ADVERTISEMENT

ಹೊಸದುರ್ಗ: ಮಳೆಗೆ ಎಂಟು ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 6:48 IST
Last Updated 15 ಅಕ್ಟೋಬರ್ 2017, 6:48 IST

ಹೊಸದುರ್ಗ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲೆಡೆ ಶುಕ್ರವಾರ ಸುರಿದ ಧಾರಾಕಾರ ಮಳೆಗೆ 8 ಮನೆಗಳಿಗೆ ಹಾನಿಯಾಗಿದೆ. ತಾಲ್ಲೂಕಿನ ವಿವಿಧೆಡೆ ರಾತ್ರಿಯಿಡೀ ಜಿಟಿ ಜಿಟಿ ಮಳೆ ಸುರಿಯಿತು. ಮತ್ತೋಡು ಹೋಬಳಿ ನಾಗತಿಹಳ್ಳಿಯ ಚಂದ್ರಪ್ಪ, ಇಂದೇದೇವರಹಟ್ಟಿಯ ಸಣ್ಣಕರಿಯಪ್ಪ, ಹಳೇತಿಮ್ಮಪ್ಪನಹಟ್ಟಿಯ ರತ್ನಮ್ಮ, ಇಟಿಗೇಹಳ್ಳಿಯ ರಂಗಜ್ಜ, ತಾರೀಕೆರೆಯ ಗೋವಿಂದಪ್ಪ, ಮೈಲಾರಪ್ಪ, ಮಾಡದಕೆರೆ ಹೋಬಳಿ ಕೆರೆಕನಹಟ್ಟಿಯ ರಾಧಮ್ಮ ಹಾಗೂ ಶ್ರೀರಾಂಪುರ ಹೋಬಳಿ ಹೆಗ್ಗೆರೆಯ ರಂಗಪ್ಪ ಅವರಿಗೆ ಸೇರಿದ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನದವರೆಗೆ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು. ಮಳೆಯ ಆರ್ಭಟಕ್ಕೆ ಬಹುತೇಕ ಚೆಕ್‌ ಡ್ಯಾಂ, ಬ್ಯಾರೇಜ್‌, ಗೋಕಟ್ಟೆ, ಕೃಷಿಹೊಂಡಗಳು ತುಂಬಿ ಹರಿಯುತ್ತಿವೆ.

ಬಾಗೂರು, ಶ್ರೀರಂಗಪುರ, ನೀರಗುಂದ, ದೇವಪುರ, ಜಾನಕಲ್ಲು, ಬೋಕಿಕೆರೆ, ಬೆಲಗೂರು ಸೇರಿದಂತೆ ಇನ್ನಿತರ ಕೆರೆಗಳಿಗೆ ನೀರು ಹರಿದು ಬಂದಿದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ಇರುವ ತೆಂಗು, ಅಡಿಕೆ, ಬಾಳೆ ತೋಟ ಹಾಗೂ ರಾಗಿ, ಸಾವೆ ಬೆಳೆಗಳಲ್ಲಿ ಸಾಕಷ್ಟು ನೀರು ನಿಂತಿದೆ.

ADVERTISEMENT

‘ಹಳೇಕುಂದೂರು, ಗೊಲ್ಲರಹಟ್ಟಿ, ಶ್ರೀರಂಗಪುರ ಇನ್ನಿತರ ಕಡೆ ಮುಂಗಾರಿನಲ್ಲಿ ನೀರಾವರಿ ಆಶ್ರಿತವಾಗಿ ಬೆಳೆದಿದ್ದ ಈರುಳ್ಳಿ ಬೆಳೆಗೆ ತೇವಾಂಶ ಹೆಚ್ಚಾಗಿದ್ದು, ರೋಗಬಾಧೆಗೆ ತುತ್ತಾಗುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ.

ಅಷ್ಟೆ ಅಲ್ಲದೆ ಕಳೆದ ಒಂದೂವರೆ ತಿಂಗಳಿನಿಂದ ಆಗಾಗ ಬರುತ್ತಿದ್ದ ಹದ ಮಳೆಗೆ ಹುಲುಸಾಗಿ ಬೆಳೆದಿದ್ದ ರಾಗಿ ಬೆಳೆಯು ಬಿರುಸಿನ ಮಳೆಗೆ ನೆಲಕ್ಕುರುಳುವ ಚಿಂತೆ ಕಾಡುತ್ತಿದೆ’ ಎನ್ನುತ್ತಾರೆ ರೈತರಾದ ತಿಪ್ಪೇಶಪ್ಪ, ರಂಗಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.