ADVERTISEMENT

ಹೊಸದುರ್ಗ: ಮಳೆಯಿಂದ 6 ಮನೆಗಳಿಗೆ ಹಾನಿ

ಕೋಟೆ ಭೈರಪ್ಪನ ಬೆಟ್ಟದಿಂದ ಕೊಚ್ಚಿಕೊಂಡು ಬಂದ ಮಣ್ಣು, ಕಟ್ಟಿಕೊಂಡ ಚರಂಡಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 7:02 IST
Last Updated 5 ಅಕ್ಟೋಬರ್ 2017, 7:02 IST

ಹೊಸದುರ್ಗ: ತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಮಳೆಗೆ ಮಾಡದಕೆರೆ ಹೋಬಳಿಯಲ್ಲಿ 3 ಹಾಗೂ ಶ್ರೀರಾಂಪುರದಲ್ಲಿ 3 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಮಾಡದಕೆರೆ ಹೋಬಳಿ ಲಕ್ಕಿಹಳ್ಳಿ ಗ್ರಾಮದ ಗೌರಮ್ಮ ಹನುಮಂತಪ್ಪ, ಅನಿತಾ ಮುದ್ದಪ್ಪ, ಸಣ್ಣಕಿಟ್ಟದಹಳ್ಳಿಯ ದೇವಮ್ಮ ಚಿಕ್ಕಪ್ಪ ಹಾಗೂ ಶ್ರೀರಾಂಪುರದ ಲಕ್ಷ್ಮಮ್ಮ ರೇವಣ್ಣ, ಪದ್ಮಮ್ಮ ಮಹಲಿಂಗಪ್ಪ, ದೇವಣ್ಣ ಮರಿಯಪ್ಪ ಅವರಿಗೆ ಸೇರಿದ ಹಳೆಯ ಮನೆಗಳಿಗೆ ಹಾನಿಯಾಗಿದೆ. ಐದಾರು ದಿನದಿಂದ ಆಗಾಗ ಮಳೆ ಬರುತ್ತಿರುವುದರಿಂದ ಈ ರೀತಿಯಾಗಿದೆ.

ಎಲ್ಲಿಯೂ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಂಗಳವಾರ ಹೊಸದುರ್ಗ 8.6 ಮಿ.ಮೀ, ಬಾಗೂರು 6.5 ಮಿ.ಮೀ, ಮತ್ತೋಡು 25.6 ಮಿ.ಮೀ, ಮಾಡದಕೆರೆ 6 ಮಿ.ಮೀ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 46.7 ಮಿ.ಮೀ ಮಳೆಯಾಗಿದೆ ಎಂದು ತಾಲ್ಲೂಕು ಆಡಳಿತದ ಮಳೆ ಮಾಪನ ವಿಭಾಗ ಮಾಹಿತಿ ತಿಳಿಸಿದೆ.

ADVERTISEMENT

ಪಟ್ಟಣದ ಕೋಟೆ ಬಡಾವಣೆಯ ಶ್ರೀರಾಮದೇವರ ಬೀದಿಯ ಕೆಲವು ಮನೆಗಳಿಗೆ ಮತ್ತೆ ಚರಂಡಿಯ ಕೊಳಚೆ ನೀರು ನುಗ್ಗುವಂತಾಗಿದೆ. 20 ದಿನಗಳ ಹಿಂದೆ ಈ ರೀತಿ ಅವಘಡ ಸಂಭವಿಸಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಸ್ಥಳೀಯ ಪುರಸಭೆ ನೂರಾರು ಮಂದಿ ಕಾರ್ಮಿಕರನ್ನು ಇಟ್ಟುಕೊಂಡು ಇಲ್ಲಿನ ಭೈರಪ್ಪನ ಬೆಟ್ಟದಿಂದ ಹರಿದು ಇಲ್ಲಿಗೆ ಬಂದಿದ್ದ ಮಣ್ಣನ್ನು ತೆಗೆಸಿ, ಕಟ್ಟಿಕೊಂಡಿದ್ದ ಚರಂಡಿ ಸ್ವಚ್ಛಗೊಳಿಸಿತ್ತು. ಬೆಟ್ಟದ ಮೇಲಿಂದ ಮನೆಗಳ ಕಡೆಗೆ ನೀರು ಹರಿದು ಬರದಂತೆ ಟ್ರಂಚ್‌ ಹೊಡೆದು, ಮರಳಿನ ಚೀಲಗಳನ್ನು ಜೋಡಿಸಲಾಗಿತ್ತು.
ಈ ಕಾರ್ಯ ವಿಫಲವಾಗಿದ್ದು, ಮತ್ತೆ ಬೆಟ್ಟದ ಮೇಲಿಂದ ಸಾಕಷ್ಟು ಮಣ್ಣು ಹರಿದು ಬಂದಿದ್ದು, ಇಲ್ಲಿನ ಚರಂಡಿ ಕಟ್ಟಿಕೊಂಡಿದೆ. ಮಳೆ ಬಂದ ತಕ್ಷಣ ಕೊಳಚೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಪುರಸಭೆ ಮುಂದಾಗಬೇಕು ಎಂದು ಸ್ಥಳೀಯ ನಿವಾಸಿಗಳಾದ ಪಾರ್ವತಮ್ಮ, ಗೀತಮ್ಮ, ನಾಗರಾಜು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.