ADVERTISEMENT

ಹಿರೇಹಳ್ಳ ಸೇತುವೆಗೆ ರೂ1.5 ಕೋಟಿ ವೆಚ್ಚ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2011, 6:25 IST
Last Updated 31 ಆಗಸ್ಟ್ 2011, 6:25 IST
ಹಿರೇಹಳ್ಳ ಸೇತುವೆಗೆ ರೂ1.5 ಕೋಟಿ ವೆಚ್ಚ
ಹಿರೇಹಳ್ಳ ಸೇತುವೆಗೆ ರೂ1.5 ಕೋಟಿ ವೆಚ್ಚ   

ಹೊಳಲ್ಕೆರೆ: ರೂ 1.5 ಕೋಟಿ ವೆಚ್ಚದಲ್ಲಿ ರಾಮಗಿರಿ-ತಾಳಿಕಟ್ಟೆ ಮಧ್ಯದ ಹಿರೇಹಳ್ಳಕ್ಕೆ ಸೇತುವೆ ನಿರ್ಮಾಣ ಮತ್ತು ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ರಾಮಗಿರಿ ಸಮೀಪದ ಹಿರೇಹಳ್ಳ ಸೇತುವೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತೀ ವರ್ಷವೂ ರಾಮಗಿರಿ ಸಮೀಪದ ವಡೇರಹಳ್ಳಿ ಕೆರೆ ಕೋಡಿ ಬಿದ್ದು, ಹಿರೇಹಳ್ಳದಲ್ಲಿ ಪ್ರವಾಹ ಬರುತ್ತಿತ್ತು. ಇದರಿಂದ ರಾಮಗಿರಿಯಿಂದ ತಾಳಿಕಟ್ಟೆ, ತಾಳಿಕಟ್ಟೆ ಕಾವಲು, ತುಪ್ಪದಹಳ್ಳಿ, ದೇವರ ಹೊಸಹಳ್ಳಿ, ಹನುಮಲಿ ಮತ್ತಿತರ ಸುಮಾರು 30 ಹಳ್ಳಿಗಳ ಜನ ಹಳ್ಳ ದಾಟಲು ಕಷ್ಟ ಪಡುತ್ತಿದ್ದರು. ಈ ರಸ್ತೆ ಚನ್ನಗಿರಿ ಪಟ್ಟಣವನ್ನು ಸಂಪರ್ಕಿಸುವುದರಿಂದ ಆ ಭಾಗದ ಜನರೂ ಕಷ್ಟ ಅನುಭವಿಸುತ್ತಿದ್ದರು.

ತಾಳಿಕಟ್ಟೆ ತಾಲ್ಲೂಕಿನಲ್ಲೇ ಅತಿ ದೊಡ್ಡ ಗ್ರಾಮವಾಗಿದ್ದು, ಸುಮಾರು 2 ಸಾವಿರ ಮನೆಗಳಿವೆ. 15 ಸಾವಿರ ಜನಸಂಖ್ಯೆ ಇರುವ ಈ ಗ್ರಾಮದ ಜನ ರಾಮಗಿರಿ, ತಾಲ್ಲೂಕು ಕೇಂದ್ರ, ಚಿತ್ರದುರ್ಗ, ಹೊಸದುರ್ಗ ನಗರಗಳಿಗೆ ಇದೇ ಮಾರ್ಗವಾಗಿ ಬರಬೇಕು. ವಿದ್ಯಾರ್ಥಿಗಳು, ವ್ಯಾಪಾರಿಗಳಿಗೂ, ಸೇತುವೆ ಇಲ್ಲದೇ ತೊಂದರೆಯಾಗಿತ್ತು. ಆದರೆ, ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿನ ಜನರ ಸಮಸ್ಯೆಯ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ ಎಂದು ಹೇಳಿದರು.

ಇಲ್ಲಿನ ರೈತರು ಅಡಿಕೆ, ತೆಂಗು, ಈರುಳ್ಳಿ, ಮೆಣಸಿನ ಕಾಯಿ ಮತ್ತಿತರ ವಾಣಿಜ್ಯ ಬೆಳೆಗಳನ್ನು ಹೆಚ್ಚು ಬೆಳೆಯುತ್ತಿದ್ದು, ಕೃಷಿ ಉತ್ಪನ್ನಗಳನ್ನು ಮಳೆಗಾಲದಲ್ಲಿ ಮಾರುಕಟ್ಟೆಗೆ ಸಾಗಿಸಲು ಆಗುತ್ತಿರಲಿಲ್ಲ. ಶಾಲಾ ವಾಹನಗಳು, ಲಗೇಜ್ ಆಟೋ, ಟ್ರ್ಯಾಕ್ಟರ್, ಲಾರಿಗಳು ಅನೇಕ ಬಾರಿ ಹಳ್ಳದಲ್ಲಿ ಬಿದ್ದಿವೆ. ಹಳ್ಳದ ಎರಡೂ ಭಾಗದಲ್ಲಿ ಹೊಲಗಳಿದ್ದು, ರೈತರು ಬೇಸಾಯ, ಎತ್ತು, ಗಾಡಿ ದಾಟಿಸುವುದೇ ಕಷ್ಟವಾಗಿತ್ತು. ಇದನ್ನು ಮನಗಂಡು ಈಗ ಸುಸಜ್ಜಿತ ಸೇತುವೆ ನಿರ್ಮಿಸಲಾಗುತ್ತಿದೆ ಎಂದರು.

ಹೆಚ್ಚು ಮಳೆ ಬಂದರೆ ಹಳ್ಳದಲ್ಲಿ ನೀರು ಬಂದು, ಸೇತುವೆ ನಿರ್ಮಾಣಕ್ಕೆ ತೊಂದರೆ ಆಗಲಿದೆ. ಆದ್ದರಿಂದ, ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಗುತ್ತಿಗೆದಾರ ಬಲರಾಮ ರೆಡ್ಡಿ ಅವರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಪಾರ್ವತಮ್ಮ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೇಮಂತ ಕುಮಾರ್, ಬಿ. ಗಂಗಾಧರ್, ಡಿ.ಬಿ. ಕುಮಾರ್, ಮರುಳಸಿದ್ದಪ್ಪ, ಎಂಜಿನಿಯರ್ ರವಿಶಂಕರ್ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.