ADVERTISEMENT

ಹೊಂಡಗಳ ಒಡಲು ತುಂಬಿದ ಮಳೆನೀರು

ಗೋಪಾಲಸ್ವಾಮಿ ಹೊಂಡ ಭರ್ತಿ, ಜಲಮೂಲಗಳಿಗೆ ಜೀವಕಳೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 12:38 IST
Last Updated 3 ಜೂನ್ 2018, 12:38 IST
ಚಿತ್ರದುರ್ಗದಲ್ಲಿ ಎಲ್‌ಐಸಿ ಕಚೇರಿ ಸಮೀಪದ ಕೆಂಚಮಲ್ಲಪ್ಪ ಹೊಂಡ ಬಹುತೇಕ ತುಂಬಿದೆ. ನೀರಿನ ಮೇಲೆ ತ್ಯಾಜ್ಯ ತೇಲುತ್ತಿದೆ
ಚಿತ್ರದುರ್ಗದಲ್ಲಿ ಎಲ್‌ಐಸಿ ಕಚೇರಿ ಸಮೀಪದ ಕೆಂಚಮಲ್ಲಪ್ಪ ಹೊಂಡ ಬಹುತೇಕ ತುಂಬಿದೆ. ನೀರಿನ ಮೇಲೆ ತ್ಯಾಜ್ಯ ತೇಲುತ್ತಿದೆ   

ಚಿತ್ರದುರ್ಗ: ಬಿರುಗಾಳಿ, ಗುಡುಗು ಸಹಿತ ಶುಕ್ರವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ನಗರ ವ್ಯಾಪ್ತಿಯ ಬಹುತೇಕ ಹೊಂಡಗಳಿಗೆ ನೀರು ಹರಿದುಬಂದಿದ್ದು, ಜಲಮೂಲಗಳಿಗೆ ಜೀವಕಳೆ ಬಂದಿದೆ.

ಕೋಟೆ ಒಳಭಾಗದ ಗೋಪಾಲ ಸ್ವಾಮಿ ಹೊಂಡ ಭರ್ತಿಯಾಗಿದ್ದು, ನೀರು ಹರಿಯುತ್ತಿದೆ. ತಣ್ಣೀರು ದೋಣಿ ಮೂಲಕ ಸಿಹಿ ನೀರಿನ ಹೊಂಡ ಸೇರುತ್ತಿದೆ. ಎಲ್‌ಐಸಿ ಕಚೇರಿ ಸಮೀಪದ ಕೆಂಚಮಲ್ಲಪ್ಪ ಹೊಂಡ ಬಹುತೇಕ ತುಂಬಿದೆ. ಉಳಿದ ಹೊಂಡಗಳಿಗೂ ಸ್ವಲ್ಪ ಪ್ರಮಾಣದ ನೀರು ಬಂದಿದೆ.

ದಿನ ಬಿಟ್ಟು ದಿನ ಸುರಿಯುತ್ತಿರುವ ಮಳೆಯಿಂದ ವಾತಾವರಣ ಸಂಪೂರ್ಣ ಬದಲಾಗಿದೆ. ವರ್ಷಧಾರೆಯ ಆಗಮನ ಜನರಲ್ಲಿಯೂ ಹರ್ಷ ಮೂಡಿಸಿದೆ. ಕೊಳಚೆ ನೀರು ಕೊಚ್ಚಿಹೋಗಿ ಬಹುತೇಕ ಚರಂಡಿಗಳು ಶುಚಿಯಾಗಿವೆ.

ADVERTISEMENT

ಜೋಗಿಮಟ್ಟಿ ರಸ್ತೆಯ ಸುತ್ತಲಿನ ಪ್ರದೇಶದಲ್ಲಿ ಬಿದ್ದ ಮಳೆನೀರು ಎಲ್‌ಐಸಿ ಕಚೇರಿ ಸಮೀಪದ ಹೊಂಡ ಸೇರಿದೆ. ಹಿಂಗಾರು ಮಳೆಗೆ ತುಂಬಿದ್ದ ಈ ಹೊಂಡದ ನೀರಿನ ಮಟ್ಟ ಬೇಸಿಗೆಯಲ್ಲಿ ಕುಸಿದಿತ್ತು. ಶುಕ್ರವಾರ ರಾತ್ರಿಯ ಮಳೆಗೆ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂತರ್ಜಲ ವೃದ್ಧಿಸಿ ಕೊಳವೆ ಬಾವಿಗಳಿಗೆ ಅನುಕೂಲವಾಗಲಿದೆ.

ಚೆನ್ನಕೇಶವಸ್ವಾಮಿ ಕಲ್ಯಾಣಿ, ಸಿಹಿನೀರು ಹೊಂಡಗಳಿಗೆ ನಿರೀಕ್ಷಿತ ಪ್ರಮಾಣದ ಮಳೆ ನೀರು ಹರಿದುಬಂದಿಲ್ಲ. ಮುನ್ಸಿಪಲ್‌ ಕಾಲೊನಿಯ ಗಣಪತಿ ದೇಗುಲದ ಹಿಂಭಾಗದ ಪುರಾತನ ಬಾವಿಗೂ ನೀರು ಬಂದಿದೆ. ಚರಂಡಿ ನೀರು ಬಾವಿಯ ಒಡಲು ಸೇರಿದೆ. ವರ್ಷದ ಹಿಂದೆ ಈ ಬಾವಿಯೂ ಸೇರಿ ಹಲವು ಹೊಂಡಗಳನ್ನು ನಗರಸಭೆ ವತಿಯಿಂದ ಶುಚಿಗೊಳಿಸಲಾಗಿತ್ತು.

ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಆರಂಭವಾದ ಮಳೆ ಸಮಯ ಕಳೆದಂತೆ ಬಿರುಸುಗೊಂಡಿತು. ಸುಮಾರು ಎರಡು ಗಂಟೆ ನಿರಂತರವಾಗಿ ಸುರಿದ ಮಳೆಗೆ ಚರಂಡಿಗಳು ತುಂಬಿಹರಿದವು. ಕೆಲವೆಡೆ ತ್ಯಾಜ್ಯ ತುಂಬಿಕೊಂಡಿದ್ದರಿಂದ ಚರಂಡಿಗಳು ಉಕ್ಕಿ ರಸ್ತೆ ಮೇಲೆ ನೀರು ಹರಿಯಿತು.

ಆರ್‌ಟಿಒ ಕಚೇರಿ ಸಮೀಪದ ಸರ್ವಿಸ್‌ ರಸ್ತೆಯ ಮೇಲೆ ನೀರು ಹರಿಯಿತು. ಮಳೆ ನಿಂತರೂ ರಸ್ತೆಯ ಮೇಲಿನ ನೀರಿನ ಹರಿವು ಕಡಿಮೆಯಾಗದ ಪರಿಣಾಮ ವಾಹನ ಸವಾರರು ನೀರಿನಲ್ಲಿಯೇ ಸಾಗಿದರು. ಮಹಾತ್ಮ ಗಾಂಧಿ ವೃತ್ತದ ಬಿ.ಡಿ.ರಸ್ತೆಯ ಎರಡೂ ಬದಿಯಲ್ಲಿಯೇ ಕೊಳಚೆ ಸಂಗ್ರಹವಾಗಿದೆ. ಶನಿವಾರ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ಕಿರಿಕಿರಿ ಅನುಭವಿಸಿದರು.

ದಾವಣಗೆರೆ ರಸ್ತೆಯ ಕರ್ನಾಟಕ ಪೆಟ್ರೋಲ್‌ ಬಂಕ್‌ ಸಮೀಪದ ಗುಮಾಸ್ತರ ಕಾಲೊನಿಗೆ ನೀರು ನುಗ್ಗಿತ್ತು. ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿ 2 ಗಂಟೆಯವರೆಗೂ ಸ್ಥಳೀಯರು ತೊಂದರೆ ಅನುಭವಿಸಿದರು.

ನೀರಿನಲ್ಲಿ ತೇಲುತ್ತಿದೆ ತ್ಯಾಜ್ಯ

ತುಂಬಿ ಹರಿದ ಚರಂಡಿಯಲ್ಲಿ ಮಳೆನೀರಿನೊಂದಿಗೆ ಕೊಳಚೆಯೂ ಹೊಂಡಗಳನ್ನು ಸೇರಿದೆ. ರಸ್ತೆ ಹಾಗೂ ಚರಂಡಿಯಲ್ಲಿದ್ದ ತಾಜ್ಯ ನೀರಿನಲ್ಲಿ ಕೊಚ್ಚಿ ಹೊಂಡದ ಒಡಲು ತುಂಬಿದೆ. ಬಹುತೇಕ ಹೊಂಡಗಳ ನೀರಿನ ಮೇಲೆ ತೇಲುತ್ತಿರುವ ಕಸ ಕಣ್ಣಿಗೆ ರಾಚುತ್ತಿದೆ. ಕಸ ತುಂಬಿದ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳು ಹೊಂಡದಲ್ಲಿ ಕಾಣುತ್ತಿವೆ. ಪ್ಲಾಸ್ಟಿಕ್‌ ಬಾಟಲಿ, ಚಪ್ಪಲಿ, ತೆಂಗಿನ ಕಾಯಿ ಚಿಪ್ಪು, ಮದ್ಯದ ಬಾಟಲಿಗಳೂ ಇಲ್ಲಿವೆ. ಹೊಂಡದಿಂದ ಇವನ್ನು ಹೊರತೆಗೆಯದೇ ಇದ್ದರೆ, ನೀರು ಕಲುಷಿತಗೊಳ್ಳುವ ಸಾಧ್ಯತೆ ಇದೆ. ಈ ದುರ್ವಾಸನೆ ಸುತ್ತಲಿನ ಪ್ರದೇಶಕ್ಕೆ ಹರಡಬಹುದು.

ಚಿತ್ರದುರ್ಗ: 63 ಮಿ.ಮೀ ಮಳೆ

ಚಿತ್ರದುರ್ಗ: ನಗರದಲ್ಲಿ 63 ಮಿ.ಮೀ ಮಳೆಯಾಗಿದ್ದು, ಶುಕ್ರವಾರ ಜಿಲ್ಲೆಯಲ್ಲಿ ಸುರಿದ ಮಳೆಯಲ್ಲಿಯೇ ಇದು ಅತಿ ಹೆಚ್ಚು ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿ ಚದುರಿದಂತೆ ಮಳೆಯಾಗಿದ್ದು, ಕೆಲವೆಡೆ ಉತ್ತಮವಾಗಿ ಸುರಿದಿದೆ. ಶ್ರೀರಾಂಪುರ, ಐನಹಳ್ಳಿಯಲ್ಲಿ 60, ಚಿಕ್ಕಜಾಜೂರಿನಲ್ಲಿ 42, ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ 41, ಬಿ.ದುರ್ಗದಲ್ಲಿ 40 ಮಿ.ಮೀ ಮಳೆಯಾಗಿದೆ. ಮಾಡದಕೆರೆ 35, ಹೊಳಲ್ಕೆರೆ 24, ಈಶ್ವರಗೆರೆ 19, ಬಬ್ಬೂರು 17, ಹಿರಿಯೂರು 15, ಚಳ್ಳಕೆರೆ 12, ಮೊಳಕಾಲ್ಮುರು ತಾಲ್ಲೂಕಿನಲ್ಲಿ 3 ಮಿ.ಮೀ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.