೊದಲು ಪರಿಹಾರ ಚೆಕ್ ನೀಡಿ, ನಂತರ ಕಾಮಗಾರಿ ಆರಂಭಿಸಿ ಎಂದು ಒತ್ತಾಯ ಮಾಡಿದರು.

ಪ್ರತಿಭಟನೆ ನಿರತ ರೈತರ ಜತೆ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ವಾಣಪ್ಪ, ಉಪ ವಿಭಾಗಾಧಿಕಾರಿ ವೆಂಕಟೇಶ್, ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ, ಪೊಲೀಸ್ ಅಧೀಕ್ಷಕ ಎಂ.ಎನ್. ನಾಗರಾಜ್, ಡಿವೈಎಸ್ಪಿ  ಎನ್. ರುದ್ರಮುನಿ ಮತ್ತಿತರರು ನಡೆಸಿದ ಮಾತುಕತೆ ಸಫಲವಾಗಲಿಲ್ಲ.

ನ. 10 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸಭೆ ನಡೆಸೋಣ ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ನಂತರವೇ ಕಾಮಗಾರಿ ನಡೆಸಬೇಕು ಎಂದು ರೈತರು ಪಟ್ಟುಹಿಡಿದಾಗ, ಸುಮಾರು 70 ಜನರನ್ನು ಪೊಲೀಸರು ಬಂಧಿಸಿ, ಹಿರಿಯೂರಿನಲ್ಲಿ ಬಿಡುಗಡೆ ಮಾಡಿ, ಕಾಮಗಾರಿ ನಡೆಸಲು ಅವಕಾಶ ಮಾಡಿಕೊಟ್ಟರು.

ಸಂತ್ರಸ್ತ ರೈತರ ಬೇಡಿಕೆ: ಭೂ ಸ್ವಾಧೀನ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ತಮ್ಮ ಜತೆ ಬಂದು ಪರಿಹಾರ ಕುರಿತಂತೆ ಮಾತನಾಡಬೇಕು. ಆದರೆ ಇಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ ಗೇಲ್ ಕಂಪೆನಿಯ ಎಂಜಿನಿಯರ್‌ಗಳು ಮಧ್ಯಸ್ಥಿಕೆ ವಹಿಸಲು ಬರುತ್ತಾರೆ. ಅವರಿಗೆ ಯಾವುದೇ ಅಧಿಕಾರವಿಲ್ಲ.

ಕಾಮಗಾರಿ ನಡೆಸುವ ಮೂಲಕ ಸಕ್ಷಮ ಪ್ರಾಧಿಕಾರದವರು ಗದಗ ಜಿಲ್ಲೆಯಲ್ಲಿ ಮಾಡಿರುವಂತೆ ಮೊದಲು ಭೂಮಿಯ ಮೌಲ್ಯ ನಿಗದಿ ಪಡಿಸಬೇಕು. ನಂತರ ಅದಕ್ಕೆ ಐದು ಪಟ್ಟು ಹೆಚ್ಚು ಪರಿಹಾರ, ಶೇ. 30 ರಷ್ಟು ಸಲೋಷನ್, ಶೇ. 12 ರಷ್ಟು ಬಡ್ಡಿ ಜತೆಗೆ ಮರಗಿಡಗಳಿಗೆ, ಏರಿ ಬಾಬ್ತು ಪ್ರತ್ಯೇಕ ಪರಿಹಾರ ನೀಡಬೇಕೆಂಬ ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ಹೋರಾಟದ ನೇತೃತ್ವ ವಹಿಸಿರುವ ಕೃಷಿ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಜಿ.ಪಿ. ಯಶವಂತರಾಜು ಸುದ್ದಿಗಾರರಿಗೆ ತಿಳಿಸಿದರು.

ರೈತರ ಉಸಿರಾಗಿರುವ ಭೂಮಿಯಲ್ಲಿ ಮಾಲೀಕನ ಅನುಮತಿ ಇಲ್ಲದೆ, ವಿರೋಧವಿದ್ದರೂ ಲೆಕ್ಕಿಸದೆ ಪೊಲೀಸ್ ಶಕ್ತಿ ಬಳಸಿ ಕಾಮಗಾರಿ ನಡೆಸುತ್ತಿರುವುದು ಅತ್ಯಂತ ವಿಷಾದದ ಸಂಗತಿ. ನಮ್ಮ ಹಕ್ಕನ್ನು ಕೊಡಿ ಎಂದು ಕೇಳುವುದು ತಪ್ಪೇ? ನ. 10 ರಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ನಂತರ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುತ್ತೇವೆ. ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು ಎಂದು ಯಶವಂತರಾಜು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಎಂ.ಪಿ.ವಿ. ಸೋಮಲಿಂಗಾರೆಡ್ಡಿ, ಎಚ್. ರಾಜಶೇಖರಯ್ಯ, ಭರತ್‌ರೆಡ್ಡಿ, ತ್ರಿಯಂಭಕಮೂರ್ತಿ, ಪಟ್ರೆಹಳ್ಳಿ ಸೋಮಣ್ಣ, ನಂದಿಹಳ್ಳಿಯ ಬದರಿನಾಥ್, ನಾಗರಾಜ್, ವಡ್ಡರಂಗಪ್ಪ, ವೀರಣ್ಣ, ನಾಗರಾಜ್, ಕೃಷ್ಣಮೂರ್ತಿ, ಬಾಬು, ಜಿ.ಪಿ. ಶ್ರೀಧರ್, ಪ್ರಭುಪ್ರಸಾದ್, ಸಂಪತ್, ಡಿ.ಜಿ. ಮಲ್ಲಿಕಾರ್ಜುನ್, ರಮೇಶ್, ದಸ್ತಗೀರ್‌ಸಾಬ್, ಚಿತ್ತಪ್ಪ, ಕೇಶವಮೂರ್ತಿ, ಟಿ. ರಮೇಶ್, ಟಿ.ಎಸ್. ವೇಲುಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.